ದೇವ ಮಂದಿರಗಳು ಭಾರತದ ಅಸ್ಮಿತೆ ಧರ್ಮ ಜಾಗೃತಿ ಸಭೆಯಲ್ಲಿ ಹರಿನಾರಾಯಣ ಅಸ್ರಣ್ಣ ಹೇಳಿಕೆ

Mng-aug22-townhall1
Published on

ಮಂಗಳೂರು: ಭಾರತೀಯತೆ ನಮ್ಮ ಧರ್ಮ. ದೇವ ಮಂದಿರಗಳು ಭಾರತದ ಅಸ್ಮಿತೆ. ಧಾರ್ಮಿಕ ಕೇಂದ್ರಗಳ ವಿರುದ್ಧ ಅಪಪ್ರಚಾರ ನಡೆಸುವುದನ್ನು ಸಹಿಸಲಾಗದು. ಸಮಸ್ತ ಹಿಂದೂಗಳು ಒಗ್ಗಟ್ಟಾಗಿ ಇದನ್ನು ವಿರೋಧಿಸಬೇಕು ಎಂದು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಹರಿನಾರಾಯಣ ಅಸ್ರಣ್ಣ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಗುರಿಯಾಗಿಸಿ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ, ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಶುಕ್ರವಾರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಧರ್ಮ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸ್ತುತ ನಡೆಯುತ್ತಿರುವುದು ಕೇವಲ ಧರ್ಮಸ್ಥಳದ ಮೇಲಿನ ಅಪಚಾರವಲ್ಲ, ಸಮಸ್ತ ಹಿಂದೂಗಳ ಮೇಲಿನ ಅಪಚಾರ. ಈ ಹಿಂದೆ ಕಟೀಲು ದೇವಳದ ಮೇಲೂ ಅಪಪ್ರಚಾರ ನಡೆದಿತ್ತು. ನಾವು ಅದರ ವಿರುದ್ಧ ಹೋರಾಟ ಮಾಡಿ ಗೆದ್ದೆವು. ಇಂದು ಧರ್ಮಸ್ಥಳ, ನಾಳೆ ಉಡುಪಿ, ಕಟೀಲು ದೇವಸ್ಥಾನಗಳ ಮೇಲೂ ಇವರು ದಾಳಿ ಮಾಡಬಹುದು. ನಾವೆಲ್ಲರೂ ಇದನ್ನು ವಿರೋಧಿಸಬೇಕು ಎಂದರು.

* ಪಿಎಫ್‌ಐ, ಮುಸ್ಲಿಂ ಲೀಗ್ ಷಡ್ಯಂತ್ರ

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಲಪುರಂ ಜಿಲ್ಲೆ ಮಾಡಲು ಷಡ್ಯಂತ್ರ ನಡೆದಿದೆ. ಇದರ ಹಿಂದೆ ಪಿಎಫ್‌ಐ, ಮುಸ್ಲಿಂ ಲೀಗ್ ಕೈವಾಡವಿದೆ. ಇದನ್ನು ಬಯಲಿಗೆಳೆಯಲು ಎನ್‌ಐಎ, ಸಿಬಿಐ, ಇಡಿ ತನಿಖೆಯಾಗಬೇಕು. ಶ್ರೀ ಕ್ಷೇತ್ರದ ಶಕ್ತಿಗಳಾದ ಮಂಜುನಾಥ, ಅಣ್ಣಪ್ಪ ಸ್ವಾಮಿ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ನ್ಯಾಯ ದೊರಕಿಸಲು ಧರ್ಮಸ್ಥಳ ಆಪರೇಷನ್ ಆಗಬೇಕು. ಖಾಕಿ, ಖಾದಿ, ಕಾವಿ ಒಟ್ಟಾಗಬೇಕಿದೆ ಎಂದು ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಆಗ್ರಹಿಸಿದರು.

ಮುಸುಕುಧಾರಿ ನ್ಯಾಯಾಲಯಕ್ಕೆ ತಂದು ಕೊಟ್ಟ ತಲೆ ಬುರುಡೆಯ ತನಿಖೆಯಾಗಬೇಕು. ಒಂದು ತಿಂಗಳಾದರೂ ಎಫ್‌ಎಸ್‌ಎಲ್ ಆಗಿಲ್ಲ. ಆತ ಸುಳ್ಳುಗಾರ ಎಂಬುದನ್ನು ಆತನ ಪತ್ನಿಯೇ ಬಹಿರಂಗ ಪಡಿಸಿದ್ದಾರೆ. ಜೈಲ್‌ಗೆ ಹೋದ ಹೋರಾಟಗಾರರು ಅಲ್ಲಿಯೇ ಇದ್ದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದವರು ಹೇಳಿದರು.

ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ, ಹಿಂದೂ ಸಮಾಜಕ್ಕೆ, ಧರ್ಮಕ್ಕೆ, ಸಂಸ್ಕೃತಿಗೆ, ಮೌಲ್ಯಗಳಿಗೆ ಧಕ್ಕೆ ಬಂದಾಗ ವಿಶ್ವ ಹಿಂದೂ ಪರಿಷತ್ ಹಾಗೂ ಪರಿವಾರ ಸಂಘಟನೆಗಳು ಹೋರಾಟ ನಡೆಸಿವೆ. ಮುಂದೆಯೂ ನ್ಯಾಯ ಸಿಗುವ ತನಕ ಹೋರಾಟ ನಡೆಯುತ್ತದೆ ಎಂದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿ, ಭಾರತ ರಾಜಗುರುವಾಗುವತ್ತ ಹೊರಟಿರುವುದನ್ನು ತಪ್ಪಿಸಲು ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ಷಡ್ಯಂತ್ರ ನಡೆದಿದೆ. ಇದಕ್ಕೆ ಬರುತ್ತಿರುವ ವಿದೇಶಿ ಹಣಕಾಸು ನೆರವು ಬಗ್ಗೆ ತನಿಖೆಯಾಗಬೇಕು ಎಂದರು.

ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡರುಗಳಾದ ರತ್ನಾಕರ ಜೈನ್, ಶರವು ರಾಘವೇಂದ್ರ ಶಾಸ್ತ್ರಿ, ಹರಿಕೃಷ್ಣ ಪುನರೂರು, ಅರುಣ್ ಐತಾಳ್, ಉದಯ ಪೂಜಾರಿ, ಭುವನಾಭಿರಾಮ ಉಡುಪ, ಕೆ.ಸಿ.ನಾಯಕ್, ಶರಣ್ ಪಂಪುವೆಲ್, ಮೋನಪ್ಪ ಭಂಡಾರಿ, ಸಂತೋಷ್ ಕುಮಾರ್ ಬೋಳಿಯಾರ್, ಶ್ರೀಧರ ಹೊಳ್ಳ ಮೊದಲಾದವರಿದ್ದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net