ಅ.29ರಂದು ಹಾಸನಾಂಬಾ ದೇವಿ ದರ್ಶನ

ಡಿಸಿ ಲತಾಕುಮಾರಿ
ಡಿಸಿ ಲತಾಕುಮಾರಿ
Published on

ಪ್ರಮುಖ ಮುಖ್ಯಾಂಶಗಳು

  • ಅ.29ರಂದು ಹಾಸನಾಂಬಾ ದೇವಿ ದರ್ಶನ
  • ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲತಾಕುಮಾರಿ ಮಾಹಿತಿ
  • ಜಾತ್ರೆಗೆ ಸಕಲ ಸಿದ್ಧತೆ ಕೈಗೊಳ್ಳಲು ಸೂಚನೆ

ಹಾಸನ:

ಶ್ರೀ ಹಾಸನಾಂಬಾ ದೇವಿ ದರ್ಶನವನ್ನು ಭಕ್ತರಿಗೆ ಸುರಕ್ಷಿತ ಹಾಗೂ ಸುಗಮವಾಗಿ ಕಲ್ಪಿಸಲು ಅಗತ್ಯ ಸಿದ್ಧತೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಲತಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಶ್ರೀ ಹಾಸನಾಂಬಾ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಕುರಿತು ಪೂರ್ವ ಸಿದ್ಧತಾ ಸಭೆ ನಡೆಸಿ ಮಾತನಾಡಿದ ಅವರು, ಈ ಬಾರಿ ಅ.29ರಂದು ದೇವಾಲಯದ ಬಾಗಿಲನ್ನು ತೆರೆಯಲಾಗುವುದು ನ.11ರಂದು ಬಾಗಿಲು ಮುಚ್ಚಲಾಗುವುದು ಎಂದು ತಿಳಿಸಿದರು.

2025ರಲ್ಲಿ ನಡೆದ ಜಾತ್ರಾ ಮಹೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಂತೆ ಅತ್ಯಂತ ಯಶಸ್ವಿಯಾಗಿ ನಡೆಸಲು ಶಿಸ್ತು ಹಾಗೂ ನಿಯಮಬದ್ಧವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಶ್ರಮವಹಿಸಿದ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದ ಜಿಲ್ಲಾಧಿಕಾರಿ, ಈ ವರ್ಷವೂ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಕಳೆದ ವರ್ಷ ಆಗಿದ್ದ ಸಣ್ಣಪುಟ್ಟ ನ್ಯೂನ ಸರಿಪಡಿಸಿಕೊಂಡು ಮುನ್ನಡೆಯಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದೇವಿ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆಯನ್ನು ನಿಖರವಾಗಿ ಹೇಳಲು ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ಜತೆಗೆ ಇತರ ಮೂಲಗಳಿಂದಲು ಮಾಹಿತಿ ಪರಿಗಣಿಸಲು ಒಂದು ಸಮಿತಿ ರಚನೆ ಮಾಡಲು ತಿಳಿಸಿದರು.
ಕಡಿಮೆ ಅವಧಿಯಲ್ಲಿ ಲಕ್ಷಾಂತರ ಭಕ್ತರಿಗೆ ದೇವಿ ದರ್ಶನ ಮಾಡಿಸುವ ಜತೆಗೆ ಮೂಲಸೌಕರ್ಯ ಕಲ್ಪಿಸುವುದು ಸವಾಲಿನ ಕೆಲಸ. ಆದ್ದಾಗ್ಯೂ ಎಲ್ಲ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸವೇಕು ಎಂದರು.
ಕಳೆದ ವರ್ಷ ಆರೋಗ್ಯ ಇಲಾಖೆ ಸಿಬ್ಬಂದಿ ಭಕ್ತರಿಗೆ ತಕ್ಷಣ ಸ್ಪಂದಿಸಿ ಆರೋಗ್ಯ ಸೇವೆ ಒದಗಿಸಿರುವ ಬಗ್ಗೆ ಭಕ್ತರೇ ಮೆಚ್ಚಿದ್ದರು. ಈ ಬಾರಿಯೂ ಅದೇ ರೀತಿ ಸೇವೆ ಸಲ್ಲಿಸಲು ಕ್ರಮವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸೂಚಿಸಿದರು.
ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾವಯವ ಉತ್ಪನ್ನಗಳ ಬಳಕೆಗೆ ಉತ್ತೇಜನ ನೀಡಲು ಸಾವಯವ ಮೇಳ, ಶ್ವಾನ ಪ್ರದರ್ಶನ, ಪಾಕ ಸ್ಪರ್ಧೆ ಏರ್ಪಡಿಸಲು ತಿಳಿಸಿದರು.
ಜಿಲ್ಲೆಯ ಜಾನಪದ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಕೋಲಾಟ, ರಂಗ ಕುಣಿತ ಮತ್ತಿತರ ಸ್ಥಳೀಯ ಜಾನಪದ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದರಲ್ಲದೆ, ನಮ್ಮ ಊರ ಜಾತ್ರೆ ನಮ್ಮ ಊರಿನ ಜನರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೇವಿ ದರ್ಶನಕ್ಕೆ ಆಗಮಿಸುವ ಭಕ್ತರು ಜಿಲ್ಲೆಯ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಲು ಅನುಕೂಲವಾಗು ವಂತೆ ಹಾಗೂ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಯೋಜನೆ ತಯಾರಿಸಲು ಒಂದು ಸಮಿತಿ ರಚನೆ ಮಾಡುವಂತೆ ತಿಳಿಸಿದರು.
ಭಕ್ತರು ದೇವಿ ದರ್ಶನಕ್ಕೆ ಸರತಿಸಾಲಿನಲ್ಲಿ ಸಾಗುವ ಸಂದರ್ಭದಲ್ಲಿ ಜನದಟ್ಟಣೆಯಿಂದ ಕೆಲವು ಸಮಯದಲ್ಲಿ 4-5 ಗಂಟೆ ತೆಗೆದುಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಸ್ಥಳದಲ್ಲಿಯೇ ಭಕ್ತರಿಗೆ ಮಧ್ಯಾಹ್ನ ಸಮಯದಲ್ಲಿ ಮಜ್ಜಿಗೆ, ರಾತ್ರಿ ಸಮಯದಲ್ಲಿ ಬಿಸಿ ಬಾದಾಮಿ ಹಾಲು ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ವೆಬ್‌ಸೈಟ್ ಉದ್ಘಾಟನೆ
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ವೆಬ್‌ಸೈಟ್ ಲಾಂಚ್ ಆಗಬೇಕು ಎಂದು **** ತಿಳಿಸಿದರು. ಪ್ರತಿದಿನ ದೇವಾಲಯದ ಬಳಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಲೈವ್ ಟೆಲಿಕಾಸ್ಟ್ ಆಗಬೇಕು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಸೌಂಡ್ ಸಿಸ್ಟಮ್‌ನಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳಬೇಕು. ಪ್ರವೇಶ ದ್ವಾರವನ್ನು ಈ ಬಾರಿ ಅತ್ಯಂತ ಸೃಜನಶೀಲತೆ ಹಾಗೂ ಆಕರ್ಷಕವಾಗಿ ಮಾಡಿಸಲು ಯೋಚಿಸಿ ಎಂದು ಹೇಳಿದರು.
ಗೊಂದಲಕ್ಕೆ ಆಸ್ಪದ ನೀಡದಿರಿ
ಜಾತ್ರಾ ಮಹೋತ್ಸವದ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಅಗತ್ಯವಿರುವ ಕೆಲಸಗಳಿಗೆ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಂಡು ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ **** ನಿರ್ದೇಶನ ನೀಡಿದರು.
ಜಾತ್ರಾ ಮಹೋತ್ಸವದ ಪೂರ್ವಭಾವಿ ಸಿದ್ಧತೆ ಹಿನ್ನೆಲೆಯಲ್ಲಿ ಪ್ರತಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ಜಿಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಂ ಶುಕ್ಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net