

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ, ನಟ ದರ್ಶನ್‌ರನ್ನು ಗುರುವಾರ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು. ಅಂತೆಯೇ ಉಳಿದ ಆರೋಪಿಗಳನ್ನು ಸಹ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲಾಯಿತು.
ಗುರುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪರಪ್ಪನ ಆಗ್ರಹಾರದಿಂದ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯಿತು. ಬಿಗಿಭದ್ರತೆ ನಡುವೆ ಪೊಲೀಸ್ ಟಿಟಿ ವಾಹನದಲ್ಲಿ ಸುಮಾರು ಐದು ತಾಸು ಪ್ರಯಾಣದ ಬಳಿಕ ದರ್ಶನ್ ಬಳ್ಳಾರಿ ಜೈಲು ಸೇರಿದರು. ಸಿಬ್ಬಂದಿ ಹಾಗೂ ವೈದ್ಯರು ಆರೋಗ್ಯ ತಪಾಸಣೆ ನಡೆಸಿ, ಜೈಲಿನ ಒಳಭಾಗದ ಬಲಗಡೆ ಇರುವ ಭದ್ರತೆ ಕೊಠಡಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡು ಸೆಲ್‌ಗೆ ಕಳುಹಿಸಲಾಯಿತು.
ದರ್ಶನ್ ನೋಡಲು ಜೈಲು ಬಳಿ ಅಭಿಮಾನಿಗಳು ಜಮಾಯಿಸಿದ್ದರು. ಲಘುಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ ಪ್ರಸಂಗ ಕಂಡುಬಂತು. ದರ್ಶನ್ ಇದ್ದ ವಾಹನ ಜೈಲು ರಸ್ತೆಗೆ ತಿರುಗಿದ ಬಳಿಕ ಹಿಂಬದಿಯ ಪೊಲೀಸ್ ವಾಹನವು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಕೆಲ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.