ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಿ

ckm VHP
ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಎಡಿಸಿ ನಾರಾಯಣ ಕನಕರಡ್ಡಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಶ್ಯಾಮ್ ವಿ. ಗೌಡ, ಸುನೀಲ್ ಆಚಾರ್ಯ, ಪ್ರದೀಪ್ ಇತರರಿದ್ದರು.
Published on

ಚಿಕ್ಕಮಗಳೂರು: ವೈಷ್ಣೋದೇವಿ ಯಾತ್ರೆಗೆ ತೆರಳುತ್ತಿರುವ ಸಮಯದಲ್ಲಿ ಹಿಂದುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ಉಗ್ರ ಸಂಘಟನೆಯನ್ನು ಸದೆಬಡಿದು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಮುಖಂಡರು ಎಡಿಸಿ ನಾರಾಯಣ ಕನಕರಡ್ಡಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಹಿಂದು ಭಕ್ತರ ಬಸ್ ಮೇಲೆ ಪಾಕಿಸ್ತಾನಿ ಘೋಷಿತ ಇಸ್ಲಾಮಿಕ್ ಜಿಹಾದಿ ಭಯೋತ್ಪಾದಕ ಸಂಘಟನೆ ಕೃತ್ಯವೆಸಗಿ ರಾಷ್ಟ್ರದ ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ರಂಗನಾಥ್ ಮಾತನಾಡಿ, ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ವೈಷ್ಣೋದೇವಿ ಕತ್ರಾದಿಂದ ಶಿವಖೋಡಿಗೆ ಸಂಚರಿಸುವ ವೇಳೆಯಲ್ಲಿ ಹಿಂದುಗಳ ಮೇಲೆ ಉಗ್ರ ಸಂಘಟನೆ ದಾಳಿ ನಡೆಸಿ ಸುಮಾರು 10 ಹಿಂದು ಯಾತ್ರಿಕರ ಸಾವಿಗೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಮ್ಮು ಕಾಶ್ಮೀರ ಇಂದಿಗೂ ಪಾಕಿಸ್ತಾನ ಘೋಷಿತ ಭಯೋತ್ಪಾದನೆಯಿಂದ ಮುಕ್ತವಾಗಿಲ್ಲ. 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಆಶಾದೀಪ ಪ್ರಜ್ವಲಿಸಿದರೂ ಭಯೋತ್ಪಾದಕರ ಅಟ್ಟಹಾಸ ಕಡಿಮೆಯಾಗಿಲ್ಲ ಎಂದರು.
ಹಿಂದುಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿರುವ ಉಗ್ರ ಸಂಘಟನೆಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನೆಲ್ಲೇ ಪಾಕಿಸ್ತಾನದ ಹಸ್ತಕ್ಷೇಪ ಸ್ಪಷ್ಟವಾಗಿದೆ. ಹೇಯ ಕೃತ್ಯವೆಸಗಿರುವ ಇಸ್ಲಾಮಿಕ್ ಭಯೋತ್ಪಾದಕರು ಹಾಗೂ ದೇಶದ ಸ್ವಾಯತ್ತತೆಗೆ ಸವಾಲೊಡ್ಡುತ್ತಿರುವವರ ವಿರುದ್ಧ ಎನ್‌ಡಿಎ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ವಿಶ್ವ ಹಿಂದು ಪರಿಷತ್ ಜಿಲ್ಲಾ ಸಹ ಸಂಯೋಜಕ ಶ್ಯಾಮ್ ವಿ. ಗೌಡ, ನಗರ ಸಂಯೋಜಕ ಸುನೀಲ್ ಆಚಾರ್ಯ, ಧರ್ಮ ಪ್ರಸಾರ ಪ್ರಮುಖ ಪ್ರದೀಪ್, ಗೋರಕ್ಷಾ ಪ್ರಮುಖ ಕಿರಣ್, ಮಠ ಮಂದಿರ ಪ್ರಮುಖ್ ಆಟೋ ಶಿವಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net