ವಿಶ್ವವಂದ್ಯ ತೀರ್ಥಂಕರ ಭಗವಾನ್ ಮಹಾವೀರರು

sduina
Published on
 ಭಗವಾನ್ ಮಹಾವೀರರ ದಿವ್ಯ ಸಂದೇಶಗಳಾದ ಅಹಿಂಸೆ, ಅನೇಕಾಂತ, ಅಪರಿಗ್ರಹ ಇಂದು ಕೂಡ ಪ್ರಸ್ತುತ ಹಾಗೂ ಸಾರ್ವಕಾಲಿಕ. ಹಲವು ದೇಶಗಳು ಪರಸ್ಪರ ಕಾದಾಡುತ್ತ್ತ ಯುದ್ಧದ ಉನ್ಮಾದದೊಂದಿಗೆ ಜೀವಿಗಳ ಬದುಕಿನಲ್ಲಿ ಚೆಲ್ಲಾಟ ಮಾಡುತ್ತಿರುವಾಗ ಅಹಿಂಸಾ ಧರ್ಮದ ಪಾಲಿಗೆ ಅಮೃತತುಲ್ಯ ಸಂದೇಶ ನೀಡಿ ಅಜರಾಮರರಾದವರು ಮಹಾವೀರರು.

ಬಿಹಾರ ರಾಜ್ಯದ ಪಟ್ನಾ ಬಳಿಯ ಕುಂಡ ಗ್ರಾಮದ ವೈಶಾಲಿಯ ಸಿದ್ಥಾರ್ಥ ರಾಜ ಹಾಗೂ ತ್ರೀಶಲಾ ದಂಪತಿಯ ಪುತ್ರರಾದ ಇವರು ಯೌವನ ವ್ಯವಸ್ಥೆಯಲ್ಲಿಯೇ ಬಾಲ ಬ್ರಹ್ಮಚಾರಿಯಾಗಿ ದಿಗಂಬರ ದೀಕ್ಷಾ ಮಹಾವೃತಧಾರಕರಾದರು. ಕಠಿಣ ತಪಸ್ಚ್ಚಣೆಗೈದು ತೀರ್ಥಂಕರರಾಗಿ ಲೋಕ ಕಲ್ಯಾಣ ಕಾರ್ಯದಲ್ಲಿ ತೊಡಗಿದರು. ಇವರ ಒಟ್ಟು ಜೀವಿತಾವಧಿ 72 ವರ್ಷ. (ಕ್ರಿ.ಪೂ 599-527).

ಮಹಾವೀರರು 24ನೇಯ ತೀರ್ಥಂಕರರು. ಮೂಕ ಪ್ರಾಣಿ ಗಳ ಹಿಂಸೆ, ದಾರಿದ್ರ್ಯ, ಮೂಢನಂಬಿಕೆಯಂಥ ಮಹಾಪಾಪವನ್ನು ಹೋಗಲಾಡಿಸುವುದಕ್ಕೆ ಸಮಸ್ತರಿಗೂ ಅವರವರ ಭಾಷೆ ಯಲ್ಲಿ ಜೀವನ ರಹಸ್ಯವನ್ನು ತಿಳಿಸಿ ಆತ್ಮ ಕಲ್ಯಾಣ ಮಾರ್ಗವನ್ನು ಬೋಧಿಸಿದರು. ಜನರಲ್ಲಿ ಮನೆ ಮಾಡಿದ್ದ ಅನೇಕ ಸಂಶಯಗಳಿಗೆ ಸಮಾಧಾನವನ್ನು ನೀಡಿದರು. ಸಂಸ್ಕಾರ ಸಭ್ಯಜೀವಿಗಾಗಿ ಇರುವುದು. ಜೀವಿಗೆ ಜೀವಿ ನೆರವು ಅದಾಗ ಮಾತ್ರ ಲೋಕ ವಿಕಾಸ ಆಗುವುದು ಸಾಧ್ಯ. ಮನಸ್ಸು ಚಂಚಲವಾದಾಗ ಏಕಾಗ್ರತೆ ಸಾಧಿಸಲು ಏಕಾಂತವಾಸ, ಮೌನ ಧಾರಣೆ, ಉಪವಾಸ, ಅಧ್ಯಯನ, ಭಕ್ತಿ, ಧ್ಯಾನಗಳು ನೆರವಾಗುತ್ತವೆ ಎಂದು ಬೋಧಿಸಿದರು. ಅವರು ಶ್ರಮಣ ಸಂಸ್ಕೃತಿಯ ಪರಮೋಚ್ಚ ಸ್ಥಿತಿಯಾದ ದಿಗಂಬರ ಮಹಾಮುನಿಯಾಗದೆ ಮೋಕ್ಷವಿಲ್ಲ ಎಂಬ ಸತ್ಯವನ್ನು ನುಡಿದರು.

ವರ್ಧಮಾನರು ನಿಜವಾದ ನಿರ್ಗ್ರಂಥರು. ಅವರಿಗೆ ಯಾವುದೇ ಗ್ರಂಥದಲ್ಲಿ ಸಿಕ್ಕಿಬೀಳುವ ಅಭಿಲಾಷೆ ಇರಲಿಲ್ಲ. ಮೋಹವಿರಲಿಲ್ಲ. ಅವರು ಅನಂತ ಜ್ಞಾನದ ಉಪಾಸಕರಾಗುವ ಮಾರ್ಗದಲ್ಲಿದ್ದರು. ಅವರು ವಿಶ್ವ ತಥ್ಯವನ್ನು ತಿಳಿದರು. ವಿಶ್ವದ ಪದಾರ್ಥಗಳ ಸ್ವಭಾವವನ್ನು ಅರಿಯಲು, ಅವುಗಳಲ್ಲಿ ಭೇದವನ್ನು ತಿಳಿಯಲು ಅವರಿಗೆ ದೃಷ್ಟಿಪ್ರಾಪ್ತವಾಗಿತ್ತು. ವಾಸ್ತವಿಕವಾಗಿ ಸ್ವಭಾವದ ದಿಕ್ಕಿನ ದೃಷ್ಟಿಯಿಂದ ಆರೂ ದ್ರವ್ಯಗಳು ತಮ್ಮ ಸ್ವರೂಪದಲ್ಲಿವೆ- ಒಂದರಲ್ಲಿ ಇನ್ನೊಂದರ ಗುಣಧರ್ಮವಿಲ್ಲ. ಮಾನವನಿಗೆ ಪದಾರ್ಥ ಪರೀಕ್ಷಣೆಯಲ್ಲಿ ಭ್ರಾಂತಿಯಾದಾಗ ವೈಪರೀತ್ಯ ಉಂಟಾಗುತ್ತದೆ, ಆಗ ಆತ ಪರ ಪದಾರ್ಥಗಳ ಸ್ವರೂಪವನ್ನು ಬೇರೆ ಅನ್ಯ ಪದಾರ್ಥಗಳ ಸ್ವರೂಪವನ್ನು ಒಪ್ಪಿಕೊಳ್ಳುತ್ತಾನೆ. ಹಾಗೂ ಈ ಪ್ರಕಾರ ಅಜ್ಞಾನದಲ್ಲಿ ಸಿಲುಕಿಬಿಳುತ್ತಾನೆ.

ನಿರ್ಗ್ರಂಥ ಶಬ್ದವನ್ನು ಪರಿಗ್ರಹ ರಹಿತ ಅರ್ಥದಲ್ಲಿ ಸ್ವೀಕರಿಸಲಾಗಿದೆ. ಅರ್ಥಾತ್ ಯಾರು ನಗ್ನರಾಗಿ ಹಾಗೂ ಅಕಿಂಚನದ ರೂಪದಲ್ಲಿ ಯಥಾ ಜಾತ ಮುದ್ರೆಯನ್ನು ಹೊಂದಿದ್ದಾರೋ ಅವರು ನಿರ್ಗ್ರಂಥ ಅಥವಾ ದಿಗಂಬರ ಸ್ಥಾನವನ್ನು ಹೊಂದುತ್ತಾರೆ. ಈ ಸ್ವರೂಪದ ಧಾರಣೆ ಮಾಡದ ವಿನಹ ಮುಕ್ತಿ ಇಲ್ಲ. ಯಾರು ಪರಿಗ್ರಹ ರಹಿತರೊ, ಮಹಾವ್ರತಿಗಳೋ, ದಿಗಂಬರರೊ, ನಿರ್ಗ್ರಂಥರೊ ಹಾಗೂ ನಿರಾಡಂಬರರೊ ಅವರೇ ವಿದ್ವಾಂಸರು.

ಭಗವಾನ್ ಮಹಾವೀರರ ಜನಪ್ರಿಯ ಸಂದೇಶಗಳು ಸರಳವಾಗಿ ದ್ದವು. ಜನಸಾಮಾನ್ಯರ ಆಡು ಭಾಷೆಯಲ್ಲಿದ್ದವು. ಆಚರಣಾಯೋಗ್ಯವಾಗಿದ್ದವು. ಮದ್ಯ, ಮಧು, ಮಾಂಸದ ತ್ಯಾಗ, ರಾತ್ರಿ ಭೋಜನ ತ್ಯಾಗ. ನೀರನ್ನು ಸೋಸಿ ಕುಡಿಯುವ ಸರಳ ವಿಜ್ಞಾನ ಯುಕ್ತ ಆರೋಗ್ಯ ಶಾಸ್ತ್ರವನ್ನು ಅವರು ಭೋಧಿಸಿದರು. ಅವರ ಲೋಕ ಪ್ರಿಯ ಕೆಲ ಸಂದೇಶಗಳು ಹೀಗಿವೆೆ.

ಬದುಕು ಬದುಕಲು ಬಿಡು; ಪರಸ್ಪರ ಸಹಕರಿಸಿ ಬಾಳ ಬೇಕು, ಭೂಮಿ ಗಿಡ ಮರ ಬಳ್ಳಿಯ ಅನಾವಶ್ಯಕ ಉಪಯೋಗ ಸಲ್ಲದು. ಯಾವುದೇ ಜೀವಿಗಳಿಗೆ ನೋವು ಕೊಡಬಾರದು. ಪುಣ್ಯವಿಲ್ಲದೆ ಸುಖವಿಲ್ಲ. ಧರ್ಮವಿಲ್ಲದೆ ಪುಣ್ಯವಿಲ್ಲ. ಅಹಿಂಸೆ ಇಲ್ಲದೆ ಧರ್ಮವಿಲ್ಲ. ತ್ಯಾಗವಿಲ್ಲದೆ ಪೂಜೆಯಿಲ್ಲ. ನಿಸ್ವಾರ್ಥವಿಲ್ಲದೆ ತ್ಯಾಗವಿಲ್ಲ. ಸ್ವಾರ್ಥ ತೊರೆಯದೆ ನಿಸ್ವಾರ್ಥವಿಲ್ಲ. ಮೋಹವಿಲ್ಲದೆ ಲೋಭವಿಲ್ಲ. ರಾಗ- ದ್ವೇಷಗಳಿಲ್ಲದೆ ಮೋಹವಿಲ್ಲ. ತೀರ್ಥಂಕರ ಮಹಾವೀರರು ಶ್ರೀ ವೃಷಭ ದೇವನ ಪರಂಪರೆಯ ಅಂತಿಮ ತೀರ್ಥಂಕರರಾಗಿದ್ದರು. ಇವರಿಗಿಂತಲೂ ಹಿಂದೆ ಇಪ್ಪತ್ಮೂರು ತೀರ್ಥಂಕರರು ಆಗಿಹೋಗಿದ್ದಾರೆ.

ಜೈನಧರ್ಮದ ಪ್ರಾಚೀನತೆ, ಸನಾತನ ಅನಾದಿ : ಜೈನ ಧರ್ಮದ ಪರಂಪರೆ ಅತ್ಯಂತ ಪ್ರಾಚೀನವಾಗಿದೆ.ಚತುರ್ಥ ಕಾಲದ ಕೊನೆಯ ಸರ್ವಜ್ಞ ಭಗವಾನ್ ಮಹಾವೀರರ ಸಾರ್ವಕಾಲಿಕ ಸತ್ಯ, ಸರ್ವ ಜೀವ ಮೈತ್ರಿಯನ್ನು ಸಾರುವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಲು ಪ್ರಯತ್ನಿಸೋಣ.

ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿ ಶ್ರೀ ದಿಗಂಬರ ಜೈನ ಮಠ ಮೂಡಬಿದಿರೆ

| ಜಗದ್ಗುರು ಡಾ. ಸ್ವಸ್ತಿ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net