

ಚೆನ್ನೈ: ದಕ್ಷಿಣ ಭಾರತೀಯ ಕಲಾವಿದರ ಸಂಘದ ಸಭೆಯಲ್ಲಿ ಪಾಲ್ಗೊಳ್ಳಲು ನಟ ವಿಶಾಲ್ ಸೈಕಲ್‌ನಲ್ಲಿ ಆಗಮಿಸಿದ್ದಾರೆ. ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಭಾನುವಾರ (ಸೆಪ್ಟೆಂಬರ್ 8) ಸಭೆ ನಡೆದಿದ್ದು, ವಿಶಾಲ್ ಸೈಕಲ್‌ನಲ್ಲಿ ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ನಾಡಿಗರ್ ಸಂಗಮ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಶಾಲ್ ಅವರು ತಮ್ಮ ಬೈಸಿಕಲ್‌ನೊಂದಿಗೆ ಗೇಟ್ ಬಳಿ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳೊಂದಿಗೆ ಕೆಲ ಸಮಯ ಮಾತನಾಡಿದ್ದಾರೆ. ಬಳಿಕ ಸಂಘದ ಸದಸ್ಯರು ಬ್ಯಾಂಡ್ನೊಂದಿಗೆ ಬರಮಾಡಿಕೊಂಡಿರುವುದನ್ನು ಕಾಣಬಹುದಾಗಿದೆ.
ಕಳೆದ ತಿಂಗಳು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ವಿಶಾಲ್, ಹೇಮಾ ಸಮಿತಿಯಂತಹ ಸಮಿತಿಯನ್ನು ರಾಜ್ಯದಲ್ಲಿ ರಚಿಸಬಹುದೇ ಎಂದು ಕೇಳಿದ್ದರು. ಮುಂದಿನ ಹತ್ತು ದಿನಗಳಲ್ಲಿ ನಾಡಿಗರ ಸಂಗಮ ಸಮಿತಿ ರಚಿಸಲಿದೆ. ಸಿದ್ಧತೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಘೋಷಣೆ ಹೊರಬೀಳಲಿದೆ. ಹಾಗೆ ಮಾಡುವುದು ನಮ್ಮ ಕರ್ತವ್ಯ. ಸಂಘವು ಉದ್ಯಮದಲ್ಲಿರುವ ಪುರುಷರಿಗೆ ಮಾತ್ರವಲ್ಲ. ತಮಗಾಗಿ ಯಾರಾದರೂ ಇದ್ದಾರೆ ಎಂದು ಮಹಿಳೆಯರು ತಿಳಿದುಕೊಳ್ಳುವುದು ಮುಖ್ಯ ಎಂದು ಹೇಳಿದ್ದರು.
ಇಂದಿನ ಸಭೆಯಲ್ಲಿ ತಮಿಳು ಚಿತ್ರರಂಗದಲ್ಲಿ ಕೇರಳದ ಹೇಮಾ ಸಮಿತಿಯಂತಹ ಸಮಿತಿ ರಚನೆ ಹಾಗೂ ತಮಿಳು ಚಿತ್ರ ನಿರ್ಮಾಪಕರ ಸಂಘದ ಜತೆಗಿನ ಸಂಘರ್ಷದ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಈ ತಿಂಗಳ ಆರಂಭದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಕಿರುಕುಳದ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯ ಪರಿಷ್ಕೃತ ಆವೃತ್ತಿಯನ್ನು ಸಾರ್ವಜನಿಕಗೊಳಿಸಲಾಯಿತು. ಇದು ಮಹಿಳಾ ವೃತ್ತಿಪರರಿಗೆ ಕಿರುಕುಳ, ಶೋಷಣೆ ಮತ್ತು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ವರದಿ ನೀಡಿತ್ತು.
ನಟ ವಿಶಾಲ್ ಕೊನೆಯದಾಗಿ ರತ್ನಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಅಂದುಕೊಂಡಷ್ಟರ ಮಟ್ಟಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಮುತ್ತಯ್ಯನವರ ಮುಂದಿನ ಚಿತ್ರದಲ್ಲಿ ವಿಶಾಲ್ ನಟಿಸಲಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)