ಯಕ್ಷಗಾನ ಕಲಿಕೆಯಿಂದ ಮೂಡುವುದು ಸದ್ಗುಣ

tth yakshagaana
ತೀರ್ಥಹಳ್ಳಿಯಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಎರಡನೇ ವಾರ್ಷಿಕೋತ್ಸವ ಸಮಾರಂಭವನ್ನು ಬಾಲ ಕಲಾವಿದೆ ಕಾಲಿಗೆ ಗೆಜ್ಜೆಕಟ್ಟುವ ಮೂಲಕ ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಸಂದೇಶ್ ಜವಳಿ, ಶೈಲೇಶ್ ತೀರ್ಥಹಳ್ಳಿ ಇದ್ದರು.
Published on

ತೀರ್ಥಹಳ್ಳಿ: ರಾಮಾಯಣ, ಮಹಾಭಾರತದ ಆಶಯದೊಂದಿಗೆ ಸನಾತನ ಧರ್ಮದ ಮೌಲ್ಯಗಳನ್ನು ಭಿತ್ತರಿಸುತ್ತಿರುವ ಯಕ್ಷಗಾನ ಸನಾತನ ಧರ್ಮದ ಸವಾಲುಗಳಿಗೂ ಉತ್ತರ ನೀಡುತ್ತಿದೆ. ಕರಾವಳಿ ಮೂಲದ ಹೆಮ್ಮೆಯ ಈ ಕಲೆಗೆ ಮಲೆನಾಡು ಮತ್ತು ಈ ತಾಲೂಕಿನ ಕಲಾವಿದರ ಕೊಡುಗೆಯೂ ಅಮೂಲ್ಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಗೋಪಾಲ ಗೌಡ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಯಕ್ಷಗಾನ ಅಧ್ಯಯನ ಕೇಂದ್ರದ ಎರಡನೇ ವಾಷಿಕೋತ್ಸವ ಸಮಾರಂಭವನ್ನು ಬಾಲ ಕಲಾವಿದೆಯ ಕಾಲಿಗೆ ಗೆಜ್ಜೆಕಟ್ಟುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಆಧುನಿಕತೆಯ ಈ ಕಾಲಘಟ್ಟದಲ್ಲೂ ತನ್ನ ಹಿರಿಮೆ ಮತ್ತು ಪರಂಪರೆಯನ್ನು ಮೆರೆಯುತ್ತಿರುವ ನಾಡಿನ ಹೆಮ್ಮೆಯ ಈ ಕಲೆ ಶಾಶ್ವತವಾಗಿದೆ. ರಾಮಾಯಣ, ಮಹಾಭಾರತ ಮುಂತಾದ ಧಾರ್ಮಿಕ ಮತ್ತು ಐತಿಹಾಸಿಕ ಹಿನ್ನೆಲೆಯ ಕಥಾವಸ್ತುವನ್ನು ಆಧಾರವಾಗಿ ಇಟ್ಟುಕೊಂಡು ಸಮಾಜದಲ್ಲಿ ಸಚ್ಚಾರಿತ್ರ್ಯ ಮೂಡಿಸುತ್ತಿರುವ ಯಕ್ಷಗಾನ ದೇವರ ಕಲೆ. ಮಕ್ಕಳಲ್ಲಿ ಈ ಕಲೆಯ ಬಗ್ಗೆ ಆಸಕ್ತಿ ಮೂಡಿಸುತ್ತಿರುವ ಅಧ್ಯಯನ ಕೇಂದ್ರದ ಗುರು ಶೈಲೇಶ್ ಅವರ ಪ್ರಯತ್ನ ಪ್ರಶಂಸನೀಯ ಎಂದರು.
ರಂಗಾಯಣದ ಮಾಜಿ ನಿರ್ದೆಶಕ ಸಂದೇಶ್ ಜವಳಿ ಮಾತನಾಡಿ, ಎಳೆಯ ಪ್ರಾಯದಿಂದ ಯಕ್ಷಗಾನ ಕಲೆಯಲ್ಲಿ ವಿಶೇಷ ಅಧ್ಯಯನದ ಮೂಲಕ ಅರ್ಹತೆ ಹೊಂದಿರುವ ಶೈಲೇಶ್ ತನ್ನೂರಿನ ಅಭಿಮಾನ ಮತ್ತು ಕಲೆಯ ಮೇಲಿನ ಗೌರವದಿಂದ ತೀರ್ಥಹಳ್ಳಿಯಲ್ಲಿ ಯಕ್ಷಗಾನ ಕೇಂದ್ರ ಸ್ಥಾಪನೆ ಮಾಡಿದ್ದಾರೆ. ಇದನ್ನು ಪ್ರೋತ್ಸಾಹಿಸುವ ಹೊಣೆ ನಮ್ಮೆಲ್ಲರದು ಎಂದು ಹೇಳಿದರು.
ಯಕ್ಷ ಗುರು ಶೈಲೇಶ್ ತೀರ್ಥಹಳ್ಳಿ ಮಾತನಾಡಿ, ಹಿರಿಯರ ಮಾರ್ಗದರ್ಶನ, ಕಲಾಸಕ್ತರ ನೆರವಿನಿಂದ ಕಲಾ ಪರಂಪರೆ ಉಳಿಸುವ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲ ವಯೋಮಾನದ ಶಿಕ್ಷಣಾರ್ಥಿಗಳು ಕೇಂದ್ರದಲ್ಲಿ ಕಲಿಯುತ್ತಿದ್ದು ಉತ್ತಮ ಬೆಂಬಲ ದೊರೆಯುತ್ತಿದೆ ಎಂದರು.
ಹಿರಿಯ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ಮತ್ತು ಕೇಂದ್ರದ ವಿದ್ಯಾರ್ಥಿಗಳಿಂದ ದ್ವಿವಿದ-ಮೈಂದ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು. ಕೂಳೂರು ಸತ್ಯನಾರಾಯಣ ರಾವ್, ರಂಗ ನಿರ್ದೇಶಕ ಶ್ರೀಕಾಂತ್ ಕುಮುಟಾ, ಕಲಾವಿದ ಅಂಬರೀಷ್ ಭಾರದ್ವಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net