ಸಂಕ್ರಾಂತಿಗೆ ವಿರಾಟಪುರದ ವಿರಾಗಿ; ಪೂಜ್ಯ ಹಾನಗಲ್ ಕುಮಾರ ಶಿವಯೋಗಿಗಳ ಬಯೋಪಿಕ್

Hanagal
Published on

ಬೆಂಗಳೂರು: ಆಧುನಿಕ ಬಸವಣ್ಣ ಎಂದೇ ಹೆಸರು ಪಡೆದಿರುವ ಹಾನಗಲ್ ಕುಮಾರ ಶಿವಯೋಗಿಗಳ ಜೀವನಾಧಾರಿತ ಚಿತ್ರ ‘ವಿರಾಟಪುರದ ವಿರಾಗಿ’. ಇತ್ತೀಚೆಗಷ್ಟೆ ಚಿತ್ರದ ಮೊದಲ ನೋಟ ಬಿಡುಗಡೆಯಾಯಿತು. ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಶ್ರೀ ಸದಾಶಿವ ಮಹಾಸ್ವಾಮಿಗಳು, ಶ್ರೀ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಘನಬಸವ ಅಮರೇಶ್ವರ ಮಹಾಸ್ವಾಮಿಗಳು, ಕರ್ನಾಟಕ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ, ಪದ್ಮಶ್ರೀ ಪುರಸ್ಕೃತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾಗೂ ಮಾಜಿ ಸಚಿವ ಅಲ್ಲಮ ವೀರಭದ್ರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

‘ನಾನು ಅವನಲ್ಲ... ಅವಳು’ ಚಿತ್ರದ ಬಳಿಕ ನಿರ್ದೇಶಕ ಲಿಂಗದೇವರು ನಿರ್ದೇಶಿಸಿರುವ ಚಿತ್ರವಿದು. ‘ಎರಡೂವರೆ ವರ್ಷಗಳ ಹಿಂದೆ ಜಡೆಯ ಮಹಾಸ್ವಾಮಿಗಳು ಹಾನಗಲ್ ಕುಮಾರ ಶಿವಯೋಗಿಗಳ ಕುರಿತು ಸಿನಿಮಾ ಮಾಡಲು ಹೇಳಿದರು. ಅನೇಕ ಮಠಾಧೀಶರನ್ನು, ವಿದ್ವಾಂಸರನ್ನು ಸಂರ್ಪಸಿ ಸ್ಕ್ರಿಪ್ಟ್ ಸಿದ್ಧ ಮಾಡಿದೆ. ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಸಬಲೀಕರಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕುಮಾರ ಶಿವಯೋಗಿಗಳು ಮಾಡಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡರು. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ, ಅಶೋಕ್ ರಾಮನ್ ಛಾಯಾಗ್ರಹಣ ಹಾಗೂ ಗುಣಶೇಖರನ್ ಸಂಕಲನವಿದೆ.

ಹಾನಗಲ್ ಕುಮಾರ ಶಿವಯೋಗಿಗಳ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ನಟಿಸಿದ್ದು, ‘ಆ ಪಾತ್ರದಲ್ಲಿ ನಟಿಸಿದ್ದು ನನ್ನ ಪುಣ್ಯ. ನೂರು ವರ್ಷಗಳ ಹಿಂದೆ ಸಮಾಜ ಈ ರೀತಿ ಇರಲಿಲ್ಲ. ಅಂತಹ ಸಮಯದಲ್ಲಿ ಅನೇಕ ಸುಧಾರಣೆಗೆ ಮುಂದಾದವರು ಹಾನಗಲ್ ಕುಮಾರ ಶಿವಯೋಗಿಗಳು’ ಎಂದರು. ಚಿತ್ರ 2023ರ ಜನವರಿ 12ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ರಾಜ್ಯ ಐದು ಕಡೆಗಳಿಂದ ರಥಯಾತ್ರೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net