ವೀವ್ಸ್​ಗಾಗಿ ರೈಲ್ವೆ ಹಳಿ ಮೇಲೆ ಸೈಕಲ್, ಸಿಲಿಂಡರ್ ಇಟ್ಟು ಹುಚ್ಚಾಟ ಮೆರೆದ ಯೂಟ್ಯೂಬರ್​ ಅರೆಸ್ಟ್​!

Youtuber
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಲು ಕೆಲವರು ನಾನಾ ಪ್ರಯತ್ನಗಳನ್ನು ಮಾಡುವುದನ್ನು ಮತ್ತು ಅದಕ್ಕಾಗಿ ಹಲವಾರು ಸಾಹಸಗಳನ್ನು ಮಾಡುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಇತ್ತೀಚಿಗೆ ವ್ಯಕ್ತಿಯೊಬ್ಬ ಅಪಾಯಕಾರಿ ಸಾಹಸ ಮಾಡಿ ಕಾಲು ಮತ್ತು ಕೈಗಳನ್ನು ಕಳೆದುಕೊಂಡಿರುವುದು ಕೂಡ ಗೊತ್ತಾಗಿದೆ. ಆದರೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಡಿಯೋಗಳು ಹೆಚ್ಚಿನ ವೀಕ್ಷಣೆಗಳನ್ನು ಪಡೆಯಲು ಸರ್ಕಸ್​ ಮಾಡುವುದನ್ನು ಸಹ ನೀವು ನೋಡಿರುತ್ತೀರಿ.

ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಯೂಟ್ಯೂಬರ್ ಒಬ್ಬ ರೈಲ್ವೇ ಹಳಿಯಲ್ಲಿ ಕಿಡಿಗೇಡಿತನ ಮಾಡಿ ಅತ್ಯಂತ ಅಪಾಯಕಾರಿ ವಿಡಿಯೋಗಳನ್ನು ಮಾಡಿದ್ದಾನೆ. ಕಲ್ಲುಗಳು, ಗ್ಯಾಸ್ ಸಿಲಿಂಡರ್‌ಗಳು, ಬೈಸಿಕಲ್ ಮತ್ತು ಜೀವಂತ ಕೋಳಿಯನ್ನು ರೈಲು ಹಳಿ ಮೇಲೆ ಇಟ್ಟರೆ ಮತ್ತು ಅದರ ಮೇಲೆ ರೈಲು ಹೋದರೆ ಏನಾಗುತ್ತದೆ ಎಂಬುದನ್ನು ತೋರಿಸಲು ವಿಡಿಯೋ ರೆಕಾರ್ಡ್​ ಮಾಡಿದ್ದಾನೆ. ಆದರೆ, ಇದು ಕಾನೂನಿಗೆ ವಿರುದ್ಧವಾಗಿದೆ. ಏಕೆಂದರೆ, ಇದು ಜನರ ಪ್ರಾಣದ ಪ್ರಶ್ನೆಯಾಗಿದೆ.

ಯೂಟ್ಯೂಬರ್​ ರೆಕಾರ್ಡ್​ ಮಾಡಿರುವ ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗಿದ್ದು, ವೀಕ್ಷಣೆಗೋಸ್ಕರ ಜನರ ಬದುಕಿನೊಂದಿಗೆ ಕೆಲವರು ಚೆಲ್ಲಾಟವಾಡುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕೆಲವರು ಆ ಯೂಟ್ಯೂಬರ್ ಬಗ್ಗೆ ರೈಲ್ವೆ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ತಕ್ಷಣವೇ ಪ್ರತಿಕ್ರಿಯಿಸಿದ ಅಧಿಕಾರಿಗಳು ಯೂಟ್ಯೂಬರ್​ನನ್ನು ಬಂಧಿಸಿದ್ದಾರೆ. ಬಂಧಿತ ಯೂಟ್ಯೂಬರ್​ನನ್ನು ಗುಲ್ಜಾರ್ ಶೇಖ್ ಎಂದು ಗುರುತಿಸಲಾಗಿದೆ.

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬಿಜೆಪಿ ನಾಯಕ ಶೆಹಜಾದ್​ ಎಂಬುವರು ಆಕ್ರೋಶ ಹೊರಹಾಕಿದ್ದರು. ಆರೋಪಿಯನ್ನು ರೈಲ್ ಜಿಹಾದಿ ಎಂದು ಉಲ್ಲೇಖಿಸಿದ್ದು, ತ್ವರಿತ ಕ್ರಮ ತೆಗೆದುಕೊಂಡಿದ್ದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಯುಪಿ ಪೊಲೀಸ್, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್​ಗೆ ಧನ್ಯವಾದ ಅರ್ಪಿಸಿದರು. ದೂರಿನಲ್ಲಿ ರೈಲ್ವೆ ಕಾಯ್ದೆಯ ಸೆಕ್ಷನ್ 147,145,153 ಮತ್ತು ಭಾರತೀಯ ನ್ಯಾಯ ಸಂಹಿತೆಯ ನಿರ್ದಿಷ್ಟ ವಿಭಾಗಗಳ ಅಡಿಯಲ್ಲಿ ಉಲ್ಲಂಘನೆಗಳನ್ನು ಉಲ್ಲೇಖಿಸಲಾಗಿದೆ, ಇದು ಸಾರ್ವಜನಿಕ ಕಿಡಿಗೇಡಿತನ ಮತ್ತು ಸಂಭಾವ್ಯ ರೈಲು ಹಳಿತಪ್ಪುವಿಕೆಯ ಅಪಾಯವನ್ನು ಎತ್ತಿ ತೋರಿಸುತ್ತದೆ.

ಈ ರೀತಿ ದುಷ್ಕೃತ್ಯ ಎಸಗುತ್ತಾ ಜನರ ಜೀವನದೊಂದಿಗೆ ಚೆಲ್ಲಾಟವಾಡಲು ಯಾರಿಗೂ ಅವಕಾಶವಿಲ್ಲ. ಇದು ಗಂಭೀರ ಪ್ರಕರಣವಾಗಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮದ ಜತೆಗೆ ಇತರರಿಗೂ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net