ಭೋಪಾಲ್: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಈ ಮೇಲಿನ ಫೋಟೋದಲ್ಲಿರುವ ವ್ಯಕ್ತಿಯ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಇತ್ತೀಚೆಗಷ್ಟೇ ಮಧ್ಯಪ್ರದೇಶದ ಬಡ ಕೂಲಿ ಕಾರ್ಮಿಕರೊಬ್ಬರಿಗೆ ಲಕ್ ಖುಲಾಯಿಸಿದೆ. ಪ್ರಸಿದ್ಧ ಪನ್ನಾ ಗಣಿಗಳಲ್ಲಿ ಕೆಲಸ ಮಾಡುವ 40 ವರ್ಷದ ರಾಜು ಗೊಂಡ್ ಎಂಬ ವ್ಯಕ್ತಿಗೆ ಬೆಲೆಬಾಳುವ ವಜ್ರ ಸಿಕ್ಕಿದೆ. ಅವರಿಗೆ ಸಿಕ್ಕ ವಜ್ರವು 19.22 ಕ್ಯಾರೆಟ್ ಶುದ್ಧವಾಗಿದ್ದು, ಈ ವಜ್ರವನ್ನು ಸರ್ಕಾರ ನಡೆಸುವ ಹರಾಜಿನಲ್ಲಿ ಮಾರಾಟ ಮಾಡಿದರೆ ಸುಮಾರು 80 ಲಕ್ಷ ರೂ. ಬೆಲೆ ಬರುವ ಸಾಧ್ಯತೆ ಇದೆ. ರಾಜು ಗೊಂಡ ಅವರು ದಿನಕ್ಕೆ ಕೇವಲ 300 ರೂಪಾಯಿ ಗಳಿಸಿ ಸಂಸಾರ ನಡೆಸುತ್ತಿದ್ದರು. ಇದೀಗ ವಜ್ರ ಸಿಕ್ಕಿರುವುದು ರಾಜು ಜೀವನವನ್ನು ಶಾಶ್ವತವಾಗಿ ಬದಲಾಯಿಸಿದೆ.
ರಾಜು ಗೊಂಡ ತನ್ನ ಕಿರಿಯ ಸಹೋದರ ರಾಕೇಶ್ ಜೊತೆ ಸೇರಿ ಸರ್ಕಾರ ನೀಡಿದ ಸಣ್ಣ ಜಮೀನಿನಲ್ಲಿ ಚಿನ್ನ ಹುಡುಕುತ್ತಿದ್ದರು. ದಿನಕ್ಕೆ 800 ರೂಪಾಯಿ ಖರ್ಚು ಮಾಡಿ ಆ ಜಮೀನು ಅಗೆಯುತ್ತಿದ್ದರು. ಒಂದು ದಿನ ಹುಡುಕುತ್ತಿರುವಾಗ ಹೊಳೆಯುವ ವಜ್ರವೊಂದು ಸಿಕ್ಕಿತು. ವಜ್ರವು ಎಷ್ಟು ಪ್ರಕಾಶಮಾನವಾಗಿ ಹೊಳೆಯಿತು ಎಂದರೆ ಅದು ವಜ್ರವೆಂದು ತಕ್ಷಣ ರಾಜನಿಗೆ ತಿಳಿಯಿತು.
ಅಂದಹಾಗೆ ಈ ವಜ್ರವನ್ನು ಹುಡುಕಲು ರಾಜು ಅವರು ಸುಮಾರು 10 ವರ್ಷಗಳ ಕಾಲ ಶ್ರಮ ಪಟ್ಟಿದ್ದಾರೆ. ರಾಜು ಮತ್ತು ಅವರ ಕಿರಿಯ ಸಹೋದರ ರಾಕೇಶ್ ಅವರು ತಕ್ಷಣ ತಮಗೆ ಸಿಕ್ಕ ವಜ್ರವನ್ನು ಪನ್ನಾದಲ್ಲಿರುವ ಡೈಮಂಡ್ ಕಚೇರಿಗೆ ತೆಗೆದುಕೊಂಡು ಹೋದರು. ಅಲ್ಲಿ ಕೆಲಸ ಮಾಡುವ ವಜ್ರ ತಜ್ಞರು ವಜ್ರವನ್ನು ಪರೀಕ್ಷಿಸಿ ಸುಮಾರು 80 ಲಕ್ಷ ರೂ. ಬೆಲೆ ಬಾಳುತ್ತದೆ ಎಂದು ತಿಳಿಸಿದ್ದಾರೆ. ಇದರಿಂದ ರಾಜು ಶ್ರಮಕ್ಕೆ ಫಲ ಸಿಕ್ಕಿದ್ದು, ಅವರ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಮಧ್ಯಪ್ರದೇಶದಲ್ಲಿ ಸರ್ಕಾರದಿಂದ ಅನುಮತಿ ಪಡೆದು ಒಂದಿಷ್ಟು ಹಣ ಕೊಟ್ಟು ಈ ರೀತಿಯ ವಜ್ರಗಳನ್ನು ಯಾರು ಬೇಕಾದರೂ ಹುಡುಕಬಹುದು. ಇಷ್ಟು ದೊಡ್ಡದಾದ ವಜ್ರಗಳು ಇತ್ತೀಚಿನ ದಿನಗಳಲ್ಲಿ ಸಿಗುವುದು ಅಪರೂಪ. ಈ ಹಣದಿಂದ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತೇನೆ ಎಂದು ರಾಜು ಹೇಳಿದರು. ಇದಲ್ಲದೇ ಮನೆ ನಿರ್ಮಿಸಿ, ಜಮೀನು ಖರೀದಿಸಿ ಬೇಸಾಯ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಸರ್ಕಾರದ ತೆರಿಗೆ ಮತ್ತು ಇತರ ಖರ್ಚುಗಳನ್ನು ಕಡಿತಗೊಳಿಸಿದ ನಂತರ ಅವರ ಬಳಿ ಎಷ್ಟು ಹಣ ಉಳಿಯುತ್ತದೆ ಎಂಬುದು ಇನ್ನೂ ತಿಳಿದುಬಂದಿಲ್ಲ. (ಏಜೆನ್ಸೀಸ್)
ವಯನಾಡು ಭೂಕುಸಿತ: ಸಾವಿನ ಸಂಖ್ಯೆ 308ಕ್ಕೆ ಏರಿಕೆ, ಬದುಕುಳಿದವರ ಶೋಧಕ್ಕೆ ಡ್ರೋನ್ ಆಧಾರಿತ ರಾಡಾರ್
ಸೂರ್ಯಕುಮಾರ್, ರಿಂಕು ರೀತಿ ಮತ್ತೊಬ್ಬ ಬ್ಯಾಟರ್ನನ್ನು ಬೌಲರ್ ಆಗಿ ಬದಲಾಯಿಸಿದ ಗೌತಮ್ ಗಂಭೀರ್!