ಕಾವ್ಯಾ ಬೇಡಿಕೆ ಬೆನ್ನಲ್ಲೇ ಐಪಿಎಲ್​ನಲ್ಲಿ ಮಹತ್ವದ ಬದಲಾವಣೆ: ಈ ತಪ್ಪು ಮಾಡಿದ್ರೆ 2 ವರ್ಷ ಬ್ಯಾನ್​ ಫಿಕ್ಸ್​!

Kavya Maran
Published on

ನವದೆಹಲಿ: ಇಂಡಿಯನ್ ಪ್ರೀಮಿಯರ್​ ಲೀಗ್‌ (ಐಪಿಎಲ್​)ನಲ್ಲಿ ಸಂಚಲನಾತ್ಮಕ ಬದಲಾವಣೆಗಳಿಗೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಸಿದ್ಧವಾಗಿದೆ ಎಂದು ವರದಿಗಳು ಹೇಳಿವೆ. ಇಷ್ಟು ವರ್ಷ ಐಪಿಎಲ್​ನಲ್ಲಿ ಆಗದ ಈ ಅಭೂತಪೂರ್ವ ಬದಲಾವಣೆಗೆ ಸನ್ ರೈಸರ್ಸ್ (ಎಸ್​ಆರ್​ಎಚ್​) ಸಹ ಮಾಲಕಿ ಕಾವ್ಯಾ ಮಾರನ್ ಕಾರಣವಾಗಲಿದ್ದಾರೆ.

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮೆಗಾ ಹರಾಜನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಇತ್ತೀಚೆಗೆ ಎಲ್ಲ ಫ್ರಾಂಚೈಸಿ ಮಾಲೀಕರೊಂದಿಗೆ ಮುಂಬೈನ ತನ್ನ ಮುಖ್ಯ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿತು. ಈ ವೇಳೆ ಆಟಗಾರರನ್ನು ಉಳಿಸಿಕೊಳ್ಳುವುದು, ಆರ್‌ಟಿಎಂ ಮತ್ತು ಇಂಪ್ಯಾಕ್ಟ್​ ಪ್ಲೇಯರ್​ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಈ ಅಂಶಗಳ ಜೊತೆಗೆ ಸನ್‌ರೈಸರ್ಸ್ ಸಹ ಮಾಲಕಿ ಕಾವ್ಯಾ ಮಾರನ್ ಎತ್ತಿರುವ ವಿದೇಶಿ ಆಟಗಾರರ ನಿಷೇಧದ ಬಗ್ಗೆಯೂ ಬಿಸಿ ಚರ್ಚೆಗಳು ನಡೆದವು.

ಹರಾಜಿನಲ್ಲಿ ಆಯಾ ತಂಡಗಳಿಗೆ ಆಯ್ಕೆಯಾದ ನಂತರ ಗಾಯದ ನೆಪದಲ್ಲಿ ಲೀಗ್‌ನಲ್ಲಿ ಆಡುವುದನ್ನು ತಪ್ಪಿಸುವ ವಿದೇಶಿ ಆಟಗಾರರ ಮೇಲೆ ನಿಷೇಧ ಹೇರಬೇಕು ಎಂದು ಕಾವ್ಯಾ ಮಾರನ್ ಒತ್ತಾಯಿಸಿದರು. ಕೆಲ ಆಟಗಾರರು ಹರಾಜಿನಲ್ಲಿ ಕಡಿಮೆ ಬೆಲೆ ಸಿಕ್ಕಿದ್ದಕ್ಕೆ ಸಿಟ್ಟಿಗೆದ್ದು ಗಾಯದ ನೆಪದಲ್ಲಿ ಐಪಿಎಲ್​ಗೆ ಲಭ್ಯವಾಗುತ್ತಿಲ್ಲ. ಇತರರು ಅಂತಾರಾಷ್ಟ್ರೀಯ ಬದ್ಧತೆಗಳು ಅಥವಾ ಕುಟುಂಬದ ತುರ್ತು ಪರಿಸ್ಥಿತಿ ಎಂದು ನೆಪ ಹೇಳಿ ತಂಡಗಳನ್ನು ಮಧ್ಯದಲ್ಲಿ ಬಿಡುತ್ತಾರೆ. ಇದು ತಂಡಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಕಾವ್ಯಾ ಮಾರನ್ ಬಿಸಿಸಿಐ ಗಮನಕ್ಕೆ ತಂದಿದ್ದಾರೆ.

ಅರ್ಧಕ್ಕೆ ಬಿಟ್ಟು ಹೋಗುವ ಆಟಗಾರರನ್ನು ಬದಲಿಸಲಾಗದೆ ಕೆಲ ತಂಡಗಳು ಒದ್ದಾಡುತ್ತವೆ. ಹೀಗಾಗಿ ಅಂತಹ ಆಟಗಾರರನ್ನು ಬ್ಯಾನ್ ಮಾಡುವಂತೆ ಕಾವ್ಯಾ ಅವರು ಆಗ್ರಹಿಸಿದ್ದಾರೆ. ಇದೀಗ ಕಾವ್ಯಾರ ಬೇಡಿಕೆಗೆ ಮಣೆ ಹಾಕಿರುವ ಬಿಸಿಸಿಐ, ಹರಾಜಿನಲ್ಲಿ ಆಯ್ಕೆಯಾದ ಆಟಗಾರರು ತಂಡದಿಂದ ಹೊರನಡೆದರೆ ಅವರನ್ನು ಎರಡು ವರ್ಷಗಳ ಕಾಲ ಐಪಿಎಲ್​ನಿಂದ ನಿಷೇಧಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಹರಾಜಿನಲ್ಲಿ ಮಾರಾಟವಾದ ಆಟಗಾರರು ಆಯಾ ತಂಡಗಳಲ್ಲಿ ಆಡಲೇಬೇಕು ಎಂದು ಬಿಸಿಸಿಐ ಬಿಗಿಪಟ್ಟು ಮಾಡಿದೆ. ಫ್ರಾಂಚೈಸಿಗಳಿಗೆ ತೊಂದರೆ ನೀಡುವ ಆಟಗಾರರನ್ನು 2 ವರ್ಷಗಳ ಕಾಲ ನಿಷೇಧಿಸಲು ನಿರ್ಧರಿಸಲಾಗಿದೆ. ಆದರೆ ಆಟಗಾರರು ಗಾಯಗೊಂಡರೆ ಅಥವಾ ಕೌಟುಂಬಿಕ ಬದ್ಧತೆಗಳನ್ನು ಹೊಂದಿದ್ದರೆ, ಅಂತಾರಾಷ್ಟ್ರೀಯ ಸರಣಿಗಳನ್ನು ಆಡಲು ಅವರ ಮಂಡಳಿಯಿಂದ ಕರೆ ಬಂದರೂ ಅದನ್ನು ಕೂಲಂಕುಷವಾಗಿ ಪರಿಶೀಲಿಸಿ ಅವರನ್ನು ಕಳುಹಿಸಲು ಮಂಡಳಿ ನಿರ್ಧರಿಸಿದೆ.

ಅಂದಹಾಗೆ ಬ್ಯಾನ್​ ವಿಚಾರವನ್ನು ಬಿಸಿಸಿಐ ಗಮನಕ್ಕೆ ತಂದ ಕಾವ್ಯಾ ಮಾರನ್ ಅವರನ್ನು ಇದೀಗ ಎಲ್ಲರೂ ಶ್ಲಾಘಿಸುತ್ತಿದ್ದಾರೆ. ನಿಜವಾದ ಶ್ರೇಯ ಅವರಿಗೆ ಸಲ್ಲಬೇಕು. ಇಂತಹ ಪ್ರಮುಖ ವಿಷಯವನ್ನು ಯಾವುದೇ ಅಳುಕಿಲ್ಲದೆ ಬಿಸಿಸಿಐ ಮುಂದೆ ತಂದಿದ್ದಾರೆ ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಸದ್ಯ ಬಿಸಿಸಿಐ ನಿರ್ಧಾರ ಮಾಡಿದೆಯಷ್ಟೇ ಆದರೆ, ಇನ್ನೂ ಅಧಿಕೃತವಾಗಿಲ್ಲ. ಈ ನಿಯಮ ಯಾವಾಗ ಹೊರಬೀಳುತ್ತದೋ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net