

ಹರಿಯಾಣ: ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಮಧ್ಯೆ ಕಳ್ಳರು ತಮ್ಮ ಕೈಚಳಕವನ್ನು ತೋರುತ್ತಿದ್ದಾರೆ. ದಿನ ಕಳೆದಂತೆ ಚೈನ್ ಸ್ನ್ಯಾಚಿಂಗ್ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಹರಿಯಾಣದಲ್ಲಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರ ಸರ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ಸಿನಿಮೀಯ ಶೈಲಿಯಲ್ಲಿ ಬಸ್ ಚಾಲಕ ಹಿಡಿದಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಅಂಗಡಿ ಒಂದರ ಬಳಿ ಬೈಕ್ನಲ್ಲಿ ತಯಾರಾಗಿ ನಿಂತಿರುವ ಮುಸುಕುಧಾರಿಯೊಬ್ಬ ತನ್ನ ಸಹಚರನಿಗಾಗಿ ಕಾಯುತ್ತಿರುತ್ತಾನೆ. ಈ ವೇಳೆ ಇನ್ನೋರ್ವ ಆರೋಪಿಯು ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಸರವನ್ನು ಎಳೆದೊಯ್ದು ಗಾಡಿಯಲ್ಲಿ ಕೂರುತ್ತಾನೆ. ದೂರದಿಂದ ಇದನ್ನು ಗಮನಿಸಿದ ಹರಿಯಾಣ ಸಾರಿಗೆ ಸಂಸ್ಥೆಯ ಬಸ್ ಚಾಲಕ ವೇಗವಾಗಿ ಬಂದು ಬೈಕ್ಗೆ ಡಿಕ್ಕಿ ಹೊಡೆದು ಅವರ ಯೋಜನೆಯನ್ನು ವಿಫಲಗೊಳಿಸುತ್ತಾರೆ.
ಕೆಳಗೆ ಬಿದ್ದರೂ ಸುಮ್ಮನಾಗದ ಆರೋಪಿಗಳು ಓಡಲು ಶುರು ಮಾಡುತ್ತಾರೆ. ಇದನ್ನು ಕಂಡು ಸ್ಥಳೀಯರು ಅವರ ಬೆನ್ನಟ್ಟಲು ಶುರು ಮಾಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಮೆಚ್ಚುಗೆಗೆ ಗುರಿಯಾಗಿದೆ. ಹಲವರು ಸಾರಿಗೆ ಸಂಸ್ಥೆಯ ಚಾಲಕನಿಗೆ ಸರ್ಕಾರ ಸೂಕ್ತ ಬಹುಮಾನ ನೀಡಿ ಗೌರವಿಸಬೇಕು ಎಂದು ಕಮೆಂಟ್ ಮೂಲಕ ಆಗ್ರಹಿಸಿದ್ದಾರೆ.
ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರ ಕುರಿತು ಜನ ಕಿಡಿಕಾರಿದ್ದು, ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದ್ದಾರೆ. ಇತ್ತ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.