

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಸಂಸದರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಧೀಶರು ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ಬಳಿಕ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಅಧಿಕೃತ ಮೂಲಗಳ ಪ್ರಕಾರ, ಪ್ರಜ್ವಲ್ ಅವರು ಮೇ 30 ರಂದು ಮ್ಯೂನಿಚ್ನಿಂದ ಬೆಂಗಳೂರಿಗೆ ಹಿಂತಿರುಗಲಿದ್ದಾರೆ ಎಂದು ಹೇಳಲಾಗಿದ್ದು, ಈಗಾಗಲೇ ಪ್ರಜ್ವಲ್ ವಿಮಾನ ಟಿಕೆಟ್ ಕೂಡ ಬುಕ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಮೇ 31 ರಂದು ಅವರು ನಗರಕ್ಕೆ ಬಂದಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆದ ಏಪ್ರಿಲ್ 26ರಂದು ಪ್ರಜ್ವಲ್ ಮತದಾನ ಮಾಡಿ ವಿದೇಶಕ್ಕೆ ಹಾರಿದ್ದರು. ಬಳಿಕ ಅವರದ್ದು ಎಂದು ಹೇಳಲಾದ ಅಶ್ಲೀಲ ವಿಡಿಯೋಗಳು ಭಾರಿ ಸದ್ದು ಮಾಡಿದ್ದವು. ಇದೇ ಪ್ರಕರಣದಲ್ಲಿ ಪ್ರಜ್ವಲ್ ತಂದೆ ಎಚ್ ಡಿ ರೇವಣ್ಣ ಕೂಡ ಬಂಧನಕ್ಕೀಡಾಗಿ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣಗೂ ಬಂಧನ ಭೀತಿ ಇದ್ದು 31ರಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.