

ಮುಂಬೈ: ಸಿನಿಮಾ ತಾರೆಯರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫ್ಯಾನ್ ಫಾಲೋಯಿಂಗ್ ಇದೆ. ಅಭಿಮಾನಿಗಳು ಅವರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಸೆಲಿಬ್ರಿಟಿಗಳು ಒಂದೇ ಒಂದು ಫೋಟೋವನ್ನು ಶೇರ್ ಮಾಡಿದರೆ ಸಾಕು ಅದು ಕೆಲವೇ ನಿಮಿಷಗಳಲ್ಲಿ ವೈರಲ್ ಆಗುತ್ತದೆ. ಇಂಥಾ ಪರಿಸ್ಥಿತಿಯಲ್ಲಿ IMDb ಅತಿ ಹೆಚ್ಚು ವೀಕ್ಷಿಸಿದ ಟಾಪ್ 100 ಭಾರತೀಯ ತಾರೆಯರ ಪಟ್ಟಿಯನ್ನು ಹಂಚಿಕೊಂಡಿದೆ. 2014 ಏಪ್ರಿಲ್ನಿಂದ 2024ರ ಏಪ್ರಿಲ್ ತನಕ ಐಎಂಡಿಬಿ ವೆಬ್ಸೈಟ್ನಲ್ಲಿ ಜನರು ಅತಿ ಹೆಚ್ಚು ವೀಕ್ಷಿಸಿದ ಸೆಲೆಬ್ರಿಟಿ ಪ್ರೊಫೈಲ್ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಕಳೆದ ದಶಕದಲ್ಲಿ ಹೆಚ್ಚು ವೀಕ್ಷಿಸಿದ ಭಾರತೀಯ ತಾರೆಗಳಲ್ಲಿ ದೀಪಿಕಾ ಪಡುಕೋಣೆ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅವರ ನಂತರ ಶಾರುಖ್ ಖಾನ್ ಎರಡನೇ ಸ್ಥಾನದಲ್ಲಿದ್ದಾರೆ, ಐಶ್ವರ್ಯ ರೈ ಬಚ್ಚನ್ ಮೂರನೇ ಸ್ಥಾನದಲ್ಲಿದ್ದಾರೆ, ಆಲಿಯಾ ಭಟ್ ನಾಲ್ಕನೇ ಸ್ಥಾನದಲ್ಲಿದ್ದಾರೆ ಮತ್ತು ಇರ್ಫಾನ್ ಖಾನ್ ಐದನೇ ಸ್ಥಾನದಲ್ಲಿದ್ದಾರೆ. ಅಮೀರ್ ಖಾನ್ ಆರನೇ, ಸುಶಾಂತ್ ಏಳನೇ, ಸಲ್ಮಾನ್ ಖಾನ್ ಎಂಟನೇ, ಹೃತಿಕ್ ರೋಷನ್ ಒಂಬತ್ತನೇ ಮತ್ತು ಅಕ್ಷಯ್ ಕುಮಾರ್ ಹತ್ತನೇ ಸ್ಥಾನದಲ್ಲಿದ್ದಾರೆ. ವಿಶೇಷ ಎಂದರೆ ಈ ಬಾರಿ ಕನ್ನಡದ ನಟ ಯಶ್ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ 89ನೇ ಸ್ಥಾನದಲ್ಲಿದ್ದಾರೆ.
IMDb ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿರುವ ದೀಪಿಕಾ ಪಡುಕೋಣೆ, ಜಾಗತಿಕ ಪ್ರೇಕ್ಷಕರ ಭಾವನೆಗಳನ್ನು ಪ್ರತಿನಿಧಿಸುವ ಪಟ್ಟಿಯಲ್ಲಿ ನನ್ನನ್ನು ಸೇರಿಸಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಳಾಗಿದ್ದದ್ದೇನೆ ಎಂದು ಧನ್ಯವಾದ ತಿಳಿಸಿದ್ದಾರೆ. ಐಎಂಡಿಬಿ ನಂಬಿಕೆಯ ಸಂಕೇತವಾಗಿದ್ದು ಅದು ಜನರ ಉತ್ಸಾಹ, ಆಸಕ್ತಿಗಳು ಮತ್ತು ಆದ್ಯತೆಗಳ ನಿಜವಾದ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳುತ್ತದೆ. ಈ ಮನ್ನಣೆಯು ನಿಜವಾಗಿಯೂ ಹೃದಯ ಸ್ಪರ್ಷಿಯಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)