

ಮುಂಬೈ: ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವೀಡಿಯೋವು ಚಲನಚಿತ್ರ ಜಗತ್ತನ್ನು ಬೆಚ್ಚಿಬೀಳಿಸಿದ ಬೆನ್ನಲ್ಲೇ ಮುಂಬರುವ 'ಟೈಗರ್ 3' ಚಿತ್ರದಲ್ಲಿ ಕತ್ರಿನಾ ಕೈಫ್ ಟವೆಲ್ ಧರಿಸಿ ಹಾಲಿವುಡ್ ಸ್ಟಂಟ್ ವುಮನ್ ಜೊತೆ ಕಾಣಿಸಿಕೊಂಡಿದ್ದ ಚಿತ್ರವನ್ನು ಡಿಜಿಟಲ್ ಬದಲಾವಣೆ ಅಥವಾ ಡೀಪ್‌ಫೇಕ್ ಮಾಡಿದ್ದು, ಈ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ವೀಡಿಯೋ, ಚಿತ್ರಗಳನ್ನು ಮಾಡು ಬಿಡುತ್ತಿರುವವರ ವಿರುದ್ಧ ನೆಟ್ಟಿಗರು ಮತ್ತು ಚಿತ್ರರಂಗದ ಪ್ರಮುಖರ ಕೆಂಗಣ್ಣು ಬೀರುವಂತಾಗಿದೆ.
'ಟೈಗರ್ 3' ನಲ್ಲಿ ಕತ್ರಿನಾ ಮತ್ತೊಬ್ಬ ಮಹಿಳೆ ಜೊತೆ ಟವೆಲ್ ಧರಿಸಿ ಹೋರಾಡುತ್ತಿರುವುದನ್ನು ತೋರಿಸುತ್ತದೆ. ಆದರೆ ಈಗ ವೈರಲ್ ಆಗಿರುವ ಎಡಿಟ್ ವೀಡಿಯೋದಲ್ಲಿ ಕತ್ರಿನಾ ಟವೆಲ್ ಬದಲಿಗೆ ಚಿಕ್ಕ ಬಿಳಿ ಟಾಪ್ ಮತ್ತು ಮ್ಯಾಚಿಂಗ್ ಬಾಟಮ್ ಧರಿಸಿರುವುದನ್ನು ಕಾಣಬಹುದು. ಎಒನ್ ಪರಿಕರಗಳನ್ನು ಬಳಸಿಕೊಂಡು ಚಿತ್ರವನ್ನು ಬದಲಾಯಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹಲವರು ಕೈಫ್ ಅವರ ಡೀಪ್‌ಫೇಕ್ ಚಿತ್ರಕ್ಕೆ ಬಲವಾಗಿ ಪ್ರತಿಕ್ರಿಯಿಸಿದ್ದಾರೆ. "ಟೈಗರ್ 3 ರ ಕತ್ರಿನಾ ಕೈಫ್ ಅವರ ಟವೆಲ್ ದೃಶ್ಯವನ್ನು ಮಾರ್ಫ್ ಮಾಡಲಾಗಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಎಒನ್ ಒಂದು ಉತ್ತಮ ಸಾಧನವಾಗಿದೆ, ಆದರೆ ಮಹಿಳೆಯರನ್ನು ಮಾರ್ಫ್ ಮಾಡಲು ಅದನ್ನು ಬಳಸುವುದು ಸಂಪೂರ್ಣ ಕ್ರಿಮಿನಲ್ ಅಪರಾಧವಾಗಿದೆ. ಇದು ತೀರಾ ಅಸಹ್ಯವಾಗುತ್ತಿದೆ" ಎಂದು ನೆಟ್ಟಿಗನೊಬ್ಬ ಪ್ರತಿಕ್ರಿಯಿಸಿದ್ದಾನೆ.
"ಡೀಪ್‌ಫೇಕ್ ನಿಜವಾಗಿಯೂ ಭಯಾನಕವಾಗಿದೆ. ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಮತ್ತೊಬ್ಬ ನೆಟ್ಟಿಗ ತಿಳಿಸಿದ್ದಾನೆ. " ಎಒನ್ ದಿನದಿಂದ ದಿನಕ್ಕೆ ಅಪಾಯಕಾರಿಯಾಗುತ್ತಿದೆ" ಎಂದು ಮತ್ತೊಬ್ಬರು ರಶ್ಮಿಕಾ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ್ದಾರೆ.
ಇದರ ನಡುವೆ ಡೀಪ್‌ಫೇಕ್ ವೀಡಿಯೋಗಳು ವೈರಲ್ ಆಗುತ್ತಿದ್ದಂತೆ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.