1 ಲಕ್ಷ ರೂ. ಸ್ಕೂಟರ್​ಗೆ 14 ಲಕ್ಷ ರೂ. ವಿಐಪಿ ನಂಬರ್​! ಅಚ್ಚರಿ ಮೂಡಿಸುತ್ತೆ ಈತನ ಬಿಡ್ಡಿಂಗ್​ | VIP Number

ವಿಜಯವಾಣಿ (69)
Published on

VIP Number: ಕೇವಲ 1 ಲಕ್ಷ ರೂ. ಮೌಲ್ಯದ ಸ್ಕೂಟರ್​ಗೆ ಸಾರಿಗೆ ಇಲಾಖೆಯಿಂದ ಕೂಗಲಾದ ವಿಐಪಿ ಸಂಖ್ಯೆಯನ್ನು ಖರೀದಿಸಿದ ಸಂಜೀವ್ ಕುಮಾರ್​, ದುಬಾರಿ ಮೊತ್ತ ಕೊಟ್ಟು ವಿಶೇಷ ನಂಬರ್​ ಪಡೆದಿರುವುದು ಸದ್ಯ ಹಲವರ ಹುಬ್ಬೇರಿಸಿದೆ.

ಆನ್​ಲೈನ್​ ಹರಾಜಿನಲ್ಲಿ ಕೂಗಲಾದ ವಿಐಪಿ ವಾಹನ ನೋಂದಣಿ ಸಂಖ್ಯೆಯನ್ನು ತನ್ನ ಸ್ಕೂಟಿಗೆ ಬೇಕೆಂದು ಮತ್ತೊಬ್ಬನ ಜೊತೆ ಭಾರೀ ಬಿಡ್ಡಿಂಗ್ ಪೈಪೋಟಿಗಿಳಿದ ಹಿಮಾಚಲ ಪ್ರದೇಶದ ಹಮೀರ್‌ಪುರದ ಸಂಜೀವ್ ಕುಮಾರ್, ಬರೋಬ್ಬರಿ 14 ಲಕ್ಷ ರೂ. ಕೊಟ್ಟು ಈ ವಿಐಪಿ ಸಂಖ್ಯೆಯನ್ನು ಖರೀದಿಸಿದ್ದಾರೆ. ಈ ಮೂಲಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದಾರೆ. ಆನ್‌ಲೈನ್ ಹರಾಜಿನಲ್ಲಿ ಕೂಗಲಾದ HP21C-0001 ನಂಬರ್ ಪ್ಲೇಟ್​ಗಾಗಿ ಜಿದ್ದಾಜಿದ್ದಿ ನಡೆಸಿದ್ದು ಬಹುಜನರಲ್ಲ! ಕೇವಲ ಇಬ್ಬರೇ ಎಂಬುದು ಅಚ್ಚರಿ ಸಂಗತಿ.

ಸೋಲನ್ ಜಿಲ್ಲೆಯ ವ್ಯಕ್ತಿಯೊಬ್ಬರು ಅಂತಿಮವಾಗಿ 13.5 ಲಕ್ಷ ರೂ. ಬಿಡ್​ ಮಾಡಿದರೆ, ಸಂಜೀವ್ ಕುಮಾರ್ ಅವರಿಗಿಂತ ಒಂದು ಹೆಜ್ಜೆ ಮುಂದೋಗಿ, 14 ಲಕ್ಷ ರೂ. ಕೊಟ್ಟು ಈ ವಿಶೇಷ ವಿಐಪಿ ಸಂಖ್ಯೆಯನ್ನು ಖರೀದಿಸಿದ್ದಾರೆ. ಸಂಜೀವ್​ರಿಂದ ಬಂದ ಸಂಪೂರ್ಣ ಮೊತ್ತವನ್ನು ರಾಜ್ಯ ಸರ್ಕಾರದ ಖಜಾನೆಗೆ ಜಮಾ ಮಾಡಲಾಗಿದೆ. ಸಾರಿಗೆ ಅಧಿಕಾರಿಗಳ ಪ್ರಕಾರ, ಇದು ರಾಜ್ಯದಲ್ಲಿ ದ್ವಿಚಕ್ರ ವಾಹನಕ್ಕೆ ನೀಡಲಾದ ಅತ್ಯಂತ ದುಬಾರಿ ನೋಂದಣಿ ಸಂಖ್ಯೆ ಎನ್ನಲಾಗಿದೆ.

ಈ ವಿಷಯ ಹೊರಬೀಳುತ್ತಿದ್ದಂತೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ವ್ಯಾಪಕ ಚರ್ಚೆ ಭುಗಿಲೆದ್ದಿದೆ. ಸಂಜೀವ್ ಅವರ ದುಬಾರಿ ಮೊತ್ತದ ಖರೀದಿಗೆ ಬಹುತೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೇವಲ 1 ಲಕ್ಷ ರೂ. ಸ್ಕೂಟರ್​ಗೆ 14 ಲಕ್ಷ ರೂ. ಮೌಲ್ಯದ ವಿಐಪಿ ನಂಬರ್ ಪ್ಲೇಟ್​ ಅಗತ್ಯವಿತ್ತೇ? ಎಂದು ಕೆಲವರು ಪ್ರಶ್ನಿಸಿದ್ದಾರೆ. ತಮ್ಮ ಖರೀದಿ ಕುರಿತು ಸಂಜೀವ್ ಮತ್ತು ಅವರ ಪುತ್ರ ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net