

Plane Crash : ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ AI-171 ಏರ್ ಇಂಡಿಯಾ ವಿಮಾನವು ಭೀಕರ ಅಪಘಾತಕ್ಕೀಡಾದ ಘಟನೆ ಎಂಥವರ ಮೈನಡುಗಿಸುತ್ತದೆ. ಭಾರತೀಯ ವಿಮಾನಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ ಎನ್ನಲಾದ ಏರ್ ಇಂಡಿಯಾ ವಿಮಾನ ಅಪಘಾತ, 241 ಪ್ರಯಾಣಿಕರ ಪ್ರಾಣವನ್ನು ಕಸಿದುಕೊಳ್ಳುವುದಲ್ಲದೇ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಲ್ಲಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಉಸಿರನ್ನು ಕಸಿದುಕೊಂಡಿತು. ದುರಂತದಲ್ಲಿ ಸುಟ್ಟು ಕರಕಲಾದ ಪ್ರಯಾಣಿಕರ ಮೃತದೇಹಗಳನ್ನು ಡಿಎನ್ಎ ಮೂಲಕ ಪತ್ತೆಹಚ್ಚಲು ಹರಸಾಹಸ ಪಡುತ್ತಿರುವ ವೈದ್ಯ ಇಲಾಖೆ, ಇಲ್ಲಿಯವರೆಗೆ ಒಟ್ಟು 215 ಡಿಎನ್ಎ ಮಾದರಿಗಳನ್ನು ಹೊಂದಿಸಿದ್ದಾರೆ.
ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ರಾಕೇಶ್ ಜೋಶಿ ಮಾತನಾಡಿ, ಒಟ್ಟು 215 ಡಿಎನ್ಎ ಮಾದರಿಗಳನ್ನು ಹೊಂದಿಸಲಾಗಿದ್ದು, ಏರ್ ಇಂಡಿಯಾ ಎಐ -171 ವಿಮಾನ ಅಪಘಾತದಲ್ಲಿ ಮೃತಪಟ್ಟ 198 ಜನರ ಮೃತದೇಹಗಳನ್ನು ಅವರವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. 198 ಪೈಕಿ 149 ಮಂದಿ ಭಾರತೀಯರಾದರೆ, ಏಳು ಮಂದಿ ಪೋರ್ಚುಗೀಸರು, 32 ಮಂದಿ ಬ್ರಿಟಿಷರು ಮತ್ತು ಓರ್ವ ಕೆನಡಾ ಪ್ರಜೆ ಎಂದು ತಿಳಿಸಿದ್ದಾರೆ.
ಪ್ರತಿಯೊಂದು ವಿಮಾನದಲ್ಲಿರುವ ಬ್ಲ್ಯಾಕ್ ಬಾಕ್ಸ್ ವಿಮಾನ ಅಪಘಾತದ ಇಂಚಿಂಚೂ ಮಾಹಿತಿಯನ್ನು ಬಿಚ್ಚಿಡುವ ಒಂದು ಬಲವಾದ ದಾಖಲೆ. ಇದರ ಸಹಾಯದಿಂದ ವಿಮಾನ ಹೇಗೆ ದುರಂತಕ್ಕೀಡಾಯಿತು? ಯಾವ ಕಾರಣಕ್ಕಾಗಿ ಅಪಘಾತದ ಹಾದಿ ಹಿಡಿಯಿತು? ದುರಂತಕ್ಕೂ ಮುನ್ನ ಪೈಲಟ್ ಮಾತು, ಸಂದೇಶವೇನಿತ್ತು? ಎಂಬುದರ ಸಂಪೂರ್ಣ ಮಾಹಿತಿ ಕೇಸರಿ ಬಣ್ಣದ ಬ್ಲ್ಯಾಕ್ ಬಾಕ್ಸ್ನಲ್ಲಿ ಅಡಗಿರುತ್ತದೆ. ಅಹಮದಾಬಾದ್ ವಿಮಾನ ಅಪಘಾತದಲ್ಲಿ ಸುಟ್ಟು ಕರಕಲಾದ ಏರ್ ಇಂಡಿಯಾ ವಿಮಾನದಲ್ಲಿ ಈ ಬ್ಲ್ಯಾಕ್ ಬಾಕ್ಸ್ ಪತ್ತೆಯಾಯಿತು. ತನಿಖೆ ಮುಂದಾದ ಅಧಿಕಾರಿಗಳಿಗೆ ಸದ್ಯ ಅಡಚಣೆ ಉಂಟಾಗಿದ್ದು, ಬ್ಲ್ಯಾಕ್ ಬಾಕ್ಸ್ ಅಪಘಾತದಲ್ಲಿ ಗಂಭೀರವಾಗಿ ಹಾನಿಯಾಗಿದೆ.
ವಿಮಾನ ಅಪಘಾತದ ಬಳಿಕ ಪತ್ತೆಯಾಗಿದ್ದೇ ಆದರೂ ದುರಂತದ ತೀವ್ರತೆಗೆ ಬಾಕ್ಸ್ ಹಾನಿಗೊಂಡಿದೆ ಎಂದು ವರದಿಯಾಗಿದೆ. ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ ಆದ ಡಿಎಫ್ಡಿಆರ್ ಮತ್ತು ಕಾಕ್ಪಿಟ್ ಧ್ವನಿ ರೆಕಾರ್ಡರ್ ಆದ ಸಿವಿಆರ್ ಎರಡನ್ನೂ ಒಳಗೊಂಡ ಬ್ಲ್ಯಾಕ್ ಬಾಕ್ಸ್, ಪ್ರಸ್ತುತ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಮೇಲ್ವಿಚಾರಣೆಯ ಸುರಕ್ಷಿತ ಕಸ್ಟಡಿಯಲ್ಲಿವೆ. ಪ್ರಾಥಮಿಕ ತನಿಖೆ ಪ್ರಕಾರ, ಹಾನಿಗೆ ತುತ್ತಾಗಿರುವ ಬ್ಲ್ಯಾಕ್ ಬಾಕ್ಸ್ ಅನ್ನು ಸೂಕ್ಷ್ಮವಾಗಿ ನಿರ್ವಹಿಸದಿದ್ದರೆ, ಆಂತರಿಕ ದತ್ತಾಂಶ ಸಮಗ್ರತೆಗೆ ತೊಂದರೆ ಆಗುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗಿದೆ,(ಏಜೆನ್ಸೀಸ್).ಇದನ್ನೂ ಓದಿ: ಟೆಸ್ಟ್ನಲ್ಲಿ ಹೊಸ ಅಧ್ಯಾಯಕ್ಕೆ ಭಾರತ ಸಜ್ಜು: ಇಂದಿನಿಂದ ಇಂಗ್ಲೆಂಡ್ ಎದುರು ಕದನ
ಜೂ.12ರ ಮಧ್ಯಾಹ್ನ 1:45ಕ್ಕೆ ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ AI-171 ಏರ್ ಇಂಡಿಯಾ ವಿಮಾನವು ಟೇಕಾಫ್ ಆದ 36 ಸೆಕೆಂಡ್ಗಳಲ್ಲಿ ಭೀಕರ ಅಪಘಾತಕ್ಕೀಡಾಯಿತು. ಮೇಘ್ನಿನಗರ್ನ ಘೇಡಾಸರ್ ಕ್ಯಾಂಪ್ ಪ್ರದೇಶದ ವಸತಿ ಪ್ರದೇಶದಲ್ಲಿದ್ದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿಯಾಗಿ, ಪ್ರಯಾಣಿಕರು ಸೇರಿದಂತೆ ಕನಿಷ್ಠ 274 ಮಂದಿಯ ಪ್ರಾಣ ಕಸಿದುಕೊಂಡ ವಿಮಾನ ಅಪಘಾತ ಭಾರತೀಯ ವಿಮಾನಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ ಎನ್ನಲಾಗಿದೆ.