ಟೆಸ್ಟ್​ನಲ್ಲಿ ಹೊಸ ಅಧ್ಯಾಯಕ್ಕೆ ಭಾರತ ಸಜ್ಜು: ಇಂದಿನಿಂದ ಇಂಗ್ಲೆಂಡ್​ ಎದುರು ಕದನ

New Project
Published on

ಲೀಡ್ಸ್​: ಕೆಲ ಪ್ರಮುಖ ಆಟಗಾರರ ವಿದಾಯದ ಬಳಿಕ ಹೊಸ ನಾಯಕನೊಂದಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಭಾರತ ತಂಡ ಸಜ್ಜಾಗಿದೆ. ಶುಕ್ರವಾರದಿಂದ ನಡೆಯಲಿರುವ ಆತಿಥೇಯ ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ಆಂಡರ್​ಸನ್​&ತೆಂಡುಲ್ಕರ್​ ಟ್ರೋಫಿ ಟೆಸ್ಟ್​ ಸರಣಿಯಲ್ಲಿ ಶುಭಾರಂಭ ಕಾಣುವುದು ಶುಭಮಾನ್​ ಗಿಲ್​ ಪಡೆಯ ಹಂಬಲವಾಗಿದೆ. ಸ್ಥಿತ್ಯಂತರದ ಸವಾಲಿನೊಂದಿಗೆ ಆಂಗ್ಲರ ಆಕ್ರಮಣಕಾರಿ "ಬಾಜ್​ಬಾಲ್​' ಕಾರ್ಯತಂತ್ರವನ್ನು ಮೊದಲ ಬಾರಿ ಅವರದೇ ನೆಲದಲ್ಲಿ ಎದುರಿಸುವ ಸತ್ವಪರೀ ಭಾರತಕ್ಕೆ ಎದುರಾಗಲಿದೆ. ಕ್ರಿಕೆಟ್​ ಜನಕರ ನಾಡಿನಲ್ಲಿ 18 ವರ್ಷಗಳ ಬಳಿಕ ಟೆಸ್ಟ್​ ಸರಣಿ ಜಯಿಸುವ ಕನಸನ್ನೂ ಭಾರತದ ಯುವ,ಅನನುಭವಿಗಳ ತಂಡ ಹೊಂದಿದೆ. ಇದು ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) 4ನೇ ಆವೃತ್ತಿಯಲ್ಲಿ ಉಭಯ ತಂಡಗಳಿಗೂ ಮೊದಲ ಸರಣಿ ಆಗಿದೆ.

ಕಳೆದ ಒಂದೂವರೆ ದಶಕದಿಂದ ಭಾರತೀಯ ಬ್ಯಾಟಿಂಗ್​ ವಿಭಾಗದ ಪ್ರಮುಖ ಆಧಾರ ಎನಿಸಿದ್ದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಅನುಭವಿ ಸ್ಪಿನ್ನರ್​ ಆರ್​. ಅಶ್ವಿನ್​ ನಿವೃತ್ತಿಯ ನಂತರದಲ್ಲಿ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೊಸ ತಂಡವನ್ನು ಕಟ್ಟಲು ಟೀಮ್​ ಇಂಡಿಯಾ ಸಿದ್ಧಗೊಂಡಿದೆ. ನಾಯಕತ್ವದ ಜವಾಬ್ದಾರಿಯೂ ಶುಭಮಾನ್​ ಗಿಲ್​ರಂಥ ಯುವ ತಂಡದ ಹೆಗಲೇರಿದೆ. ಜತೆಗೆ ಗೌತಮ್​ ಗಂಭೀರ್​ ಮಾರ್ಗದರ್ಶನ ಇರಲಿದ್ದು, ಮುಂದಿನ 45 ದಿನಗಳ ಪ್ರವಾಸದಲ್ಲಿ ಭಾರತ ತಂಡ ತೋರುವ ನಿರ್ವಹಣೆ ಭವಿಷ್ಯದ ಬಗೆಗಿನ ಪ್ರಶ್ನೆಗಳಿಗೆ ಉತ್ತರವನ್ನು ನೀಡಲಿದೆ.

ಆತಿಥೇಯ ಇಂಗ್ಲೆಂಡ್​ ಆಲ್ರೌಂಡರ್​ ಬೆನ್​ ಸ್ಟೋಕ್ಸ್​ ಸಾರಥ್ಯ ಮತ್ತು ಬ್ರೆಂಡನ್​ ಮೆಕ್ಕಲಂ ಮಾರ್ಗದರ್ಶನದೊಂದಿಗೆ ಕಳೆದ 2&3 ವರ್ಷಗಳಲ್ಲಿ ಆಕ್ರಮಣಕಾರಿ ಬಾಜ್​ಬಾಲ್​ ಕಾರ್ಯತಂತ್ರದೊಂದಿಗೆ ಹೆಚ್ಚಿನ ಯಶಸ್ಸು ಕಂಡಿದೆ. ಸ್ಟೋಕ್ಸ್​-ಮೆಕ್ಕಲಂ ಕಾಂಬಿನೇಷನ್​ನಲ್ಲಿ ಇಂಗ್ಲೆಂಡ್​ ತವರಿನಲ್ಲಿ ಇದುವರೆಗೆ ಒಂದೂ ಸರಣಿ ಸೋತಿಲ್ಲ. ಆದರೆ ಕಳೆದ ವರ್ಷ ಭಾರತ ತಂಡ ತವರಿನಲ್ಲಿ ಆಂಗ್ಲರ ಬಾಜ್​ಬಾಲ್​ ಕಾರ್ಯತಂತ್ರವನ್ನು ಯಶಸ್ವಿಯಾಗಿ ಹತ್ತಿಕ್ಕಿ, ಸತತ 4 ಜಯದೊಂದಿಗೆ ಸರಣಿ ಒಲಿಸಿಕೊಂಡಿತ್ತು. ಇದೀಗ ಆಂಗ್ಲರ ನೆಲದಲ್ಲೂ ಅವರ ಆಕ್ರಮಣಕಾರಿ ಬ್ಯಾಟಿಂಗ್​ಗೆ ಕಡಿವಾಣ ಹೇರಬೇಕಾದ ಒತ್ತಡ ಭಾರತದ ಮುಂದಿದೆ.

ಟೀಮ್​ ನ್ಯೂಸ್​:

ಭಾರತ: ಬಹುತೇಕ ಅರ್ಧ ತಂಡವಷ್ಟೇ ಖಚಿತವಾಗಿದ್ದು, ತಂಡದ ಉಳಿದರ್ಧ ಸ್ಥಾನವನ್ನು ತುಂಬುವ ಆಟಗಾರರ ಬಗ್ಗೆ ಗೊಂದಲಗಳಿವೆ. ಪ್ರಮುಖವಾಗಿ 3ನೇ ಕ್ರಮಾಂಕದಲ್ಲಿ ಯಾರು ಆಡುವರು ಎಂಬುದು ಸ್ಪಷ್ಟವಿಲ್ಲ. ಕನ್ನಡಿಗ ಕರುಣ್​ ನಾಯರ್​ ಜತೆಗೆ ಟೆಸ್ಟ್​ ಪದಾರ್ಪಣೆ ಬಯಸಿರುವ ಸಾಯಿ ಸುದರ್ಶನ್​ ಈ ಸ್ಥಾನದ ರೇಸ್​ನಲ್ಲಿದ್ದಾರೆ. ಕರುಣ್​ 8 ವರ್ಷಗಳ ಬಳಿಕ ಮರಳಿ ಕಣಕ್ಕಿಳಿಯುವುದು ಬಹುತೇಕ ಖಚಿತವೆನಿಸಿದ್ದರೂ, 3 ಅಥವಾ 6ನೇ ಕ್ರಮಾಂಕದಲ್ಲಿ ಆಡುವರೇ ಎಂಬುದು ಖಚಿತವಿಲ್ಲ. ಇನ್ನು ಏಕೈಕ ಸ್ಪಿನ್ನರ್​ ಸ್ಥಾನಕ್ಕೆ ಜಡೇಜಾ/ಕುಲದೀಪ್​, ವೇಗದ ಬೌಲಿಂಗ್​ ಆಲ್ರೌಂಡರ್​ ಸ್ಥಾನಕ್ಕೆ ನಿತೀಶ್​ ಕುಮಾರ್​ ರೆಡ್ಡಿ/ಶಾರ್ದೂಲ್​ ಠಾಕೂರ್​ ಮತ್ತು 3ನೇ ವೇಗದ ಬೌಲರ್​ ಸ್ಥಾನಕ್ಕೆ ಪ್ರಸಿದ್ಧ ಕೃಷ್ಣ/ಅರ್ಷದೀಪ್​ ಸಿಂಗ್​ ನಡುವೆ ಪೈಪೋಟಿ ಇದೆ.

ಸಂಭಾವ್ಯ ತಂಡ: ಯಶಸ್ವಿ ಜೈಸ್ವಾಲ್​, ಕೆಎಲ್​ ರಾಹುಲ್​, ಸಾಯಿ ಸುದರ್ಶನ್​, ಶುಭಮಾನ್​ ಗಿಲ್​ (ನಾಯಕ), ರಿಷಭ್​ ಪಂತ್​ (ವಿ.ಕೀ), ಕರುಣ್​ ನಾಯರ್​, ರವೀಂದ್ರ ಜಡೇಜಾ/ಕುಲದೀಪ್​ ಯಾದವ್​, ನಿತೀಶ್​ ಕುಮಾರ್​ ರೆಡ್ಡಿ/ಶಾರ್ದೂಲ್​ ಠಾಕೂರ್​, ಮೊಹಮದ್​ ಸಿರಾಜ್​, ಪ್ರಸಿದ್ಧ ಕೃಷ್ಣ/ಅರ್ಷದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ.

ಇಂಗ್ಲೆಂಡ್​: ಆತಿಥೇಯರು ಪಂದ್ಯಕ್ಕೆ 2 ದಿನ ಮುನ್ನವೇ ಆಡುವ 11ರ ಬಳಗ ಅಂತಿಮಗೊಳಿಸಿದ್ದಾರೆ. ಇದರನ್ವಯ, ಆಲ್ರೌಂಡರ್​ ಕ್ರಿಸ್​ ವೋಕ್ಸ್​ ಕಳೆದ ಡಿಸೆಂಬರ್​ ಬಳಿಕ ಮೊದಲ ಬಾರಿ ಕಣಕ್ಕಿಳಿಯಲಿದ್ದರೆ, ವೇಗಿ ಬೆಡನ್​ ಕರ್ಸ್​ ತವರಿನಲ್ಲಿ ಮೊದಲ ಟೆಸ್ಟ್​ ಆಡುವ ಅವಕಾಶ ಪಡೆದಿದ್ದಾರೆ. ಶೋಯಿಬ್​ ಬಶೀರ್​ ತಂಡದಲ್ಲಿರುವ ಏಕೈಕ ಸ್ಪಿನ್ನರ್​ ಆಗಿದ್ದಾರೆ. ಬೇಕಬ್​ ಬೆಥೆಲ್​ ಸ್ಥಾನ ವಂಚಿತರಾಗಿದ್ದಾರೆ. ಒಲಿ ಪೋಪ್​ ಇತ್ತೀಚೆಗಿನ ರನ್​ಬರದ ನಡುವೆ ತಂಡದ ಉಪನಾಯಕನೂ ಆಗಿರುವುದರಿಂದ ಸ್ಥಾನ ಉಳಿಸಿಕೊಂಡಿದ್ದಾರೆ.

ಆಡುವ 11ರ ಬಳಗ: ಜಾಕ್​ ಕ್ರೌಲಿ, ಬೆನ್​ ಡಕೆಟ್​, ಒಲಿ ಪೋಪ್​, ಜೋ ರೂಟ್​, ಹ್ಯಾರಿ ಬ್ರೂಕ್​, ಬೆನ್​ ಸ್ಟೋಕ್ಸ್​ (ನಾಯಕ), ಜೇಮಿ ಸ್ಮಿತ್​ (ವಿ.ಕೀ), ಕ್ರಿಸ್​ ವೋಕ್ಸ್​, ಬೆಡನ್​ ಕರ್ಸ್​, ಜೋಶ್​ ಟಂಗ್​, ಶೋಯಿಬ್​ ಬಶೀರ್​.

ಅನುಭವಿ-ಅನನುಭವಿಗಳ ಸಮರ

ಈ ಸರಣಿ ಅನುಭವಿ-ಅನನುಭವಿಗಳ ಸಮರದಿಂದ ಕುತೂಹಲ ಕೆರಳಿಸಿದೆ. ಆಂಗ್ಲರ ಬ್ಯಾಟಿಂಗ್​ ವಿಭಾಗಕ್ಕೆ ಹೋಲಿಸಿದರೆ ಭಾರತದ್ದು ಅನನುಭವಿ ಬಳಗ. ಆದರೆ ಆಂಗ್ಲರ ಬೌಲಿಂಗ್​ ವಿಭಾಗಕ್ಕೆ ಹೋಲಿಸಿದರೆ ಭಾರತ ಅನುಭವಿಗಳಿಂದ ಕೂಡಿದೆ. ಜೋ ರೂಟ್​ 36 ಶತಕಗಳ ಸಹಿತ 13 ಸಾವಿರಕ್ಕೂ ಅಧಿಕ ರನ್​ ಬಾರಿಸಿದ್ದು, ಭಾರತೀಯ ಬ್ಯಾಟರ್​ಗಳು ಒಟ್ಟಾರೆಯಾಗಿಯೂ ಇಷ್ಟು ರನ್​ ಗಳಿಸಿಲ್ಲ. 58 ಟೆಸ್ಟ್​ಗಳಲ್ಲಿ 3,257 ರನ್​ ಗಳಿಸಿರುವ ಕೆಎಲ್​ ರಾಹುಲ್​ ಅವರೇ ಭಾರತೀಯ ಬ್ಯಾಟಿಂಗ್​ ವಿಭಾಗದ ಅನುಭವಿ ಬ್ಯಾಟರ್​.

ಜತೆಗೆ ಇಂಗ್ಲೆಂಡ್​ನಲ್ಲಿ ಉತ್ತಮ ದಾಖಲೆ ಹೊಂದಿರುವ ರಿಷಭ್​ ಪಂತ್​, ವಿದೇಶಿ ನೆಲದಲ್ಲೂ ಮಿಂಚುವ ತವಕದಲ್ಲಿರುವ ಜೈಸ್ವಾಲ್​, ಗಿಲ್​, 8 ವರ್ಷಗಳ ಬಳಿಕ ಮರಳಿರುವ ಕರುಣ್​ ನಾಯರ್​ ಬಲ ಭಾರತಕ್ಕಿದೆ. ಆಂಗ್ಲರ ಆರಂಭಿಕ ಜೋಡಿಯಾದ ಜಾಕ್​ ಕ್ರೌಲಿ&ಬೆನ್​ ಡಕೆಟ್​ ಭಾರತಕ್ಕೆ ಸವಾಲಾಗುವ ಭೀತಿ ಇದೆ. ಇನ್ನು ಬೌಲಿಂಗ್​ ವಿಭಾಗದಲ್ಲಿ ಬುಮ್ರಾ, ಸಿರಾಜ್​ ಜತೆಗೆ ಜಡೇಜಾ ಭಾರತದ ಅನುಭವಿ ಬೌಲರ್​ಗಳು. ಅತ್ತ ಇಂಗ್ಲೆಂಡ್​ ವೋಕ್ಸ್​, ಸ್ಟೋಕ್ಸ್​ ಹೊರತಾಗಿ ಕರ್ಸ್​, ಟಂಗ್​, ಬಶೀರ್​ರಂಥ ಅನನುಭವಿ ಬೌಲರ್​ಗಳಿಂದ ಕೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net