ಮಾನವಹಕ್ಕುಗಳ ನೆಪದಲ್ಲಿ ಕಾನೂನು ಉಲ್ಲಂಘಿಸಿದರೆ ಕ್ಷಮಿಸಲಾಗದು: ಯುಎನ್​ಎಚ್​ಆರ್​ಸಿಗೆ ಭಾರತದ ಎಚ್ಚರಿಕೆ

Michelle Bachelet Jeria and Anurag Srivastava
Published on

ನವದೆಹಲಿ/ಜಿನೇವಾ: ಮಾನವ ಹಕ್ಕುಗಳ ನೆಪದಲ್ಲಿ ಕಾನೂನು ಉಲ್ಲಂಘಿಸುತ್ತಿದ್ದರೆ ಅದನ್ನು ಕ್ಷಮಿಸಲಾಗದು. ಅಷ್ಟೇ ಅಲ್ಲ ವಿಶ್ವಸಂಸ್ಥೆಯ ಅಂಗಸಂಸ್ಥೆಯಿಂದ ವಿಶಾಲ ದೃಷ್ಟಿಕೋನದ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ ಭಾರತ ಎಚ್ಚರಿಕೆ ನೀಡಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮೀಷನರ್​ ಮಿಷೆಲ್​ ಬಾಚ್ಲೆಟ್​ ಅವರು ಎನ್​ಜಿಒಗಳು ಮತ್ತು ಮಾನವಹಕ್ಕುಗಳ ಕಾರ್ಯಕರ್ತರ ಮೇಲಿನ ನಿರ್ಬಂಧಗಳ ಬಗ್ಗೆ ನೀಡಿದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ, ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರ ಮೂಲಕ ಪ್ರತಿಕ್ರಿಯೆ ನೀಡಿದೆ.

ಫಾರಿನ್ ಕಾಂಟ್ರಿಬ್ಯೂಷನ್​ ರೆಗುಲೇಶನ್ ಆ್ಯಕ್ಟ್​ (ಎಫ್​ಸಿಆರ್​ಎ) ವಿಷಯಕ್ಕೆ ಸಂಬಂಧಿಸಿ ಯುಎನ್​ ಮಾನವ ಹಕ್ಕುಗಳ ಹೈ ಕಮೀಷನರ್​ ಅವರ ಕೆಲವು ಹೇಳಿಕೆಗಳನ್ನು ಭಾರತ ಗಮನಿಸಿದೆ. ಭಾರತವು ಪ್ರಜಾತಂತ್ರದ ಆಡಳಿತ ವ್ಯವಸ್ಥೆ ಹೊಂದಿದ್ದು, ಕಾನೂನಿನ ಆಳ್ವಿಕೆ ಮತ್ತು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದೆ. ಕಾನೂನು ರೂಪಿಸುವುದು ನಿಜವಾಗಿಯೂ ಅದು ಸಾರ್ವಭೌಮತೆಯ ಹಕ್ಕು. ಹೀಗಾಗಿ ಕಾನೂನು ಉಲ್ಲಂಘನೆ ಕ್ಷಮಾರ್ಹವಲ್ಲ. ಅದೇ ರೀತಿ, ಮಾನವ ಹಕ್ಕುಗಳ ನೆಪದಲ್ಲಿ ಕಾನೂನು ಉಲ್ಲಂಘಿಸುತ್ತಿದ್ದರೆ ಅದನ್ನು ಕ್ಷಮಿಸಲಾಗದು. ಅಷ್ಟೇ ಅಲ್ಲ ವಿಶ್ವಸಂಸ್ಥೆಯ ಅಂಗಸಂಸ್ಥೆಯಿಂದ ವಿಶಾಲ ದೃಷ್ಟಿಕೋನದ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಶ್ರೀವಾಸ್ತವ ಪ್ರತಿಕ್ರಿಯೆ ನೀಡಿದ್ದಾರೆ.

ಇದಕ್ಕೂ ಮುನ್ನ ಬಾಚ್ಲೆಟ್​, ಎನ್​ಜಿಒಗಳ ಫಾರಿನ್ ಫಂಡ್​ ಮೇಲಿನ ನಿರ್ಬಂಧ, ಮಾನವ ಹಕ್ಕುಗಳ ಕಾರ್ಯಕರ್ತರ ಬಂಧನಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದಲ್ಲದೆ, ಅವರ ಸುರಕ್ಷತೆ ಮತ್ತು ಹಕ್ಕುಗಳನ್ನು ಕಾಪಾಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದರು. ಮಾನವ ಹಕ್ಕುಗಳ ಧ್ವನಿಯನ್ನು ಕುಗ್ಗಿಸುವ ಪ್ರಯತ್ನ ಇಲ್ಲಿ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net