ವಿಜಯಾನಂದ ಯಶಸ್ಸಿಗೆ ವಿನಯಾನಂದ; ವಿನಯಾ ಪ್ರಸಾದ್ ನಟನೆಗೆ ಪ್ರೇಕ್ಷಕರ ಮೆಚ್ಚುಗೆ

Vijayanand
Published on

ಬೆಂಗಳೂರು: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ‘ವಿಜಯಾನಂದ’ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕನ್ನಡ ಮಾತ್ರವಲ್ಲದೇ, ಬೇರೆ ಭಾಷೆಗಳಲ್ಲಿ, ಹೊರ ದೇಶಗಳಲ್ಲು ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಚಿತ್ರದಲ್ಲಿ ಅನಂತ್ ನಾಗ್, ರವಿಚಂದ್ರನ್, ಪ್ರಕಾಶ್ ಬೆಳವಾಡಿ, ವಿನಯ ಪ್ರಸಾದ್ ಅವರಂತಹ ದಿಗ್ಗಜರು ನಟಿಸಿದ್ದಾರೆ.

ಡಾ. ವಿಜಯ ಸಂಕೇಶ್ವರ ತಾಯಿ ಚಂದ್ರಮ್ಮ ಪಾತ್ರದಲ್ಲಿ ವಿನಯಾ ಪ್ರಸಾದ್ ಅಭಿನಯಿಸಿದ್ದು, ಅವರ ನಟನೆಗೆ ಸಿನಿಪ್ರಿಯರು ಮನಸೋತಿದ್ದಾರೆ. ಪತಿ ಮತ್ತು ಮಗನ ಹಠಗಳ ನಡುವೆ ಸಿಲುಕಿ ಒದ್ದಾಡುವ ಚಂದ್ರಮ್ಮ ಪಾತ್ರಕ್ಕೆ ಜೀವ ತುಂಬಿರುವ ಅವರು, ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದಾರೆ.

ಮೂರು ದಶಕಗಳ ಸಿನಿಮಾ ಜರ್ನಿಯಲ್ಲಿ ವಿನಯಾ ಪ್ರಸಾದ್ ಹಲವಾರು ಚಿತ್ರಗಳಲ್ಲಿ, ಬೇರೆ ಬೇರೆ ಭಾಷೆಗಳಲ್ಲಿ ನಟಿಸಿದ್ದಾರೆ. ಆದರೆ, ಅವರು ಇದುವರೆಗೆ ನಟಿಸಿರುವ ಮೊದಲ ಬಯೋಪಿಕ್ ‘ವಿಜಯಾನಂದ’. ಈ ಕುರಿತು ವಿಜಯವಾಣಿ ಜತೆ ಅವರು, ‘ಇದುವರೆಗೆ ನನಗೆ ಅತ್ಯಂತ ಖುಷಿ ನೀಡಿದ, ಗೌರವ ತಂದ ಪಾತ್ರ ಮತ್ತು ಸಿನಿಮಾ ಇದು. ಡಾ. ವಿಜಯ ಸಂಕೇಶ್ವರ ಸರ್ ಮತ್ತು ಡಾ. ಆನಂದ ಸಂಕೇಶ್ವರ ಅವರಿಗೆ ಹ್ಯಾಟ್ಸ್ ಆಫ್’ ಎಂದು ಸಂತಸ ವ್ಯಕ್ತಪಡಿಸಿದ್ದರು. ಜತೆಗೆ ಚಂದ್ರಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ, ‘ಇದು ನನ್ನ ಕರಿಯರ್​ನ ಮೊದಲ ವಾಸ್ತವದ ಪಾತ್ರ. ಚಂದ್ರಮ್ಮನವರ 30 ವಯಸ್ಸಿನಿಂದ 70 ವಯಸ್ಸಿನವರೆಗಿನ ಜರ್ನಿ ನನ್ನ ಪಾತ್ರದ ಮೂಲಕ ಹೇಳಿದ್ದೇವೆ. ಬೇರೆ ಬೇರೆ ವಯಸ್ಸಿನಲ್ಲಿ ಬೇರೆ ಬೇರೆ ವೇಷಭೂಷಣದ ಜತೆಗೆ ಅಭಿನಯವೂ ಬದಲಾಗಬೇಕು. ಹೀಗಾಗಿ ಪ್ರತಿಯೊಂದು ವಿಷಯದಲ್ಲು ಅವರ ನಿಜ ಜೀವನಕ್ಕೆ ಹತ್ತಿರವಿರುವಂತೆ ಚಿತ್ರೀಕರಿಸಿದ್ದೇವೆ. ಆ ಜರ್ನಿಯನ್ನು ನಾನು ಬಹಳ ಎಂಜಾಯ್ ಮಾಡಿದ್ದೇನೆ’ ಎಂದು ಖುಷಿ ಹಂಚಿಕೊಂಡಿದ್ದರು. ಹಾಗೇ, ‘ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ಸಂಸ್ಥೆ ಇನ್ನಷ್ಟು ಸಿನಿಮಾಗಳನ್ನು ಮಾಡಬೇಕು. ಅದರಿಂದ ಕನ್ನಡ ಚಿತ್ರರಂಗದ ಬೆಲೆ ಮತ್ತಷ್ಟು ಹೆಚ್ಚಲಿದೆ. ‘ವಿಜಯಾನಂದ’ ಚಿತ್ರವನ್ನು, ಕನಸು ಕಾಣುವ ಪ್ರತಿಯೊಬ್ಬರೂ ನೋಡಲೇಬೇಕು. ಏಕೆಂದರೆ ಇದು ಆ ಕನಸನ್ನು ಹೇಗೆ ನನಸು ಮಾಡಿಕೊಳ್ಳಬಹುದು ಎಂಬ ಉತ್ಸಾಹ ತುಂಬುವ ಸಿನಿಮಾ’ ಎಂದು ಚಿತ್ರದ ಬಗ್ಗೆ ಹೇಳಿಕೊಂಡಿದ್ದರು.

ಡಾ.ವಿಜಯ ಸಂಕೇಶ್ವರ ಅವರ ಜೀವನ ಆಧಾರಿತ ಚಿತ್ರ ಯುವ ಪೀಳಿಗೆಗೆ ದೊಡ್ಡ ಸ್ಪೂರ್ತಿ ಆಗಿದೆ. ಇದೇ ರೀತಿಯಲ್ಲಿಯೇ ನಾವುಗಳು ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹುಟ್ಟುಹಾಕುತ್ತದೆ. ಈ ಚಿತ್ರ ಬದುಕಿಗೆ ಪಾಠವಾಗಿದೆ. | ಡಿ.ಆರ್.ಈಶ್ವರಪ್ಪ ವ್ಯವಸ್ಥಾಪಕ, ಭೀಮಸಮುದ್ರ ಅಡಕೆ ಸಿಂಡಿಕೇಟ್ ನಮ್ಮ ಜೀವನದಲ್ಲಿ ನೋಡಲೇಬೇಕಾದ ಸಿನಿಮಾ ಇದು. ಅದರಲ್ಲೂ ಯುವಕರು ವಿಜಯಾನಂದ ಸಿನಿಮಾ ನೋಡುವುದರಿಂದ ಸ್ಪೂರ್ತಿ ಮತ್ತು ಪ್ರೇರಣೆ ಪಡೆಯುವುದು ಖಂಡಿತ. ಪ್ರತಿಯೊಬ್ಬರ ನಟನೆಯೂ ಅದ್ಭುತವಾಗಿದೆ. ನನ್ನಂತಹ ವಿಜಯ ಸಂಕೇಶ್ವರ ಅವರ ಅಭಿಮಾನಿಗೆ ಕಣ್ಣು ಮತ್ತು ಮನಸ್ಸಿಗೆ ಹಬ್ಬವೇ ಸರಿ. ಇಂತಹ ಒಂದು ಅದ್ಭುತ ಸಿನಿಮಾವನ್ನು ತೆರೆ ಮೇಲೆ ತಂದ ಆನಂದ ಸಂಕೇಶ್ವರರಿಗೆ ಅಭಿನಂದನೆಗಳು. | ಡಾ. ಮಹಾವೀರ್ ಹಾಲೆಮನೆ ಸಾಗರ

ಸಾಧಕರಾಗಲು ಛಲ ತುಂಬಿದ ವಿಜಯಾನಂದ

ಉತ್ತಮ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿರುವ ‘ವಿಜಯಾನಂದ’ ಸಿನಿಮಾವನ್ನು ಶುಕ್ರವಾರ (ಡಿ.16) ಭೀಮಸಮುದ್ರದ ಭೀಮೇಶ್ವರ ಬಾಲವಿಕಾಸ ಕನ್ನಡ ಮತ್ತು ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ವೀಕ್ಷಿಸಿದರು. ಸಾಧನೆಗೆ ಮಿತಿ ಇಲ್ಲ ಎಂಬುದಕ್ಕೆ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಬಯೋಪಿಕ್ ಸಿನಿಮಾ ಹುಮ್ಮಸ್ಸು, ಉತ್ಸಾಹದ ಜತೆ ಸ್ಪೂರ್ತಿ ತುಂಬಿತು ಎಂದು ಹಲವು ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಸಾಧನೆಯ ಶಿಖರ ಏರಲು ಅನೇಕ ಮೈಲಿಗಲ್ಲುಗಳನ್ನು ದಾಟುವ ಡಾ. ವಿಜಯ ಸಂಕೇಶ್ವರ ಅವರ ಧೈರ್ಯ, ಉತ್ಸಾಹ ಕಂಡು ವಿದ್ಯಾರ್ಥಿಗಳು ಅಚ್ಚರಿಗೊಂಡರು. ಚಿತ್ರದ ಹಾಡುಗಳಿಗೆ, ಉತ್ತಮ ಸಂದೇಶ ನೀಡುವ ಡೈಲಾಗ್​ಗಳಿಗೆ ಚಪ್ಪಾಳೆಗಳ ಸುರಿಮಳೆಗೈದರು. ಜೀವನದಲ್ಲಿ ಏನಾದರೂ ಸಾಧಿಸಿ, ಸಮಾಜದಲ್ಲಿ ಗೌರವಯುತ ಸ್ಥಾನಕ್ಕೆ ಏರಬೇಕು ಎಂಬ ಉತ್ಸಾಹ ವೀಕ್ಷಿಸಿದ ಬಹುತೇಕರಲ್ಲಿ ಮೂಡಿಸಿತು. ಇಡೀ ಸಿನಿಮಾದಲ್ಲಿನ ಪಾತ್ರ, ಕತೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದರು.

ವಿಜಯಾನಂದ ಚಿತ್ರಕ್ಕೆ ಸ್ವಾಮೀಜಿಗಳ ಮೆಚ್ಚುಗೆ

ವಿಜಯಾನಂದ ಚಿತ್ರ ವೀಕ್ಷಣೆಗೆ ಗಂಗಾವತಿ ಶಿವೆ ಚಿತ್ರಮಂದಿರಕ್ಕೆ ಬಂದ ಶ್ರೀ ಗವಿಸಿದ್ದಯ್ಯ ಸ್ವಾಮೀಜಿ, ಶ್ರೀ ಪದ್ಮಾಕ್ಷರಯ್ಯ ಸ್ವಾಮೀಜಿ ಅವರೊಂದಿಗೆ ಭಕ್ತರು.

ಅರಳಹಳ್ಳಿ ಬೃಹನ್ಮಠದ ಶ್ರೀ ಗವಿಸಿದ್ದಯ್ಯಸ್ವಾಮೀಜಿ ಮತ್ತು ಗುಳೇಕಲ್ ಬೃಹನ್ಮಠದ ಶ್ರೀ ಪದ್ಮಾಕ್ಷರಯ್ಯ ಸ್ವಾಮೀಜಿ ನೇತೃತ್ವದಲ್ಲಿ ಜಂಗಮ ಸಮಾಜದ ಮುಖಂಡರು ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀಗಳು, ಉದ್ಯಮಿಯೊಬ್ಬರ ಯಶೋಗಾಥೆಯನ್ನು ವಿಭಿನ್ನ ರೀತಿಯಲ್ಲಿ ಚಿತ್ರೀಕರಿಸಿರುವ ಬಗ್ಗೆ ಪ್ರಶಂಸಿಸಿದ್ದು, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವ ಪ್ರತಿಯೊಬ್ಬರು ಚಿತ್ರ ನೋಡುವಂತೆ ಸಲಹೆ ನೀಡಿದರು. ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಮಾತನಾಡಿ, ಸಾಧಕರಿಗೆ ಡಾ.ವಿಜಯ ಸಂಕೇಶ್ವರ ಒಂದು ವಿಶ್ವವಿದ್ಯಾಲಯವಿದ್ದಂತೆ. ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವಂತೆ ವಿಜಯಾನಂದ ಚಿತ್ರ ಸಾಕ್ಷಿಯಾಗಿದ್ದು, ಯುವಕರು ಮತ್ತು ಸಾಧಕರಿಗೆ ಚಿತ್ರ ಸ್ಪೂರ್ತಿ ಎಂದರು. ಎಪಿಎಂಸಿ ನಿವೃತ್ತ ಕಾರ್ಯದರ್ಶಿ ಪಂಪಾಪತಿ ಹುರಕಡ್ಲಿ, ಮುಖಂಡರಾದ ವೀರಭದ್ರಪ್ಪ ಸಾಲಗುಂದಾ, ಶಿವಪ್ರಕಾಶ ಅಕ್ಕಿ, ಚನ್ನಬಸವಕೊಟಗಿ, ಎಂ.ಸಾಲಿಮಠ ಇತರರಿದ್ದರು.

ವಿದ್ಯಾರ್ಥಿಗಳ ಸೆಳೆಯುತ್ತಿರುವ ವಿಜಯಾನಂದ

ಬೈಲಹೊಂಗಲ ಪಟ್ಟಣದಲ್ಲಿ ಶುಕ್ರವಾರ ಬಾಪೂಜಿ ಶಿಕ್ಷಣ ಸಂಸ್ಥೆಯ ಬಾಪೂಜಿ ಪಿಯುಸಿ, ಪದವಿ ಕಾಲೇಜಿನ 250ಕ್ಕೂ ಅಧಿಕ ವಿದ್ಯಾರ್ಥಿಗಳು ‘ವಿಜಯಾನಂದ’ ಚಿತ್ರ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಅಲ್ಲದೆ, ಡಾ.ವಿಜಯ ಸಂಕೇಶ್ವರ ಅವರ ಜೀವನವನ್ನಾಧರಿಸಿದ ವಿಜಯಾನಂದ ಚಿತ್ರ ನಮ್ಮ ಬದುಕಿಗೆ ಒಂದು ಸ್ಪೂರ್ತಿಯಾಗಿದೆ. ಸಾಧಿಸುವವರಿಗೆ ಪ್ರೇರಣೆಯಾಗಿರುವ ಈ ಚಿತ್ರವನ್ನು ಪ್ರತಿಯೊಬ್ಬರೂ ನೋಡಬೇಕು ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net