ಪ್ರಿಯತಮೆ ಹುಡುಕಾಟದಲ್ಲಿ ನಟ ವಿನಯ್ ರಾಜ್​ಕುಮಾರ್!

ವಿಜಯವಾಣಿ-2024-01-02T123824.980
Published on

ಬೆಂಗಳೂರು: ಒಂದು ಸರಳ ಪ್ರೇಮಕಥೆಯ ರೂವಾರಿ ಸಿಂಪಲ್ ಸುನಿ ಹೊಸ ವರ್ಷಕ್ಕೆ ಸಂಗೀತ ಪ್ರಿಯರಿಗೆ ಚೆಂದದ ಹಾಡನ್ನು ಉಡುಗೊರೆಯಾಗಿ ನೀಡಿದ್ದಾರೆ. ನೀನ್ಯಾರೆಲೆ..ನಿನಗಾಗಿಯೇ..ಈ ಜೀವ ಭಾವ ಸೋಜಿಗ ಎಂಬ ಕ್ಯಾಚಿ ಮ್ಯಾಚಿ ಸಾಹಿತ್ಯದ ಮೆಲೋಡಿ ಮಸ್ತಿಯನ್ನು ರಿಲೀಸ್ ಮಾಡಿದ್ದಾರೆ. ಸಿದ್ದು ಕೋಡಿಪುರ ಹಾಗೂ ಸುನಿ ಸಾಹಿತ್ಯದ ಈ ಹಾಡಿಗೆ ಅರ್ಮಾನ್‌ ಮಲಿಕ್‌ ಧ್ವನಿಯಾಗಿದ್ದಾರೆ.

ಇದೇ ಮೊದಲ ಬಾರಿಗೆ ದೊಡ್ಮನೆಯ ಹೀರೋ ವಿನಯ್ ರಾಜ್ ಕುಮಾರ್​ಗೆ ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ವಿನಯ್‌ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ಸ್ವಾತಿಷ್ಠ ಕೃಷ್ಣನ್, ಮಲ್ಲಿಕಾ ಸಿಂಗ್ ಎಂಬ ಇಬ್ಬರು ನಾಯಕಿಯಾರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಾಘವೇಂದ್ರ ರಾಜ್​ಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು, ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರ ತಾರಾ ಬಳಗವಿದೆ.

ತಮ್ಮ ವಿಭಿನ್ನ ಸಿನಿಮಾ ಹಾಗೂ ಡೈಲಾಗ್​ನಿಂದಲೇ ಹೆಸರುವಾಸಿಯಾಗಿರುವ ನಿರ್ದೇಶಕ ಸಿಂಪಲ್ ಸುನಿ, ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಚಿತ್ರದ ಮೂಲಕ ಇಲ್ಲಿಯವರೆಗೂ ಚಿತ್ರರಸಿಕರ ಗಮನ ಸೆಳೆಯುತ್ತಾ ಬಂದಿದ್ದಾರೆ.

'ಅವತಾರ್ ಪುರುಷ' ಬಳಿಕ ಸುನಿ 'ಗತವೈಭವ' ಸಿನಿಮಾ ಕೈಗೆತ್ತಿಕೊಂಡಿದ್ದರು. ಬಳಿಕ ಸದ್ದಿಲ್ಲದೇ 'ಒಂದು ಸರಳ ಪ್ರೇಮಕಥೆ' ಶುರು ಮಾಡಿ, ಇದೀಗ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬಿಡುಗಡೆಗೆ ಎದುರುನೋಡುತ್ತಿದೆ. ಅಂದಹಾಗೆ ಈ ಸಿನಿಮಾವನ್ನು ಮೈಸೂರು ರಮೇಶ್‌ ನಿರ್ಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net