ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಹಳ್ಳಿಗರು; ಸ್ಥಳಕ್ಕೆ ಹೋದ ಅಧಿಕಾರಿಗಳನ್ನೂ ಅವರೇ ಕಾಪಾಡಬೇಕಾಯ್ತು !

Village
Published on

ಡೆಹ್ರಾಡೂನ್​: ಉತ್ತರಾಖಂಡದ ನಕಾಯಲ್​ ಎಂಬ ಹಳ್ಳಿಯ ಜನರು ಸ್ವಾತಂತ್ರ್ಯ ದಿನಾಚರಣೆಯಂದೇ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ಥಳೀಯ ಜಿಲ್ಲಾ ಆಡಳಿತಕ್ಕೆ ಬೆದರಿಕೆ ಹಾಕಿದ ಘಟನೆ ನಡೆದಿದೆ.

ರಸ್ತೆ ಹಾಗೂ ಸೇತುವೆ ಕಟ್ಟುವ ಸಂಬಂಧ ಈ ಬೆದರಿಕೆ ಹಾಕಿದ್ದಾರೆ. ಎಷ್ಟೇ ಬಾರಿ ಮನವಿ ಮಾಡಿದರೂ ಜಿಲ್ಲಾಡಳಿತ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ ಹಳ್ಳಿಗರು, ಉಪವಿಭಾಗೀಯ ಮ್ಯಾಜಿಸ್ಟ್ರೇಟ್​ ಕಚೇರಿ ಎದುರೇ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ.

ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಹಾಗೇ ಇನ್ನು ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ನಕಾಯಲ್​ ಗ್ರಾಮ ನೈನಿತಾಲ್​​ನ ಹಲ್ದ್ವಾನಿಯಿಂದ 9 ಕಿ.ಮೀ.ದೂರದಲ್ಲಿದೆ. ಈ ಹಳ್ಳಿಗೆ ಒಂದು ರಸ್ತೆಯಿಲ್ಲ. ಸಣ್ಣ ಸೇತುವೆ ನಿರ್ಮಿಸಿ ಸಂಪರ್ಕ ಸಾಧಿಸಿದ್ದಾರೆ. ಸ್ವಾತಂತ್ರ್ಯ ಬಂದು 74ವರ್ಷವಾದರೂ ನಮಗೆ ಸರಿಯಾದ ಸೌಕರ್ಯ ನೀಡಲಿಲ್ಲ ಎಂದು ಹಳ್ಳಿಗರು ಆರೋಪಿಸಿದ್ದಾರೆ. ಇಷ್ಟು ದಿನ ಮನವಿ ಸಲ್ಲಿಸಿ ಸಾಕಾಯ್ತು..ಹಾಗಾಗಿ ಈ ಬಾರಿ ಇಂಥ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಈಚೆಗೆ ಭಾರಿ ಸುದ್ದಿ ಮಾಡಿದ್ದ ಡೊನಾಲ್ಡ್‌ ಟ್ರಂಪ್‌ ತಮ್ಮ ರಾಬರ್ಟ್‌ ನಿಧನ

ಹಳ್ಳಿಯಿಂದ ಮುಖ್ಯ ಸಿಟಿಗೆ ಸಂಪರ್ಕ ಸಾಧಿಸಬೇಕಾದರೆ ಇಲ್ಲಿ 2 ಕಿಮೀ ರಸ್ತೆ ನಿರ್ಮಾಣವಾಗಬೇಕು ಹಾಗೂ ಒಂದು ಸುಸಜ್ಜಿತ ಸೇತುವೆ ಅಗತ್ಯವಿದೆ. ಮಳೆಗಾಲದಲ್ಲಂತೂ ನದಿ ನೀರು ತುಂಬಿ ಹರಿಯುವುದರಿಂದ ಮೂರ್ನಾಲ್ಕು ತಿಂಗಳು ಹೊರಗೆ ಹೋಗಲು ಸಾಧ್ಯವೇ ಇಲ್ಲದಂತೆ ಆಗುತ್ತದೆ ಎಂದು ಹಳ್ಳಿಗರು ಹೇಳಿದ್ದಾರೆ.ಇದರಿಂದಾಗಿ ಅದೆಷ್ಟೋ ಜನರ ಜೀವ ಹೋಗಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಯಿದ್ದಾಗ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಮಳೆಗಾಲದಲ್ಲಿ ಅಕ್ಷರಶಃ ನರಕವಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.ಇದನ್ನೂ ಓದಿ: ಮೃತ ರೈತನ ಕುಟುಂಬಕ್ಕೆ ಡಿಸಿ ಸಾಂತ್ವನ ; ವಿಧವಾ ವೇತನದ ಮಂಜೂರಾತಿ ಪತ್ರ ವಿತರಣೆ

ಇನ್ನು ಹಳ್ಳಿಗರ ಪ್ರತಿಭಟನೆ ಮಣಿದು ಆಗಮಿಸಿದ ಅಧಿಕಾರಿಗಳಿಗೂ ಸಹ ನದಿಯನ್ನು ದಾಟಿ ಹೋಗಲು ಆಗಲಿಲ್ಲ. ವಾಹನ ಚಲಾಯಿಸಲಾಗದೆ ಪರದಾಡಿದರು. ನಂತರ ಹಳ್ಳಿಗರೇ ಟ್ರ್ಯಾಕ್ಟರ್​ ತಂದು, ಕಾರನ್ನು ಎಳೆದು, ಅಧಿಕಾರಿಗಳನ್ನು ಕಾಪಾಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net