ಮೃತ ರೈತನ ಕುಟುಂಬಕ್ಕೆ ಡಿಸಿ ಸಾಂತ್ವನ ; ವಿಧವಾ ವೇತನದ ಮಂಜೂರಾತಿ ಪತ್ರ ವಿತರಣೆ

15 budikote 1
Published on

ಬೂದಿಕೋಟೆ: ಬೂದಿಕೋಟೆ ಹೋಬಳಿ ಬಲಮಂದೆ ಪಂಚಾಯಿತಿ ವ್ಯಾಪ್ತಿಯ ದೊಡ್ಡಪೊನ್ನಾಂಡಹಳ್ಳಿಯಲ್ಲಿ ಇತ್ತೀಚೆಗೆ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ರೈತ ಧರ್ಮೋಜಿರಾವ್ ಮನೆಗೆ ಜಿಲ್ಲಾಧಿಕಾರಿ ಸತ್ಯಭಾಮ ಶನಿವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ವಿಧವಾ ವೇತನದ ಮಂಜೂರಾತಿ ಪತ್ರ ನೀಡಿದರು.

ಈ ವೇಳೆ ಮಾತನಾಡಿ, ಮೃತರ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಕೊಡಿಸಲಾಗುವುದು. ಸಧ್ಯದಲ್ಲೇ ಅರಣ್ಯ ಇಲಾಖೆಯಿಂದ 7.5 ಲಕ್ಷ ರೂ. ಪರಿಹಾರದ ಚೆಕ್ ನೀಡಲಾಗುತ್ತದೆ. ಮೃತರ ಪತ್ನಿಗೆ ಇಲಾಖೆಯಿಂದ ಪ್ರತಿ ತಿಂಗಳು 2000 ರೂ. ಮಾಸಾಶನ ಬರಲಿದೆ ಎಂದು ಅವರು ಪಂಚಾಯಿತಿಯಿಂದ ಮನೆ ಹಾಗೂ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಡಲು ಪಿಡಿಒಗೆ ಆದೇಶ ನೀಡಿದರು.

ಆನೆ ದಾಳಿ ನಿಯಂತ್ರಿಸಲು ಆನೆ ಕಾರಿಡಾರ್ ಯೋಜನೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಬಹಳ ದೊಡ್ಡ ಯೋಜನೆಯಾಗಿರುವುದರಿಂದ ಸ್ವಲ್ಪ ತಡವಾಗಬಹುದು. ಯೋಜನೆ ಅನುಷ್ಠಾನಕ್ಕೆ ಬರುವವರೆಗೆ ರೈತರು ಆದಷ್ಟು ರಾತ್ರಿ ಸಮಯದಲ್ಲಿ ತೋಟಕ್ಕೆ ಹೋಗುವುದನ್ನು ನಿಲ್ಲಿಸಬೇಕು. ಅಕಸ್ಮಾತ್ ಬೆಳೆ ಹಾನಿಯಾದರೆ ಅರಣ್ಯ ಇಲಾಖೆಯಿಂದ ಬೆಳೆ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು. ಅರಣ್ಯ ಇಲಾಖೆ ಡಿಸಿಎಫ್ ಶಿವಶಂಕರ್, ಎಸಿಎಫ್ ನಾಗರಾಜ್, ಆರ್‌ಎಫ್‌ಒಗಳಾದ ಸಂತೋಷ್, ದಿವಾಕರ್, ತಾಪಂ ಇಒ ವೆಂಕಟೇಶಪ್ಪ, ಎಡಿ. ಮಂಜುನಾಥ್, ಪಿಎಸ್‌ಐ ದಯಾನಂದ್, ಪಿಡಿಒ ಮಧುಚಂದ್ರ ಇದ್ದರು.

ಯರಗೋಳ್ ಡ್ಯಾಂ ವೀಕ್ಷಣೆ: ಜಿಲ್ಲಾಧಿಕಾರಿ ಸತ್ಯಭಾಮ ಯರಗೋಳ್ ಡ್ಯಾಂಗೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದರು. ಡ್ಯಾಂನಿಂದ ಕುಡಿಯುವ ನೀರು ಸಿಗುವ ಜತೆಗೆ ಬಹಳಷ್ಟು ಅಂತರ್ಜಲ ವೃದ್ಧಿಯಾಗುತ್ತದೆ. ಡ್ಯಾಂ ಭರ್ತಿಯಾದರೆ ಜಿಲ್ಲೆಯಲ್ಲಿ ಉತ್ತಮ ಪ್ರವಾಸಿ ತಾಣವಾಗಿ ಮಾರ್ಪಡಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net