ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಗ್ರಾಮಸ್ಥರು

ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಗ್ರಾಮಸ್ಥರು
Published on

ಸಿದ್ದಾಪುರ: ಗ್ರಾಮದ ಕಸ ವಿಲೇವಾರಿ ಸಮಸ್ಯೆ, ಆಟದ ಮೈದಾನ, ಕಾಡಾನೆ ಹಾವಳಿ ಮುಂತಾದ ಸಮಸ್ಯೆಗಳ ಬಗ್ಗೆ ಗುರುವಾರ ನಡೆದ ಸಿದ್ದಾಪುರ ಗ್ರಾ.ಪಂ. ಗ್ರಾಮಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷರಾದ ಪ್ರೇಮಾ ಗೋಪಾಲ್ ಅಧ್ಯಕ್ಷತೆಯಲ್ಲಿ ಗುರುವಾರ ಗ್ರಾಪಂ ಸಭಾಂಗಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಎಚ್.ಬಿ.ರಮೇಶ್ ಮಾತನಾಡಿ, ಗ್ರಾಮದಲ್ಲಿ ಕಸ ವಿಲೇವಾರಿಯಾಗದೆ ರಸ್ತೆ ಬದಿಯಲ್ಲಿ ಕಸ ಹಾಕಲಾಗುತ್ತಿದೆ ಎಂದರು. ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ಪಳನಿಸ್ವಾಮಿ, ಈಗಾಗಲೇ ಸಿದ್ದಾಪುರ ಹಾಗೂ ಮಾಲ್ದಾರೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಉಂಟಾಗುವ ತ್ಯಾಜ್ಯವಿಲೇವಾರಿ ಮಾಡಲು ಆರೆಂಜ್ ಕೌಂಟಿ ರೆಸಾರ್ಟ್ ಜಾಗ ನೀಡಿದ್ದು, ಶೀಘ್ರದಲ್ಲಿ ಶಾಸಕರ ನೇತೃತ್ವದಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದರು.

ವಿ.ಕೆ. ಬಶೀರ್ ಮಾತನಾಡಿ, ಪಟ್ಟಣದಲ್ಲಿ ಕೋಳಿ, ಕುರಿ ಹಾಗೂ ಹಂದಿ ಮಾಂಸ ಮಾರಾಟ ಮಳಿಗೆಗಳಿಂದ ಶುಲ್ಕ ಪಡೆದಿಲ್ಲ.

ಮಪಂಚಾಯಿತಿಗೆ ನಷ್ಟವಾಗುತ್ತಿದೆ ಎಂದರು. ಎಚ್.ಬಿ.ರಮೇಶ್ ಲೈಸೆನ್ಸ್ ಪಡೆಯದೇ ಇರುವ ವ್ಯಾಪಾರಿಗಳ ಅಂಗಡಿಗೆ ಬೀಗ ಹಾಕುವಂತೆ ಒತ್ತಾಯಿಸಿದರು. ಪಿಡಿಒ ಶಫೀಕ್ ಮಾತನಾಡಿ ಹಣ ನೀಡದ ವ್ಯಾಪಾರಿಗಳಿಗೆ ನೋಟೀಸ್ ನೀಡಲಾಗುವುದು ಎಂದರು.

ಎ.ಎಸ್ ಮುಸ್ತಫ ಮಾತನಾಡಿ, ಗ್ರಾಮದಲ್ಲಿ ಯುವಕರಿಗೆ ಆಟವಾಡಲು ಸೂಕ್ತ ಮೈದಾನವಿಲ್ಲ. ಸಿದ್ದಾಪುರ ಪ್ರೌಢಶಾಲೆಯ ಮೈದಾನದಲ್ಲಿ ಆಟವಾಡಲು ಅವಕಾಶ ನೀಡಬೇಕೆಂದು ಕಳೆದ ಮಹಾಸಭೆಯಲ್ಲಿ ತಿಳಿಸಿದ್ದು, ಈವರೆಗೂ ಕ್ರಮ ಕೈಗೊಂಡಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಪಿಡಿಒ ಶಫೀಕ್ ಈಗಾಗಲೇ ತಹಸೀಲ್ದಾರರ ನೇತೃತ್ವದಲ್ಲಿ ಶಾಲೆಗೆ ತೆರಳಿ ಪರಿಶೀಲಿಸಲಾಗಿದೆ. ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಗ್ರಾಮದ ದರ್ಶನ್ ಮಾತನಾಡಿ, ಕರಡಿಗೋಡು ಗ್ರಾಮಕ್ಕೆ ತೆರಳುವ ರಸ್ತೆಯ ಬದಿ ವಾಹನ ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದು, ಗ್ರಾಮಸ್ಥರಿಗೆ ತೊಂದರೆಯಾಗಿದೆ. ಕರಡಿಗೋಡು ರಸ್ತೆಯ ಬದಿಯಲ್ಲಿ ಕಸ ಹಾಕಲಾಗುತ್ತಿದೆ. ಪಟ್ಟಣದ ತ್ಯಾಜ್ಯವನ್ನು ಗ್ರಾಮದ ಕಾಫಿ ತೋಟಕ್ಕೆ ಹಾಕಲಾಗುತ್ತಿದೆ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಬೇಕು ಎಂದರು.

ಪಿ.ಕೆ ಚಂದ್ರನ್ ಮಾತನಾಡಿ, ದೊಡ್ಡ ಗ್ರಾಮವಾಗಿರುವ ಸಿದ್ದಾಪುರದಲ್ಲಿ ಖಾಯಂ ಪಿಡಿಒ ಇಲ್ಲದೇ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಖಾಯಂ ಪಿಡಿಒ ನೇಮಕ ಮಾಡಬೇಕು. ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂದರು.

ಗ್ರಾ.ಪಂ. ಕಾರ್ಯದರ್ಶಿ ಮೋಹನ್, ಗ್ರಾಮದ ಪ್ರಮುಖರಾದ ಉತ್ತಯ್ಯ, ಹುಸೈನ್ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net