

ಎನ್.ಆರ್.ಪುರ: ಕಳೆದ 12 ವಷರ್ಗಳಿಂದ ಸೀತೂರು ವೃತ್ತದ ಉಪ ವಲಯದ ಅರಣ್ಯಾಧಿಕಾರಿಯಾಗಿದ್ದ ವರುಣ ಸಿ. ಶೆಟ್ಟಿ ಅವರ ಕರ್ತವ್ಯನಿಷ್ಠೆ ಮತ್ತು ಸೇವೆ ಎಲ್ಲರಿಗೂ ಮಾದರಿ ಎಂದು ಕೊನೋಡಿ ಪಂಚವಟಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್ ಹೇಳಿದರು.
ಬೆಮ್ಮನೆಯಲ್ಲಿ ವಿನಾಯಕ ಸೇವಾ ಸಮಿತಿ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ಸೀತೂರು ವೃತ್ತದ ವಲಯ ಅರಣ್ಯಾಧಿಕಾರಿ ವರುಣ ಶೆಟ್ಟಿ ಅವರಿಗೆ ಪಂಚವಟಿ ಗ್ರಾಮ ಅರಣ್ಯ ಸಮಿತಿ, ಗಣೇಶೋತ್ಸವ ಸಮಿತಿ ಹಾಗೂ ಗ್ರಾಮಸ್ಥರಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.
1996ರಲ್ಲಿ ಕೊನೋಡಿ ಪಂಚವಟಿ ಗ್ರಾಮ ಅರಣ್ಯ ಸಮಿತಿ ಪ್ರಾರಂಭವಾಯಿತು. ಕಳೆದ 12 ವಷರ್ದಿಂದ ಈ ಗ್ರಾಮ ಅರಣ್ಯ ಸಮಿತಿಗೆ ವರುಣ ಶೆಟ್ಟಿ ಅವರೇ ಕಾರ್ಯದರ್ಶಿಯಾಗಿದ್ದರು. ಮುಂದಿನ ದಿನಗಳಲ್ಲಿ ವರುಣ ಅವರು ಮುಂಬಡ್ತಿ ಹೊಂದಿ ತಾಲೂಕು ಅರಣ್ಯ ಅಧಿಕಾರಿಯಾಗಿ ಬರಲಿ ಎಂದು ಆಶಯ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವರುಣ ಶೆಟ್ಟಿ, ಸೀತೂರು ವೃತ್ತದ ವ್ಯಾಪ್ತಿಯಲ್ಲಿ ಬೆಳ್ಳೂರು, ಕೊನೋಡಿ, ಸೀತೂರು ಗ್ರಾಮ ಅರಣ್ಯ ಸಮಿತಿಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಕೊಪ್ಪ ಅರಣ್ಯ ವಿಭಾಗದಲ್ಲೇ ಈ 3 ಗ್ರಾಮ ಅರಣ್ಯ ಸಮಿತಿಗಳು ಮೊದಲನೇ ಸ್ಥಾನದಲ್ಲಿವೆ ಎಂದರು. ಸೀತೂರು ಗ್ರಾಪಂ ಸದಸ್ಯ ಎಚ್.ಇ.ದಿವಾಕರ, ಮುಖಂಡ ಬೆಮ್ಮನೆ ಮೋಹನ್, ಬೆಮ್ಮನೆ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಸುಬೋದ್, ಮುಖಂಡರಾದ ಯೋಗೇಂದ್ರ, ಎಚ್.ಇ.ಮಹೇಶ್, ಸಂಪತ್‌ಕುಮಾರ್, ಕೊನೋಡಿ ಗಣೇಶ್, ವನಪಾಲಕ ರಾಘವೇಂದ್ರ ಇತರರಿದ್ದರು.