ಗ್ಯಾಂಗ್​ಸ್ಟರ್​ ಅವತಾರದಲ್ಲಿ ವಿಕ್ರಮ್ ರವಿಚಂದ್ರನ್​; ಪುತ್ರನ ಚಿತ್ರಕ್ಕೆ ತಂದೆ ಕೊಟ್ಟ ಟೈಟಲ್ ಏನು?

Mudhol Movie Poster with Vikram Ravichandran
Published on

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಅವರ ಎರಡನೇ ಸಿನಿಮಾದ ಶೀರ್ಷಿಕೆ ಇಂದು ಅನಾವರಣಗೊಂಡಿದೆ. ವಿಶೇಷವೆಂದರೆ ಪುತ್ರನ ಈ ಚಿತ್ರಕ್ಕೆ ರವಿಚಂದ್ರನ್ ಅವರೇ ಟೈಟಲ್ ಫಿಕ್ಸ್ ಮಾಡಿದ್ದಾರೆ. ಅರ್ಥಾತ್, ಈ ಸಿನಿಮಾದ ಶೀರ್ಷಿಕೆ ಸೂಚಿಸಿದ್ದೇ ಕ್ರೇಜಿಸ್ಟಾರ್.

ಇಂದು ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ವಿಕ್ರಮ್ ರವಿಚಂದ್ರನ್ ಅಭಿನಯದ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಯಿತು. ಟೈಟಲ್ ಟೀಸರ್ ಮೂಲಕ ಎಂಟ್ರಿ ಕೊಟ್ಟ ವಿಕ್ರಮ್ ರವಿಚಂದ್ರನ್ ಕಂಪ್ಲೀಟ್ ಗ್ಯಾಂಗ್​​ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡರು. 'ತ್ರಿವಿಕ್ರಮ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದ್ದ ವಿಕ್ಕಿ, ಈಗ ರಾ ಹಾಗೂ ಗ್ಯಾಂಗ್​​ಸ್ಟರ್​​ ಸಬ್ಜೆಕ್ಟ್ ಮೂಲಕ ಸಿನಿರಸಿಕರನ್ನು ರಂಜಿಸಲು ಮುಂದಾಗಿದ್ದಾರೆ. ಅಂದಹಾಗೆ ಪುತ್ರನ ಈ ಚಿತ್ರಕ್ಕೆ ರವಿಚಂದ್ರನ್ ಕೊಟ್ಟಿರುವ ಟೈಟಲ್ 'ಮುಧೋಳ್'.

ತ್ರಿವಿಕ್ರಮ ರಿಲೀಸ್ ಆಗಿದ್ದು ಜೂ.24, ನನ್ನ ಎರಡನೇ ಸಿನಿಮಾದ ಟೈಟಲ್ ಇಂದು ಲಾಂಚ್ ಮಾಡುತ್ತಿದ್ದೇವೆ ಎಂದ ವಿಕ್ರಮ್ ರವಿಚಂದ್ರನ್​, ತಾವೊಂದು ಬ್ರ್ಯಾಂಡ್ ಸೆಟ್ ಮಾಡುವ ಆಸೆ ಇಟ್ಟುಕೊಂಡಿದ್ದನ್ನೂ ಹೇಳಿಕೊಂಡರು. ತುಂಬಾ ಮಂದಿ 'ವಿಕೆಆರ್' ಎಂದರೆ ಏನು ಎಂದು ಕೇಳುತ್ತಿದ್ದರು. 'ವಿಕೆಆರ್' ಅಂದರೆ ವಿಕ್ರಮ್ ರವಿಚಂದ್ರನ್ ಅಂತ. ವಿಕೆಆರ್ ಬ್ರ್ಯಾಂಡ್ ಶುರು ಮಾಡೋಣ ಅಂದುಕೊಂಡಿದ್ದೇನೆ. ವಿ ಅಂದರೆ ವೀರಸ್ವಾಮಿ, ಆರ್​ ಅಂದರೆ ರವಿಚಂದ್ರನ್, ಮಧ್ಯ ಕೆ ಅಂದರೆ ಕನ್ನಡ ಎಂದು ಹೇಳಿದ ಅವರು, ಪ್ರಯತ್ನ ನಿರಂತರ, ಪ್ರಯತ್ನ ಮಾಡಿ ಜೀವನದಲ್ಲಿ ಗೆಲುವುದು ಮುಖ್ಯವಲ್ಲ, ಜೀವನವನ್ನೇ ಗೆಲ್ಲಬಹುದು. ಆ ರೀತಿ ಒಂದು ತಂಡ ನಿಮ್ಮ ಮುಂದಿದ್ದು, ಇದು ನನ್ನ ಎರಡನೇ ಹೆಜ್ಜೆ, ನಿಮ್ಮ ಪ್ರೀತಿ ಹಾರೈಕೆ ಹೀಗೇ ಇರಲಿ ಎಂದು ಅಭಿಮಾನಿಗಳನ್ನು ಕೇಳಿಕೊಂಡರು.

ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕ, ಸಿನಿಮಾ ಬರಹಗಾರ ಆಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಮುಧೋಳ್ ಸಿನಿಮಾಗೆ ಆಕ್ಷನ್-ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಹೆಜ್ಜೆ. ಈ ಸಿನಿಮಾದಲ್ಲಿನ ಶ್ವಾನದ ಕುರಿತು ನಿರ್ದೇಶಕ ಕಾರ್ತಿಕ್ ಮಾತನಾಡುತ್ತ, 'ಮುಧೋಳ್'ಗಾಗಿ ತುಂಬಾ ಕಡೆ ಹುಡುಕಾಡಿದೆವು. ನಮ್ಮ ಮ್ಯಾನೇಜರ್ ಹತ್ತಿರ ಹೇಳಿದೆ. ತ್ಯಾಗರಾಜ್ ಎಂಬುವವರು ಆ ಶ್ವಾನವನ್ನು ತರಬೇತುಗೊಳಿಸಿದ್ದಾರೆ. ಟೈಟಲ್ ಟೀಸರ್​ನಲ್ಲಿ ಶ್ವಾನ ಚಾಕು ಕಚ್ಚಿಕೊಂಡು ಬರುವ ದೃಶ್ಯಕ್ಕಾಗಿ 23 ಟೇಕ್ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಸಂಭಾಷಣೆಗಾರ ಮಾಸ್ತಿ ಮಾತನಾಡಿ, ಈಶ್ವರಿ ಕಂಬೈನ್ಸ್ ಒಂದು ಪರಂಪರೆ. ನಾಯಕಿಯರು ರವಿಚಂದ್ರನ್ ಅವರ ಜೊತೆ ಕೆಲಸ ಮಾಡಬೇಕು ಎಂದು ಕೇಳಿಕೊಳ್ಳುತ್ತಿದ್ದರು. ಅದೇ ರೀತಿ ರೈಟರ್ಸ್ ಆ ಸಂಸ್ಥೆ ಜೊತೆ ಕೆಲಸ ಮಾಡಬೇಕು ಅಂದುಕೊಳ್ಳುತ್ತಿದ್ದಾರೆ. ನಾನು ಆ ಸಂಸ್ಥೆಯ ವಿಕ್ರಮ್ ಅವರ ಜೊತೆ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ ಎಂದರು.

ಎಸ್. ತಮನ್ ಜೊತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಚಂದ್ರನ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡುತ್ತಿದ್ದು, ಟಗರು, ಸಲಗ ಸಿನಿಮಾ ಖ್ಯಾತಿ ಮಾಸ್ತಿ ಸಂಭಾಷಣೆ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಡಾ.ಕೆ.ರವಿವರ್ಮಾ ಆ್ಯಕ್ಷನ್ ಈ ಚಿತ್ರಕ್ಕಿದೆ. ತಾಂಡವ್ ಸ್ಟುಡಿಯೋಸ್ ಬ್ಯಾನರ್​ನಡಿ ರಕ್ಷಾ ವಿಜಯಕುಮಾರ್ ಹಾಗೂ ಸಿಲ್ಜು ಕಣ್ಣನ್ ನಿರ್ಮಾಣ ಮಾಡುತ್ತಿರುವ 'ಮಧೋಳ್' ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿ ಅಭಿಲಾಷ್​, ರಘು ಮ್ಯೂಟಂಟ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಈಗಾಗ್ಲೇ 30 ದಿನಗಳ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಮತ್ತಷ್ಟು ಕಲಾವಿದರ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net