

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಈಗ ಕಂಟೆಂಟ್ ಓರಿಯೆಂಟಲ್ ಚಿತ್ರಗಳದೇ ಕಾರುಬಾರು. ಅಂತಹ ಉತ್ತಮ ಕಂಟೆಂಟ್ನೊಂದಿಗೆ ಬರುತ್ತಿದೆ "ವಿಕಾಸ ಪರ್ವ" ಸಿನಿಮಾ. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷರಾದ ಭಾ.ಮ. ಹರೀಶ್ ಹಾಗೂ ನಿರ್ದೇಶಕ ಕೆ.ಎಂ. ಚೈತನ್ಯ ಚಿತ್ರದ ಟೈಟಲ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
"ವಿಕಾಸ ಪರ್ವ ಸಾಮಾಜಿಕ ಕಳಕಳಿಯುಳ್ಳ ಚಿತ್ರ. ಉತ್ತಮ ಸಂದೇಶ ಸಹ ಇದೆ. ಕಿರುತೆರೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ರೋಹಿತ್ ನಾಗೇಶ್ ಈ ಚಿತ್ರದಲ್ಲಿ ಪ್ರಮುಖಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಸ್ವಾತಿ, ನಿಶಿತಾ ಗೌಡ, ಅಶ್ವಿನ್ ಹಾಸನ್, ಬಿಲ್ವ, ಬಲ ರಾಜವಾಡಿ ಮುಂತಾದವರ ತಾರಾಬಳಗವಿದೆ" ಎಂದು ರಾಜ್ಯ ಪ್ರಶಸ್ತಿ ವಿಜೇತ ವಿಶೃತ್ ನಾಯಕ್ ಹೇಳಿದರು.
"ಮೈಂಡ್ ಥಾಟ್ಸ್ ಮೀಡಿಯಾ ಲಾಂಛನದಲ್ಲಿ ಸಮೀರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅನ್ಬು ಅರಸ್ ನಿರ್ದೇಶಿಸುತ್ತಿದ್ದಾರೆ. ನಾನು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇನೆ" ಎಂದು ವಿಶೃತ್ ಹೇಳಿದ್ದಾರೆ.
ಚಿತ್ರತಂಡದ ಸಹಕಾರದಿಂದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ದ್ವಿತೀಯ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ ಎಂದು ನಿರ್ದೇಶಕ ಅನ್ಬು ಅರಸ್ ಹೇಳಿದರು. ವಿಶೃತ್ ನಾಯಕ್ ಹೇಳಿದ ಕಥೆ ನನಗೆ ಇಷ್ಟವಾಯಿತು ಎಂದು ಮಾತನಾಡಿದ ನಟ ರೋಹಿತ್ ನಾಗೇಶ್, ಉತ್ತಮ ಕಂಟೆಂಟ್ನೊಂದಿಗೆ ಬರುತ್ತಿರುವ ಈ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು. ಈ ಸಿನಿಮಾ ಕುರಿತಂತೆ ಮತ್ತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.