

ಹಾವೇರಿ: ಜಿಲ್ಲಾಡಳಿತ ಭವನದ ಆಧಾರ್ ಸ್ಪಂದನಾ ಕೇಂದ್ರದಲ್ಲಿ 8 ವರ್ಷಗಳಿಂದ ಆಧಾರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ನನ್ನನ್ನು ಯಾವುದೇ ಕಾರಣವಿಲ್ಲದೇ ಕೆಲಸದಿಂದ ತೆಗೆದು ಹಾಕಲಾಗಿದೆ. ನನ್ನ ತಪ್ಪು ಇಲ್ಲದಿದ್ದರೂ ನನ್ನ ಐ.ಡಿ. ಬ್ಲಾಕ್ ಲಿಸ್ಟ್ಗೆ ಸೇರಿಸಲಾಗಿದೆ. ನನಗೆ ನ್ಯಾಯ ಕೊಡಿಸಬೇಕು ಎಂದು ಎನ್.ಎ. ಗುರುಪ್ರಕಾಶ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015ರಿಂದ 2023ರ ಜೂನ್ವರೆಗೆ ಆಧಾರ್ ಆಪರೇಟರ್ ಆಗಿ ಕೆಲಸ ಮಾಡಿದ್ದೇನೆ. 2023ರ ಜನವರಿಯಲ್ಲಿ ಕುಷ್ಠರೋಗಿಯೊಬ್ಬರಿಗೆ ನಿಯಮಾನುಸಾರ ಅವರ ಹತ್ತು ಬೆರಳಲ್ಲಿ ಎರಡು ಬೆರಳು ಹಾಗೂ ಎರಡು ಅಕ್ಷಿಪಟಲ ಸ್ಕ್ಯಾನ್ ಮಾಡಿ, ಆಧಾರ್ ನೋಂದಣಿ ಮಾಡಿಕೊಟ್ಟಿದ್ದೆ. ಆದರೆ, ಎಲ್ಲ ಬೆರಳುಗಳು ಸ್ಕ್ಯಾನ್ ಆಗದ ಕಾರಣ ಬೆರಳಚ್ಚು ಹೊಂದಾಣಿಕೆಯಾಗಿಲ್ಲ ಎಂದು ಹಲವು ಬಾರಿ ತೋರಿಸಿದ ಕಾರಣ ನನ್ನ ಐ.ಡಿ. ಬ್ಲಾಕ್ ಆಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲದ ಕಾರಣ ನನ್ನ ಐ.ಡಿ.ಯನ್ನು ಅನ್ಬ್ಲಾಕ್ ಮಾಡಿ ಕೆಲಸದಲ್ಲಿ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಅನ್ಯಾಯ, ಅವ್ಯವಹಾರದ ಬಗ್ಗೆ ಧ್ವನಿ ಎತ್ತಿದ್ದ ನನಗೆ ಈ ಶಿಕ್ಷೆ ನೀಡಲಾಗಿದೆ. ಸ್ಪಂದನಾ ಜಿಲ್ಲಾ ಸಂಯೋಜಕರ ಕುಮ್ಮಕ್ಕಿನಿಂದ ನನ್ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. 6 ತಿಂಗಳ ಸಂಬಳವನ್ನೂ ನೀಡಿಲ್ಲ. 32 ತಿಂಗಳ ಪಿ.ಎಫ್ ಮತ್ತು ಇ.ಎಸ್.ಐ ಸೇರಿದಂತೆ ಯಾವುದೇ ಸೌಲಭ್ಯ ನೀಡಿಲ್ಲ. ಈ ಬಗ್ಗೆ ಬೆಂಗಳೂರು ಮತ್ತು ದೆಹಲಿಯಲ್ಲಿರುವ ಯುಐಡಿ ಕಚೇರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.
ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದೆ. 15 ದಿನದೊಳಗೆ ಸಮಸ್ಯೆ ಬಗೆಹರಿಸುವಂತೆ ಆಧಾರ್ ಯೋಜನೆಯ ಜಿಲ್ಲಾ ಸಂಯೋಜಕರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಈವರೆಗೆ ಸಮಸ್ಯೆ ಬಗೆಹರಿದಿಲ್ಲ. ಸರ್ಕಾರ ನಿಗದಿಪಡಿಸಿದ ಶುಲ್ಕ ಹೊರತುಪಡಿಸಿ ನಾನು ಯಾರಿಂದಲೂ ಹೆಚ್ಚುವರಿ ಹಣ ಪಡೆದಿಲ್ಲ. ಯಾವುದೇ ತಪ್ಪು ಮಾಡದ ನನಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.