

ವಿಜಯಪುರ: ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾನುವಾರ ಬಬಲೇಶ್ವರ ವಿಧಾನಸಭೆ ಕ್ಷೇತ್ರದ ಬಿಜೆಪಿ ಪ್ರಶಿಕ್ಷಣ ವರ್ಗದ ಶಿಬಿರ ಮುಗಿಸಿಕೊಂಡು ಬರುವ ವೇಳೆ ಸಾರವಾಡ ಬಳಿ ಈ ಘಟನೆ ಸಂಭವಿಸಿದೆ.
ಸಾರವಾಡದ ಈಶ್ವರ ದೇವಸ್ಥಾನದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಅದನ್ನು ಮುಗಿಸಿಕೊಂಡು ವಿಜಯಪುರಕ್ಕೆ ವಿಜುಗೌಡ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.
ಎರಡೂ ಕಾರುಗಳು ಜಖಂಗೊಂಡಿದ್ದು, ವಿಜುಗೌಡ ಪಾಟೀಲ ಅವರ ಎದೆಗೆ ಪೆಟ್ಟುಬಿದ್ದಿದೆ. ಅವರ ಆಪ್ತ ಸಹಾಯಕ ಪ್ರಶಾಂತ ಕಾಲಿಗೂ ಪೆಟ್ಟಾಗಿದೆ. ಸದ್ಯ ವಿಜುಗೌಡರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಪ್ತ ಸಹಾಯಕ ಪ್ರಶಾಂತ ತಿಳಿಸಿದ್ದಾರೆ.