More

    ಸಾವಿನ ಮನೆಯಲ್ಲೂ ಬಿಜೆಪಿ-ಜೆಡಿಎಸ್​ ರಾಜಕೀಯ?

    ಮಂಡ್ಯ: ಕೆ.ಆರ್​.ಪೇಟೆ ತಾಲೂಕಿನ ಚೌಡೇನಹಳ್ಳಿ ಗ್ರಾಮದ ರೈತನೊಬ್ಬ ಸಾಲಬಾಧೆ ತಾಳಲಾರದೆ ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದರು. ಮೃತನ ಕುಟುಂಬಕ್ಕೆ ಸಾಂತ್ವನ ಹೇಳುವ ನೆಪದಲ್ಲಿ ಸಾವಿನ ಮನೆಯಲ್ಲೂ ಜೆಡಿಎಸ್ ಮತ್ತು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಮಾತು ಕೇಳಿಬಂದಿದೆ.

    ಮೃತನ ಮನೆಗೆ ಭಾನುವಾರ ಭೇಟಿ ನೀಡುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಶನಿವಾರವೇ ಕಾರ್ಯಕ್ರಮ ನಿಗದಿ ಮಾಡಿದ್ದರು. ಈ ನಡುವೆ ಇಂದು ನಿಖಿಲ್​ ಆಗಮನಕ್ಕೂ ಮುನ್ನ ದಿಢೀರ್ ಭೇಟಿ ನೀಡುವ ಮೂಲಕ ಸಚಿವ ನಾರಾಯಣಗೌಡ ಅಚ್ಚರಿ ಮೂಡಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಮಂಡ್ಯ ಬಿಟ್ಟಿದ್ದ ನಿಖಿಲ್ ಕುಮಾರಸ್ವಾಮಿ, ಇದೀಗ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮತ್ತೆ ಪ್ಲ್ಯಾನ್​ ಮಾಡಿದ್ದಾರೆ. ಕೆ.ಆರ್. ಪೇಟೆ ಕ್ಷೇತ್ರ ಕಳೆದುಕೊಂಡ ಜೆಡಿಎಸ್​ಗೆ ಶಕ್ತಿ ತುಂಬಲು ಯೋಚಿಸಿರುವ ಎಚ್​ಡಿಕೆ, ಯೂಥ್ ಐಕಾನ್ ಆಗಿರೋ ನಿಖಿಲ್ ಮೂಲಕ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಪ್ಲ್ಯಾನ್ ಮಾಡಿದ್ದಾರೆ.

    ಭಾನುವಾರ ಚೌಡೇನಹಳ್ಳಿಯ ಮೃತ ರೈತ ನಂಜೇಗೌಡನ ಮನೆಗೆ ಭೇಟಿ ನೀಡಿದ ನಿಖಿಲ್​, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಜಿಲ್ಲೆಯ ಜೆಡಿಎಸ್ ಮುಖಂಡರು ಸಾಥ್ ನೀಡಿದರು. ನಿಖಿಲ್ ಆಗಮನಕ್ಕೂ ಮುನ್ನ ಚೌಡೇನಹಳ್ಳಿಗೆ ಭೇಟಿ ನೀಡಿದ ಸಚಿವ ನಾರಾಯಣಗೌಡ, ಮೃತನ ಕುಟುಂಬಕ್ಕೆ ವೈಯಕ್ತಿಕವಾಗಿ 25 ಸಾವಿರ ರೂ. ನೆರವು ನೀಡಿದರು. ಬಳಿಕ ಮಾತನಾಡಿದ ಸಚಿವರು, ನಿಖಿಲ್ ಬರ್ತಾರೆ ಎಂದು ನಾನು ರೈತನ ಮನೆಗೆ ಬಂದವನಲ್ಲ. ನಾನು ಸ್ಥಳೀಯ ಶಾಸಕ. ಅವರಿಂದ ನಾನು ಕಲಿಯುವ ಅವಶ್ಯಕತೆ ಇಲ್ಲ. ಈ ಹಿಂದೆಯೂ ನೂರಾರು ರೈತರ ಮನೆಗಳಿಗೆ ಹೋಗಿ ಬಂದಿದ್ದೇನೆ. ಮುಂದೆಯೂ ರೈತರ ಪರವಾಗಿ ಇರುತ್ತೇನೆ ಎಂದರು.

    ರೈತರು ಆತ್ಮಹತ್ಯೆಗೆ ಶರಣಾಗೋದು ತಪ್ಪು ನಿರ್ಧಾರ. ನಮ್ಮ ಬಳಿ ಸಮಸ್ಯೆ ಹೇಳಿಕೊಂಡರೆ ಪರಿಹರಿಸುತ್ತಿದ್ದೆವು. ಆತುರಕ್ಕೆ ಬಿದ್ದು ನಂಜೇಗೌಡ್ರು ಸಾವಿನ ನಿರ್ಧಾರ ಮಾಡಿಬಿಟ್ಟರು. ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ. ಸರ್ಕಾರದಿಂದ ಕುಟುಂಬಕ್ಕೆ ಶೀಘ್ರ ಪರಿಹಾರ ಕೊಡಿಸುವೆ ಎಂದು ಸಚಿವರು ಹೇಳಿದರು.

    ವಿವಾಹದ ಬಳಿಕ ಮಂಡ್ಯ ಜಿಲ್ಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತೆ ಆ್ಯಕ್ಟೀವ್​ ಆಗುತ್ತಿದ್ದು, ಮುಂಬರುವ ಗ್ರಾಪಂ ಚುನಾವಣೆಗೆ ನಿಖಿಲ್ ಮೂಲಕ ಪಕ್ಷ ಸಂಘಟನೆಗೆ ಜೆಡಿಎಸ್ ಮುಂದಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಶುರುವಾಗಿದೆ.

    ಯೋಗೀಶ್​ಗೌಡ ಹತ್ಯೆಗೆ ಸಂಚು ರೂಪಿಸಿದ್ದೇ ಮಾಜಿ ಸಚಿವ! ಇತ್ತ ಕೊಲೆ, ಅತ್ತ ದಿಲ್ಲಿಗೆ… ಸಿಬಿಐ ವರದಿಯಲ್ಲಿದೆ ಸ್ಫೋಟಕ ರಹಸ್ಯ

    ಆರ್​ ಆರ್​ ನಗರ- ಶಿರಾದಲ್ಲಿ ಗೆಲುವು ಯಾರಿಗೆ? ಹೊರಬಿತ್ತು ಮತದಾನೋತ್ತರ ಸಮೀಕ್ಷೆಯ ಫಲಿತಾಂಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts