ಟಿವಿಕೆ ಮಾನ್ಯತೆ ಪಡೆದ ರಾಜಕೀಯ ಪಕ್ಷವಲ್ಲ ಎಂದು ಮದ್ರಾಸ್​ ಹೈಕೋರ್ಟ್​ಗೆ ತಿಳಿಸಿದ Election Commission

Election Commission
Published on

Chennai: ನಟ ಟಿವಿಕೆ ವಿಜಯ್ ಸ್ಥಾಪಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮಾನ್ಯತೆ ಪಡೆದ ರಾಜಕೀಯ ಪಕ್ಷವಲ್ಲ ಎಂದು ಭಾರತೀಯ ಚುನಾವಣಾ ಆಯೋಗ (Election Commission) ಶುಕ್ರವಾರ( ಅ 17) ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ. ಅರುಲ್ ಮುರುಗನ್ ಅವರ ದ್ವೀಸದಸ್ಯ ಪೀಠದ ಮುಂದೆ ಹಾಜರಾದ ವಕೀಲ ನಿರಂಜನ್ ರಾಜಗೋಪಾಲ್, ಇಸಿಐ ಮಾನದಂಡಗಳ ಪ್ರಕಾರ, ಟಿವಿಕೆ ಮಾನ್ಯತೆ ಪಡೆದ ರಾಜ್ಯ ಪಕ್ಷವಾಗಿ ಅರ್ಹತೆ ಪಡೆಯುವ ಮಾನದಂಡಗಳನ್ನು ಪೂರೈಸಿಲ್ಲ, ಮಾನ್ಯತೆ ಪಡೆಯಬೇಕಾದ ಪಕ್ಷ ಚಲಾವಣೆಯಾದ ಅರ್ಹ ಮತಗಳಲ್ಲಿ ಕನಿಷ್ಠ ಶೇ 6% ಮತ್ತು ವಿಧಾನಸಭೆಯಲ್ಲಿ ಎರಡು ಸ್ಥಾನಗಳನ್ನು ಅಥವಾ ಲೋಕಸಭೆಯಲ್ಲಿ ಒಂದು ಸ್ಥಾನವನ್ನು ಪಡೆಯಬೇಕು ಎಂದು ವಾದಿಸಿದ್ದಾರೆ ಎಂದು ವರದಿಯಾಗಿದೆ.

ಸೆಪ್ಟೆಂಬರ್ 27 ರಂದು ಕರೂರ್​ನಲ್ಲಿ ಸಂಭವಿಸಿದ ಕಾಲ್ತುಳಿತದ ಸಂದರ್ಭದಲ್ಲಿ 41 ಜನರು ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಪಟ್ಟಂತೆ ಸಲ್ಲಿಸಲಾದ ಎಫ್‌ಐಆರ್‌ನಲ್ಲಿ ಟಿವಿಕೆ ನೋಂದಣಿ, ಮಾನ್ಯತೆಯನ್ನು ರದ್ದುಗೊಳಿಸಲು ಮತ್ತು ನಟ ವಿಜಯ್ ವಿರುದ್ಧ ಹೆಚ್ಚುವರಿ ಆರೋಪಗಳನ್ನು ಸೇರಿಸಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ವಾದಗಳನ್ನು ಸಲ್ಲಿಸಲಾಯಿತು ಎಂದು ತಿಳಿದುಬಂದಿದೆ. ಮಧುರೈ ಪೀಠದ ಮುಂದೆ ನಡೆದ ವಿಚಾರಣೆಯ ಸಂದರ್ಭದಲ್ಲಿ, ವಕೀಲರಾದ ಅರ್ಜಿದಾರರು, ರ‍್ಯಾಲಿಯ ಜನದಟ್ಟಣೆಯ ಸ್ಥಳದಲ್ಲಿ ನಡೆಸಲಾಯಿತು, ಈ ವೇಳೆ ಸಂಪೂರ್ಣ ನಿರ್ಲಕ್ಷ್ಯವಹಿಸಲಾಯಿತು ಮತ್ತು ಅನುಮತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಅನೇಕ ಮಕ್ಕಳು ಮತ್ತು ವೃದ್ಧರು ಸೇರಿದಂತೆ 40 ಜನರು ಪ್ರಾಣ ಕಳೆದುಕೊಂಡರು ಮತ್ತು ಹಲವಾರು ಜನರು ಗಾಯಗೊಂಡರು ಎಂದು ಆರೋಪಿಸಿದರು.

ಸಂವಿಧಾನದ 21 ಮತ್ತು 21A ವಿಧಿಗಳ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ಸಂಘಟಕರು ಉಲ್ಲಂಘಿಸಿದ್ದಾರೆ ಮತ್ತು ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, ಬಾಲ ನ್ಯಾಯ ಕಾಯ್ದೆ ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯಡಿಯಲ್ಲಿ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಚೇತನ್ ಭರತ್‌ಕುಮಾರ್ ಧಕನ್ ವರ್ಸಸ್ ಸ್ಟೇಟ್ ಆಫ್ ಮಹಾರಾಷ್ಟ್ರ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ನೀಡಿದ ತೀರ್ಪನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ. ಇದು ಚುನಾವಣಾ ಪ್ರಚಾರಗಳಲ್ಲಿ ಅಪ್ರಾಪ್ತ ವಯಸ್ಕರನ್ನು ಬಳಸುವುದನ್ನು ನಿಷೇಧಿಸಿತು ಮತ್ತು ಅಂತಹ ಪದ್ಧತಿಗಳ ವಿರುದ್ಧ ಕಠಿಣ ಮಾರ್ಗಸೂಚಿಗಳನ್ನು ರೂಪಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು.

ಚುನಾವಣಾ ದುರ್ನಡತೆ ಆರೋಪದ ಮೇಲೆ ಪಕ್ಷದ ನೋಂದಣಿಯನ್ನು ರದ್ದುಗೊಳಿಸಲು, ರಾಜಕೀಯ ರ‍್ಯಾಲಿಗಳಲ್ಲಿ ಮಕ್ಕಳನ್ನು ಬಳಸುವುದನ್ನು ನಿಷೇಧಿಸಲು ಮತ್ತು ಸಂತ್ರಸ್ತರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡುವಂತೆ ನಟ ವಿಜಯ್‌ಗೆ ಆದೇಶಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನಗಳನ್ನು ನೀಡುವಂತೆ ಅರ್ಜಿ ಮೂಲಕ ಮನವಿ ಮಾಡಲಾಗಿದೆ. ವಿಜಯ್ ವಿರುದ್ಧದ ಎಫ್‌ಐಆರ್ ಬದಲಾಯಿಸುವ ಕೋರಿಕೆಯು, ಕಾಲ್ತುಳಿತದ ಬಗ್ಗೆ ಸಿಬಿಐ ತನಿಖೆಗೆ ನಿರ್ದೇಶಿಸುವ ಸುಪ್ರೀಂ ಕೋರ್ಟ್‌ನ ಆದೇಶದ ವ್ಯಾಪ್ತಿಗೆ ಬರುತ್ತದೆ ಎಂದು ಪೀಠವು ಇದೇ ವೇಳೆ ತಿಳಿಸಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net