

Unnao: ಉತ್ತರ ಪ್ರದೇಶದ ಉನ್ನಾವೋ ಸಮೀಪ ಆಗ್ರಾ-ಲಖನೌ ಎಕ್ಸ್ಪ್ರೆಸ್ ವೇನಲ್ಲಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುವಾಗ ಮತ್ತೊಂದು ಕಾರು ಡಿಕ್ಕಿ ಹೊಡೆದು ಭೀಕರ ಅಪಘಾತವಾದ(Accident) ಪರಿಣಾಮ ಇಬ್ಬರು ಥಾಯ್ಲೆಂಡ್ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಶುಕ್ರವಾರ(ಅ. 17) ವರದಿಯಾಗಿದೆ.
ಅನನ್ (35) ಮತ್ತು ಸಕುಲ್ಸುಖ್ (40) ಮೃತರಾದ ವಿದೇಶಿ ಪ್ರಜೆಗಳು. ಕಾರು ಡಿಕ್ಕಿ ಹೊಡೆದ ಬಳಿಕ ಇಬ್ಬರನ್ನು ತಕ್ಷಣ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್ಸಿ) ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಿಓ ಸಂತೋಷ್ ಕುಮಾರ್ ಸಿಂಗ್, ಪ್ರೊಕೋಬ್ ವಾಂಗ್ಸೊಂಬುನ್ ಎಂದು ಗುರುತಿಸಲ್ಪಟ್ಟ ಥಾಯ್ಲೆಂಡ್ ಮಹಿಳೆ ಸುಮಾರು 15 ವರ್ಷಗಳಿಂದ ಶ್ರಾವಸ್ತಿಯ ದೇವಾಲಯವೊಂದರಲ್ಲಿ ವಾಸಿಸುತ್ತಿದ್ದು, ಅವರು ಇಬ್ಬರು ಪುರುಷರೊಂದಿಗೆ ಪ್ರಯಾಣಿಸುತ್ತಿದ್ದರು.ಈ ವೇಳೆ ಇಬ್ಬರು ವಿದೇಶಿ ನಾಗರಿಕರು ತಮ್ಮ ಕಾರನ್ನು ರಸ್ತೆಬದಿಯಲ್ಲಿ ನಿಲ್ಲಿಸಿ ಮೂತ್ರ ವಿಸರ್ಜಿಸಲು ಹೊರಬಂದಾಗ, ಎದುರುಗಡೆ ಬರುತ್ತಿದ್ದ ಕಾರಿನ ಟೈರ್ ಒಡೆದು ಅದು ಅವರಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಕಾನೂನು ವಿಧಿವಿಧಾನಗಳು ಪೂರ್ಣಗೊಂಡಿದ್ದು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕ ಮತ್ತು ಇಬ್ಬರು ಪ್ರಯಾಣಿಕರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)