ಪಕ್ಷ ಸಂಘಟನೆಯಲ್ಲಿ ವಿಜಯೇಂದ್ರ ಮುಂದು

byv birthday
ಶಾಸಕ ಬಿ.ವೈ.ವಿಜಯೇಂದ್ರ ಅವರ ಜನ್ಮದಿನದ ಅಂಗವಾಗಿ ಶಿಕಾರಿಪುರದಲ್ಲಿ ಶ್ರೀ ಹುಚ್ಚರಾಯಸ್ವಾಮಿಗೆ ಪೂಜೆ ಸಲ್ಲಿಸಲು ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು. ಚನ್ನವೀರಪ್ಪ, ಎಚ್.ಟಿ.ಬಳಿಗಾರ್, ಹನುಮಂತಪ್ಪ, ವೀರನ ಗೌಡ, ಪ್ರವೀಣ್ ಬೆಣ್ಣೆ ಇತರರಿದ್ದರು.
Published on

ಶಿಕಾರಿಪುರ: ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜನ್ಮದಿನದ ಅಂಗವಾಗಿ ಬಿಜೆಪಿ ಯುವ ಮೋರ್ಚಾ, ಮಹಿಳಾ ಮೋರ್ಚಾ, ರೈತ ಮೋರ್ಚಾ ಕಾರ್ಯಕರ್ತರು ಮಂಗಳವಾರ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನದಲ್ಲಿ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ಪೂಜೆ ಸಲ್ಲಿಸಿದರು.

ಕ್ಷೇತ್ರ ದೇವತೆ ಶ್ರೀ ಮಾರಿಕಾಂಬಾ, ಶ್ರೀ ಚೌಡೇಶ್ವರಿ, ಶ್ರೀ ಗಿಡ್ಡಯ್ಯ ಸ್ವಾಮಿ ಮತ್ತಿತರ ದೇವಸ್ಥಾನಗಳಿಗೆ ತೆರಳಿ ಶಾಸಕರಿಗೆ ಒಳಿತಾಗಲೆಂದು ಪ್ರಾರ್ಥನೆ ಸಲ್ಲಿಸಿದರು. ನಂತರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದರು. ನಂತರ ಮಹಿಳಾ ಮಕ್ಕಳ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ವಿತರಿಸಿದರು. ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ 48 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶ್ರೀ ಭ್ರಾಂತೇಶ ಉದ್ಯಾನದಲ್ಲಿ 48 ಬಗೆಯ ಸಸ್ಯಗಳನ್ನು ನೆಡಲಾಯಿತು.

ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿ, ರಾಜಕಾರಣ, ಪಕ್ಷದ ಸಂಘಟನೆಯಲ್ಲಿ ಹಂತ ಹಂತವಾಗಿ ಬೆಳೆದವರು ವಿಜಯೇಂದ್ರ. ಅವರು ಅಧ್ಯಕ್ಷರಾದ ಮೇಲೆ ಪಕ್ಷ ಸಮರ್ಥವಾದ ವಿಪಕ್ಷವಾಗಿ ಕೆಲಸ ಮಾಡುತ್ತಿದೆ. ಪಕ್ಷ ಸಂಘಟನೆಗೆ ಅವರು ಹೆಚ್ಚಿನ ಆದ್ಯತೆ ನೀಡಿ ಪಕ್ಷವನ್ನು ಬಲಗೊಳಿಸುತ್ತಿದ್ದಾರೆ ಎಂದು ಹೇಳಿದರು.

ಜನಪ್ರಿಯ ಜನನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಂತೆಯೇ ಶಾಸಕ ಬಿ.ವೈ.ವಿಜಯೇಂದ್ರ ಅವರು ಜನಪರ ಕಾರ್ಯ ಮಾಡುತ್ತ ಯುವನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಶಾಸಕರಿಗೆ 48 ವರ್ಷ ತುಂಬಿದ ಹಿನ್ನೆಲೆಯಲ್ಲಿ ತಾಲೂಕಿನ ಬಿಜೆಪಿ ಕಾರ್ಯಕರ್ತರು 48 ಸಸಿಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದಿದ್ದಾರೆ ಎಂದರು.

ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ, ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಚ್.ಟಿ.ಬಳಿಗಾರ್, ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತಪ್ಪ, ಯುವ ಮೋರ್ಚಾ ಅಧ್ಯಕ್ಷ ವೀರನ ಗೌಡ, ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಬೆಣ್ಣೆ, ಮಾಜಿ ನಗರಾಧ್ಯಕ್ಷ ರಾಘವೇಂದ್ರ,ಪಾಲಾಕ್ಷಪ್ಪ, ವಸಂತ ಗೌಡ, ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ, ಉಪಾಧ್ಯಕ್ಷೆ ರೂಪಾ ಮಂಜುನಾಥ್, ರೇಖಾ ರಾಜಶೇಖರ, ರೂಪಕಲಾ ಹೆಗಡೆ, ವಿನಯ್, ನಂಜುಂಡಿ, ಮಂಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net