

ಬೆಂಗಳೂರು: ಭಾರತವೆಂದರೆ ಹಿಂದುತ್ವ, ಹಿಂದುತ್ವವೆಂದರೆ ಬಹುತ್ವ, ವಿವಿಧತೆಯನ್ನು ತನ್ನ ಒಡಲಲ್ಲಿ ಇರಿಸಿಕೊಂಡು ಮೆರೆಯುತ್ತಿರುವುದೇ ಭಾರತೀಯತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಭಾರತವನ್ನು ಹಿಂದು ರಾಷ್ಟ್ರವಾಗಿಸಲು ಅವಕಾಶ ಕೊಡಲ್ಲವೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿ, ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.
ಹಿಂದು ರಾಷ್ಟ್ರ ಕಲ್ಪನೆ ಈ ದೇಶದ ಕೋಟ್ಯಂತರ ಜನರ ಸಂಕಲ್ಪ. ಅದಕ್ಕೆ ಅವಕಾಶ ಕೊಡದಿರಲು ನೀವು (ಸಿದ್ದರಾಮಯ್ಯ) ಮೊಘಲರಲ್ಲ, ಮೊಘಲರೇ ಮತ್ತೆ ಹುಟ್ಟಿ ಬಂದರೂ ಈಗದು ಸಾಧ್ಯವಿಲ್ಲ ಎಂದಿದ್ದಾರೆ.
ಭಾರತೀಯ ಸಂಸ್ಕೃತಿಯನ್ನು ನಾಶಪಡಿಸಲು ಶತ ಶತಮಾನಗಳಿಂದಲೂ ಹೊರಗಿನವರ ಆಕ್ರಮಣ ನಡೆಯುತ್ತಲೇ ಇದೆ. ಮೊಘಲರ ನಿರಂತರ ದಾಳಿಗೆ ತುತ್ತಾಗಿ ಅಸಂಖ್ಯಾತ ಹಿಂದು ದೇವಾಲಯಗಳು ಭಗ್ನಗೊಂಡಿರುವುದಕ್ಕೆ ಇಂದಿಗೂ ಸಾಕ್ಷಿ, ಪುರಾವೆಗಳು ಕಣ್ಣಿಗೆ ರಾಚುತ್ತವೆ ಎಂದು ವಿಜಯೇಂದ್ರ ಪ್ರತಿಪಾದಿಸಿದ್ದಾರೆ.
ಎಷ್ಟೇ ದುರಾಕ್ರಮಣ ನಡೆದರೂ ಬಹುತ್ವ ಸಂಸ್ಕೃತಿಯ ಹಿಂದುತ್ವದ ಭಾರತ ಗಟ್ಟಿಯಾಗಿ ಉಳಿದಿದೆ. ಸ್ವಾತಂತ್ರ್ಯ ನಂತರವೂ ಮತಬ್ಯಾಂಕ್ ರಾಜಕಾರಣಕ್ಕಾಗಿ ಹಿಂದುತ್ವವನ್ನು ದಮನ ಮಾಡಲು ಕುಮ್ಮಕ್ಕು ನೀಡುತ್ತಿದ್ದ ಕಾಂಗ್ರೆಸ್ ಕುತಂತ್ರ ಬಗ್ಗು ಬಡಿಲೆಂದೇ ಭಾರತೀಯ ಜನತಾಪಾರ್ಟಿ ಜನ್ಮ ತಾಳಿದೆ.
ಕಾಂಗ್ರೆಸ್‌ನ ಸ್ವಾರ್ಥ ಹಾಗೂ ನಿರಂಕುಶ ಪ್ರಭುತ್ವದ ಆಡಳಿತವನ್ನು ದೇಶದ ಜನರು ಮೂಲೆಗಟ್ಟಿ, ಬಿಜೆಪಿಯನ್ನು ಹೆಮ್ಮರವಾಗಿ ಬೆಳೆಸಿ ಅದರ ನೆರಳಲ್ಲಿ ಅಭಿವೃದ್ಧಿಯ ಭಾರತವನ್ನು ಕಾಣುತ್ತಿದ್ದಾರೆ.
ರಾಜಕೀಯ ಭೂಪಟದಲ್ಲಿ ಅಳಿಸಿ ಹೋಗುತ್ತಿರುವ ಕಾಂಗ್ರೆಸ್ ಅಸ್ತಿತ್ವ ಮೊದಲು ಉಳಿಸಿಕೊಳ್ಳಿ ಆ ನಂತರ ರಾಷ್ಟ್ರದ ಕುರಿತು ಮಾತನಾಡುವಿರಂತೆ ಎಂದು ಸಿಎಂ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.
ಪೇಜಾವರ ಶ್ರೀಗಳ ಹಿಂದು ರಾಷ್ಟ್ರ ಪ್ರತಿಪಾದನೆ ಇನ್ನೊಬ್ಬರನ್ನು ಹೊರಗಟ್ಟುವುದಲ್ಲ, ಬಲವಂತದ ಮತಾಂತರವಲ್ಲ, ಎಲ್ಲರನ್ನೂ ಒಳಗೊಂಡ ನೈಜ ಭಾರತೀಯತೆಯನ್ನು ರಕ್ಷಿಸುವುದು ಭಾರತದ ಅಸ್ತಿತ್ವ ಎಂದು ವಿಜಯೇಂದ್ರ ಸಮರ್ಥಿಸಿಕೊಂಡು, ದೀರ್ಘ ಸಂದೇಶ ಹಂಚಿಕೊಂಡಿದ್ದಾರೆ.