

ತುಮಕೂರು: ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕಗೊಳ್ಳುತ್ತಿದ್ದಂತೆ ಪಕ್ಷದಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ. ಕಾರ್ಯಕರ್ತರ ಸಮಾವೇಶ, ಶಾಸಕಾಂಗ ಪಕ್ಷದ ಸಭೆಯೂ ನಿಗದಿಯಾಗಿದ್ದು, ವೀಕ್ಷಕರು ಪಾಲ್ಗೊಳ್ಳಲಿದ್ದಾರೆ.
ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ ಆದೇಶ ಹೊರಬೀಳುತ್ತಿದ್ದಂತೆ ಮಠಗಳು, ಪಕ್ಷದ ಕಾರ್ಯಕರ್ತರ ಮನೆಗೆ ಭೇಟಿ ನೀಡುತ್ತಿರುವ ವಿಜಯೇಂದ್ರ, ನ.15ರಂದು ಪಕ್ಷದ ಕಾರ್ಯಾಲಯದಲ್ಲಿ ಅಧಿಕಾರ ಸ್ವೀಕರಿಸಲು ನಿರ್ಧರಿಸಿದ್ದಾರೆ. 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಕ್ಷದ ಹಿರಿಯರ ಸಮ್ಮುಖದಲ್ಲಿ ನೂತನ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. 17ರಂದು ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ವಿಧಾನಸಭೆ ಪ್ರತಿಪಕ್ಷದ ನಾಯಕನ ಆಯ್ಕೆ ಬಗ್ಗೆ ಕೂಡ ವರಿಷ್ಠರು ಚರ್ಚೆ ಮಾಡಿದ್ದು, ಶೀಘ್ರದಲ್ಲಿ ಘೋಷಣೆಯಾಗಲಿದೆ. ನಂತರ ಲೋಕಸಭೆ ಚುನಾವಣೆ ಸಿದ್ಧತೆಗಳು ಆರಂಭವಾಗಲಿವೆ.
ಭಾನುವಾರ ಬೆಳಗ್ಗೆ ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಿ.ವೈ.ವಿಜಯೇಂದ್ರ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ತಂದೆ ಬಿ.ಎಸ್.ಯಡಿಯೂರಪ್ಪ ಅವರು ಯಾವುದೇ ಕೆಲಸ ಅಥವಾ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಮುನ್ನ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದರು. ತಂದೆ ಹಾದಿಯಲ್ಲಿ ನಾನೂ ಕೂಡ ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಪಕ್ಷದ ಹಿರಿಯ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸದಾನಂದ ಗೌಡ, ಗೋವಿಂದ ಕಾರಜೋಳ, ವಿ.ಸೋಮಣ್ಣ , ಬಸವನಗೌಡ ಪಾಟೀಲ್ ಯತ್ನಾಳ್ ಮೊದಲಾದ ನಾಯಕರ ಸಮ್ಮುಖದಲ್ಲಿ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪದಗ್ರಹಣ ಮಾಡುವೆ. ಬೇರೆ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕರು ಆಗಮಿಸುತ್ತಿಲ್ಲ. ಆದರೆ ಪಕ್ಷದ ವೀಕ್ಷಕರು ಆಗಮಿಸಲಿದ್ದಾರೆ ಎಂದರು.
ಬರ ಪರಿಸ್ಥಿತಿ ಬಗ್ಗೆ ಚರ್ಚೆ: 17ರಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಲಿದ್ದೇವೆ. ಬಿಜೆಪಿ ದೊಡ್ಡ ಪಕ್ಷ. ಸಣ್ಣ ಪುಟ್ಟ ವ್ಯತ್ಯಾಸಗಳಿದ್ದರೂ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮುನ್ನಡೆಸುತ್ತೇನೆ. ಯಾರನ್ನೂ ನಿರ್ಲಕ್ಷ್ಯ ಮಾಡುವ ಪ್ರಶ್ನೆ ಇಲ್ಲ. ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿರಬಹುದು ಆದರೆ, ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವುದು ನಿಶ್ಚಿತ ಎಂದು ವಿಜಯೇಂದ್ರ ತಿಳಿಸಿದರು.
ಭ್ರಷ್ಟ ಸರ್ಕಾರದ ವಿರುದ್ಧ ಹೋರಾಟ: ಅಸ್ತಿತ್ವಕ್ಕೆ ಬಂದ ಕೇವಲ 6 ತಿಂಗಳಲ್ಲೇ ಜನಪ್ರಿಯತೆ ಕಳೆದುಕೊಂಡ ಸರ್ಕಾರ ದೇಶದಲ್ಲೇ ಮತ್ತೊಂದಿಲ್ಲ. ರಾಜ್ಯದ ದುಷ್ಟ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಲಾಗುವುದು ಎಂದು ಗುಡುಗಿದ ವಿಜಯೇಂದ್ರ, ಕಾಂಗ್ರೆಸ್ ಸರ್ಕಾರ ಐದೂವರೆ ತಿಂಗಳಲ್ಲೇ ಜನರ ವಿಶ್ವಾಸ ಕಳೆದುಕೊಂಡಿದೆ ಎಂದರು.
25ಕ್ಕೂ ಹೆಚ್ಚು ಸ್ಥಾನದ ಗುರಿ: ಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ನಮ್ಮ ಮುಂದೆ ಇರುವ ಗುರಿ. ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಸಂಕಲ್ಪ ತೊಡಬೇಕಿದೆ ಎಂದು ಹೇಳಿದ ವಿಜಯೇಂದ್ರ, ಬಿಜೆಪಿ ಸಂಸ್ಕೃತಿ ವಿಶೇಷವಾದದ್ದು. ರಾಷ್ಟ್ರೀಯ ಅಧ್ಯಕ್ಷರಿಗೆ ಕೊಡುವಷ್ಟೇ ಗೌರವವನ್ನು ಬೂತ್ ಮಟ್ಟದ ಅಧ್ಯಕ್ಷನಿಗೆ ಕೊಡುವ ಪರಂಪರೆ ನಮ್ಮಲ್ಲಿದೆ. ನಾನು ಶಾಸಕ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿರಬಹುದು. ಅದಕ್ಕಿಂತ ಮಿಗಿಲಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂಬ ಹೆಮ್ಮ ಇದೆ. ಎಲ್ಲ ಜಿಲ್ಲೆಗೆ ಭೇಟಿ ನೀಡಿ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುತ್ತೇನೆ ಎಂದರು.
ಯುವಕನೆಂಬ ಕಾರಣಕ್ಕೆ ಸಾರಥ್ಯ!: ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಎನ್ನುವುದಕ್ಕಿಂತ ಯುವಕನೆಂಬ ಕಾರಣಕ್ಕೆ ರಾಜ್ಯದಲ್ಲಿ ಪಕ್ಷ ಮುನ್ನಡೆಸುವ ಜವಾಬ್ದಾರಿಯನ್ನು ಪಕ್ಷದ ವರಿಷ್ಠರು ನನಗೆ ವಹಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ, ಅಮಿತಾ ಷಾ, ಬಿ.ಎಲ್.ಸಂತೋಷ್ ಸೇರಿ ಎಲ್ಲ ಹಿರಿಯರು ಸಮಾಲೋಚನೆ ಮಾಡಿ ರಾಜ್ಯದಲ್ಲಿ ಪಕ್ಷ ಸಂಘಟನೆ ಸಾರಥ್ಯವನ್ನು ವಹಿಸಿದ್ದಾರೆ. ಕಾರ್ಯಕರ್ತರು ಹೆಮ್ಮೆ ಪಡುವಂತೆ ಪಕ್ಷ ಮುನ್ನಡೆಸುವೆ ಎಂದು ವಿಜಯೇಂದ್ರ ಭರವಸೆ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿರುವುದು ಸೂಕ್ತ ನಿರ್ಧಾರ. ಯುವ ನಾಯಕತ್ವಕ್ಕೆ ನಮ್ಮ ರಾಷ್ಟ್ರೀಯ ನಾಯಕರು ಆದ್ಯತೆ ನೀಡಿದ್ದಾರೆ. ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಪ್ರಬಲ ನಾಯಕರಷ್ಟೇ ಅಲ್ಲ, ಎಲ್ಲ ಸಮುದಾಯದವರಿಗೂ ಅವರು ನಾಯಕರು. | ಪ್ರಲ್ಹಾದ ಜೋಶಿ, ಕೇಂದ್ರ ಸಚಿವ ದೀಪಾವಳಿ ಉಡುಗೊರೆಯಾಗಿ ಕೇಂದ್ರ ನಾಯಕರು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಇದನ್ನು ನಾವೆಲ್ಲರೂ ಸ್ವಾಗತಿಸಿದ್ದೇವೆ. ಅವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇವೆ. | ಮುರುಗೇಶ ನಿರಾಣಿ, ಮಾಜಿ ಸಚಿವ
ಬಿ.ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣಕ್ಕೆ ಸಕಲ ತಯಾರಿ ನಡೆದಿದೆ. ನ.15ರಂದು ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪಕ್ಷದ ಶಾಸಕರು, ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ. ಅಲ್ಲದೆ, ಕಚೇರಿಗೆ ಸುಣ್ಣ-ಬಣ್ಣ ಬಳಿದು ಅಂದಗೊಳಿಸಲುವ ಕೆಲಸ ಭರದಿಂದ ನಡೆದಿದೆ. ನ.16 ರಂದು ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲು ನಿರ್ಧಾರಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಆಹ್ವಾನಿಸಿ ದೊಡ್ಡ ಸಮಾವೇಶ ನಡೆಸುವ ಉದ್ದೇಶವನ್ನೂ ಹೊಂದಲಾಗಿದೆ.
ಹೋಮ-ಹವನ: ನ.14ರ ರಾತ್ರಿಯಿಂದಲೇ ಬಿಜೆಪಿ ಕಚೇರಿಯಲ್ಲಿ ಹೋಮ-ಹವನ ಹಾಗೂ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. 15ರ ಬೆಳಗ್ಗೆ 10 ಗಂಟೆಗೆ ಅಧಿಕಾರ ಸ್ವೀಕಾರಕ್ಕೆ ಸಮಯ ನಿಗದಿ ಮಾಡಲಾಗಿದೆ.
ಇಂದು ಎಲ್ಲಿ ಭೇಟಿ: ವಿಜಯೇಂದ್ರ ಸೋಮವಾರ ಬೆಳಗ್ಗೆ 10 ಗಂಟೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, 11.30 ಕ್ಕೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ 1 ಗಂಟೆಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಮನೆಗೆ ಭೇಟಿ ನೀಡಲಿದ್ದಾರೆ.
ಕಾಂಗ್ರೆಸ್ ತಂತ್ರ ಬದಲು: ವೀರಶೈವ ಲಿಂಗಾಯತರನ್ನು ಬಿಜೆಪಿ ಕಡೆಗಣಿಸಿದೆ ಎಂಬ ಅಂಶ ಇಟ್ಟುಕೊಂಡು ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದ ಕಾಂಗ್ರೆಸ್, ಲೋಕಸಭೆ ಚುನಾವಣೆಗೂ ಅದೇ ದಾಟಿ ಮುಂದುವರಿಸಿತ್ತು. ಇದೀಗ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಕಾಂಗ್ರೆಸ್ನ ತಂತ್ರಗಾರಿಕೆ ಸ್ವರೂಪ ಕೂಡ ಬದಲಿಸಿಕೊಳ್ಳಬೇಕಾಗಿ ಬಂದಿದೆ.
ನ.18ರ ಬಳಿಕ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಬೆಂಗಳೂರಿಗೆ ಆಗಮಿಸಲಿದ್ದು, ಈ ವೇಳೆ ಸಭೆ ಕೂಡ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.