

ಬೆಂಗಳೂರು: ದೇಶದ ಯುವಜನರಿಗೆ ಸೇನೆಯಲ್ಲಿ ನಾಲ್ಕು ವರ್ಷಗಳ ಕಿರುಅವಧಿಗೆ ಸೇವೆ ಸಲ್ಲಿಸಲು ಅವಕಾಶ ನೀಡುವ ಅಗ್ನಿಪಥ ಯೋಜನೆ ಈಗ ದೇಶಾದ್ಯಂತ ಚರ್ಚೆಯ ವಿಷಯ. ಈ ಯೋಜನೆ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆ ನಡೆದರೂ, ಮತ್ತೊಂದೆಡೆ ಲಕ್ಷಾಂತರ ಆಕಾಂಕ್ಷಿಗಳು ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಪ್ರತಿಪಕ್ಷಗಳು ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಅಲ್ಪಕಾಲ ಸೇನೆಯಲ್ಲಿ ಕಾರ್ಯನಿರ್ವಹಿಸಿದ ಬಳಿಕ ಅಗ್ನಿವೀರರ ಭವಿಷ್ಯ ಏನು ಎಂಬ ಚಿಂತೆಯೂ ಹಲವರಲ್ಲಿದೆ. ಪ್ರಸ್ತುತ ಯೋಜನೆಗೆ ಅರ್ಹರೆನಿಸಿದ 17ರಿಂದ 23 ವಯೋಮಾನದವರ ಮನಸ್ಸಿನಲ್ಲೇನಿದೆ ಎಂಬುದನ್ನು ಅರಿಯುವ ಪ್ರಯತ್ನವನ್ನು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ವಿಶೇಷ ಸಮೀಕ್ಷೆ ಮೂಲಕ ಮಾಡಿದೆ. ‘ಅಗ್ನಿಪಥ’ ಯೋಜನೆ ಬಗ್ಗೆ ಯುವ ಸಮುದಾಯ ಉತ್ಸುಕರಾಗಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಇದೇ ವೇಳೆ 4 ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಬಳಿಕ ಭವಿಷ್ಯವೇನು ಎಂಬ ಆತಂಕ ಹಲವರಲ್ಲಿದೆ. ಅಚ್ಚರಿ ಸಂಗತಿ ಎಂದರೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 64 ವಿದ್ಯಾರ್ಥಿಗಳು ಅರ್ಹತಾ ಪರೀಕ್ಷೆಗಳಲ್ಲಿ ತೇರ್ಗಡೆಯಾದರೆ ಅಗ್ನಿಪಥ ಸೇರಲು ಸಿದ್ಧ ಎಂದು ಹೇಳಿಕೊಂಡಿದ್ದಾರೆ.
ಯುವ ಸಮುದಾಯದಲ್ಲಿ ಹೊಸ ಚಿಂತನೆ: ಅಗ್ನಿಪಥ ಯೋಜನೆ ಯುವ ಸಮುದಾಯದಲ್ಲಿ ಹೊಸ ಚಿಂತನೆ ಒರೆಗೆಹಚ್ಚಿದೆ. ಮನೆ, ಕಾಲೇಜು ಮತ್ತು ಹರಟೆ ಕಟ್ಟೆಗಳಲ್ಲಿ ಯೋಜನೆ ಬಗ್ಗೆ ಯುವ ಸಮುದಾಯ ಚರ್ಚೆ ನಡೆಸಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಅಗ್ನಿವೀರರಾಗಲು ಆಸಕ್ತಿ ಇದೆ ಎಂದು ಹೇಳಿಕೊಂಡಿರುವುದು ಕುತೂಹಲಕಾರಿ. ಇನ್ನೊಂದು ಅಚ್ಚರಿ ಎಂದರೆ ಅರ್ಧದಷ್ಟು ಮಂದಿ ತಾವು ಸೇನೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ ಬರುವುದಕ್ಕೆ ಸಿದ್ಧ, ಮನೆಯಲ್ಲಿ ಒಪ್ಪುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಪ್ರಕಟಗೊಂಡಾಗ ಅನೇಕರು ಶೈಕ್ಷಣಿಕವಾಗಿ ಮಕ್ಕಳ ಭವಿಷ್ಯ ಕಮರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಪಿಯುಸಿ ಅಥವಾ ಪದವಿ ಹಂತದಲ್ಲಿದ್ದವರು ನಾಲ್ಕು ವರ್ಷದಲ್ಲಿ ಸೈನ್ಯದಲ್ಲಿ ಕೆಲಸ ಮಾಡಲು ಹೊರಟರೆ ಶೈಕ್ಷಣಿಕವಾಗಿ ಹಿನ್ನಡೆಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು. ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣವೇ ಪ್ರಮುಖ ಪಾತ್ರ ಎಂದು ಪೋಷಕರು ಹೇಳಿಕೊಂಡಿದ್ದರು. ಈ ವಿಚಾರದಲ್ಲಿ ವಿದ್ಯಾರ್ಥಿಗಳ ಮನದಲ್ಲೇನಿದೆ ಎಂದು ತಿಳಿಯುವ ಪ್ರಯತ್ನ ಮಾಡಲಾಗಿತ್ತು. ಶೇ.37ಕ್ಕಿಂತ ಹೆಚ್ಚು ಮಕ್ಕಳಲ್ಲಿ ಶೈಕ್ಷಣಿಕ ಹಿನ್ನಡೆಯಾಗುವ ಆತಂಕವಿದೆ. ಶೈಕ್ಷಣಿಕವಾಗಿ ಹಿನ್ನಡೆ ಏನು ಆಗದು ಎಂದು ಹೇಳುವವರ ಸಂಖ್ಯೆಯೂ ಹೆಚ್ಚಿದೆ.
ಸಮೀಕ್ಷೆ ಹೇಗೆ ನಡೆಯಿತು?: ರಾಜ್ಯಾದ್ಯಂತ ನಮ್ಮ ವರದಿಗಾರರು ಖುದ್ದು ವಿದ್ಯಾರ್ಥಿಗಳ ಬಳಿಗೆ ತೆರಳಿ, ಸಮೀಕ್ಷೆಗೆಂದೇ ಸಿದ್ಧಪಡಿಸಿದ್ದ ತಂತ್ರಾಂಶದ ಮೂಲಕ ಅಭಿಪ್ರಾಯ ಸಂಗ್ರಹಿಸಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕರಿಂದಲೂ ಕೂಡ ಅಭಿಪ್ರಾಯ ಕಲೆಹಾಕಿದ್ದು, ಒಟ್ಟಾರೆ ಎರಡು ಸಾವಿರ ಮಂದಿಯ ಪ್ರಾತಿನಿಧಿಕ ಅಭಿಪ್ರಾಯವನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ.
ಇಸ್ರೇಲ್ನಂತೆ ಪ್ರತಿಯೊಬ್ಬರೂ ತಮ್ಮ ದೇಶಕ್ಕೆ ಒಂದೆರಡು ವರ್ಷಗಳ ಕಾಲ ಸೇವೆ ಸಲ್ಲಿಸು ವಂತಾಗಲಿ. ಸೈನ್ಯದಲ್ಲಿ ಸೇವೆ ಸಲ್ಲಿಸಿದ ನಂತರ ತಮ್ಮ ಜೀವನ ಮುಂದುವರಿಸಬೇಕು ಎಂಬ ಮಾರ್ಗ ಸೂಕ್ತ. | ಆದಿತ್ಯ ಬಿಕಾಂ ವಿದ್ಯಾರ್ಥಿ, ಬೆಂಗಳೂರು ಈ ಯೋಜನೆಯು ಭಾರತೀಯ ಸೈನ್ಯವನ್ನು ದುರ್ಬಲಗೊಳಿಸುವ ಯೋಜನೆಯಾಗಿದೆ. 4 ವರ್ಷದ ನಂತರ ಯುವಕರು ಅತಂತ್ರರಾಗುತ್ತಾರೆ. | ನವಾಜ್ ಬಿಎ ವಿದ್ಯಾರ್ಥಿ, ಭದ್ರಾವತಿ ಈ ಯೋಜನೆಗೆ ಸೇರಲು ಬಲವಂತ ಇಲ್ಲ ಎಂದಾದ ಮೇಲೆ ವಿರೋಧಿಸುವವರ ಮನೋಭಾವದ ಬಗ್ಗೆ ತಿಳಿಯದು. ಸರಿಯಾದ ವಯಸ್ಸಿನಲ್ಲಿ ಓದದೇ, ಅನ್ಯ ಚಟುವಟಿಕೆಗಳತ್ತ ಆಕರ್ಷಿತರಾಗುವ ವಿದ್ಯಾರ್ಥಿಗಳನ್ನು ಸರಿದಾರಿಗೆ ತರಲು ಈ ಯೋಜನೆಯು ಕ್ರಮಬದ್ಧವಾಗಿದೆ. | ಆದಿಪ್ರಿಯ ಬಿ.ಕಾಂ, ಎಲ್ಎಲ್ಬಿ, ದಾವಣಗೆರೆ
ಟೀಕೆಗಳೇನು?: ಈ ಯೋಜನೆಯಿಂದ ನಿರುದ್ಯೋಗಿಗಳ ಸಂಘ ನಿರ್ಮಾಣವಾಗುತ್ತದೆ. ಯುವಕರು ಮಾನಸಿಕವಾಗಿ ಕುಗ್ಗುತ್ತಾರೆ. ಆಸಕ್ತರು ಹೇಗಿದ್ದರೂ ಸೈನ್ಯಕ್ಕೆ ಸೇರುತ್ತಿರುವಾಗ ಅಗ್ನಿವೀರ ಯೋಜನೆ ತರುವ ಅನಿವಾರ್ಯತೆ ಏನಿರಲಿಲ್ಲ, ಸೈನ್ಯವನ್ನು ದುರ್ಬಲಗೊಳಿಸಬಹುದು ಎಂದು ಕೆಲವು ವಿದ್ಯಾರ್ಥಿಗಳು ಅಭಿಪ್ರಾಯ ತಿಳಿಸಿದ್ದಾರೆ.