ವಿಜಯವಾಣಿ ಸಂಪಾದಕೀಯ: ಪಾಕ್ ಕರಾಳ ಜಾಲ

editorial 16
Published on

ಪಾಕಿಸ್ತಾನದ ಕುತಂತ್ರ, ಕುಕೃತ್ಯಗಳಿಗೆ ಕೊನೆಯೇ ಇಲ್ಲ. ಆಂತರಿಕವಾಗಿ ಹತ್ತುಹಲವು ಸಮಸ್ಯೆಗಳಲ್ಲಿ ಸಿಲುಕಿರುವ ಆ ರಾಷ್ಟ್ರ ತೀವ್ರ ಆರ್ಥಿಕ ಸಂಕಷ್ಟ, ನಿರುದ್ಯೋಗವನ್ನು ಎದುರಿಸುತ್ತಿದೆ ಎಂಬುದು ರಹಸ್ಯವೇನಲ್ಲ. ಅಲ್ಲದೆ, ಜಗತ್ತಿನ ಶಕ್ತಿಗಳು ಪಾಕ್​ಗೆ ಸಾಲ ಕೊಡಲು ಹಿಂದೇಟು ಹಾಕುತ್ತಿರುವುದರಿಂದ, ಆ ರಾಷ್ಟ್ರದ ಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಆದರೆ, ಭಾರತದಲ್ಲಿ ಶಾಂತಿ ಕದಡಲು, ಹಿಂಸೆ ಹರಡಲು, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರಲು ಸದಾ ಒಂದಿಲ್ಲ ಒಂದು ಕೃತ್ಯಗಳಲ್ಲಿ ತೊಡಗುವ ಪಾಕಿಸ್ತಾನ, ಹಲವು ವಿಧದ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ. ಇಲ್ಲಿನ ಆರ್ಥಿಕತೆಗೆ ಪೆಟ್ಟು ನೀಡಲೆಂದೆ ನಕಲಿ ನೋಟು ತಯಾರಿಕೆಯ ಜಾಲವನ್ನೇ ಬೆಳೆಸಿದೆ. ಭಯೋತ್ಪಾದಕರನ್ನು ಗಡಿಯಲ್ಲಿ ನುಸುಳಿಸಲು ಯತ್ನಿಸುವ ಅದು, ಅದೆಷ್ಟೋ ಯುವಕರನ್ನು ನಕಲಿ ನೋಟಿನ ದಂಧೆಯಲ್ಲಿ ತೊಡಗಿಸಿ ಬಿಡುತ್ತದೆ. ಇಷ್ಟು ಸಾಲದು ಎಂಬಂತೆ ಇಲ್ಲಿನ ಯುವಕರ ಶಕ್ತಿ, ಸಾಮರ್ಥ್ಯವನ್ನು ಕಸಿಯಲು ಮಾದಕದ್ರವ್ಯವನ್ನು ಅಕ್ರಮವಾಗಿ ಇಲ್ಲಿನ ಗಡಿಗೆ ತಲುಪಿಸುತ್ತದೆ ಪಾಕ್.

ಪಂಜಾಬಿನ ಸ್ಥಿತಿ ನಮಗೆಲ್ಲ ಗೊತ್ತೇ ಇದೆ. ಅಲ್ಲಿ ನಗರಗಳು ಮಾತ್ರವಲ್ಲ ಸಣ್ಣ ಸಣ್ಣ ಹಳ್ಳಿಗಳು ಕೂಡ ಮಾದಕವಸ್ತುಗಳ ಅಮಲಿನಲ್ಲಿ ಕಳೆದುಹೋಗಿವೆ. ಯುವಕರು, ಮಧ್ಯವಯಸ್ಕರು ಈ ಚಟಕ್ಕೆ ದಾಸರಾಗಿ, ದುಡಿಯುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಡ್ರಗ್ಸ್ ಸಹವಾಸದಿಂದ ಸಣ್ಣ ವಯಸ್ಸಿಗೆ ಪ್ರಾಣ ಕಳೆದುಕೊಂಡವರ ಸಂಖ್ಯೆಯೇನೂ ಕಡಿಮೆ ಇಲ್ಲ. ಹೈಸ್ಕೂಲ್, ಕಾಲೇಜುಗಳ ವಿದ್ಯಾರ್ಥಿಗಳಿಗೂ ಮಾದಕದ್ರವ್ಯಗಳು ಸುಲಭವಾಗಿ ಸಿಗುತ್ತವೆ ಎಂದರೆ, ಇದರ ಹಿಂದೆ ಕರಾಳ ಜಾಲ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಮತ್ತದು ಪಾಕಿಸ್ತಾನದಿಂದ ನಿರ್ವಹಿಸಲ್ಪಡುತ್ತಿದೆ. ಯುವಕರು ಒಮ್ಮೆ ಇಂಥ ದುಶ್ಚಟಗಳಿಗೆ ಶರಣಾದರೆ, ಅದರಿಂದ ಹೊರಬರುವುದು ಸುಲಭವೇನಲ್ಲ. ಇದನ್ನೆಲ್ಲ ತಿಳಿದೇ ಪಾಕಿಸ್ತಾನ ಈ ಹೊಸ ಬಗೆಯ ‘ಭಯೋತ್ಪಾದನೆ’ಯನ್ನು ವ್ಯಾಪಕಗೊಳಿಸುತ್ತಿದೆ. ಜಮ್ಮು-ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಮತ್ತು ಅಲ್ಲಿ ಸುಧಾರಣಾ ಕ್ರಮಗಳು ಹೆಚ್ಚಿದ ಬಳಿಕ ಭಯೋತ್ಪಾದನೆ ಸಂಘಟನೆಗಳಿಗೆ ಸೇರುವ ಯುವಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದು ಪಾಕಿಸ್ತಾನಕ್ಕೆ ಸಹಿಸಲಾಗುತ್ತಿಲ್ಲ. ಹಾಗಾಗಿ, ಜಮ್ಮು-ಕಾಶ್ಮೀರ ಮಾತ್ರವಲ್ಲದೆ ಕರಾವಳಿ ತೀರದ ರಾಜ್ಯಗಳಲ್ಲಿ ‘ಡ್ರಗ್ಸ್ ಭಯೋತ್ಪಾದನೆ’ಯನ್ನು ತೀವ್ರಗೊಳಿಸುತ್ತಿದೆ.

ಗುಜರಾತಿನ ಉಗ್ರ ನಿಗ್ರಹ ಪಡೆ ಮತ್ತು ಕರಾವಳಿ ರಕ್ಷಣಾ ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಗುರುವಾರ ನಸುಕಿನಲ್ಲಿ 150 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಸಾಗಿಸುತ್ತಿದ್ದ 8 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿವೆ. ಬಂಧಿತರಿಂದ 30 ಕಿಲೋ ಹೆರಾಯಿನ್ ವಶಪಡಿಸಿಕೊಂಡಿವೆ. ಅರಬ್ಬಿ ಸಮುದ್ರದ ಅಂತಾರಾಷ್ಟ್ರೀಯ ಸಾಗರ ಗಡಿ ರೇಖೆ ಸಮೀಪ ಪಾಕಿಸ್ತಾನಿಗಳು ಬೋಟ್ ಒಂದರಲ್ಲಿ ಹೆರಾಯಿನ್ ತಂದು, ಅಲ್ಲಿ ಚಿಕ್ಕ ದೋಣಿಯಲ್ಲಿದ್ದವರಿಗೆ ಹಸ್ತಾಂತರಿಸಲು ಮುಂದಾಗಿದ್ದರು. ಇವರ ಬಂಧನದ ಮೂಲಕ ಮತ್ತೊಮ್ಮೆ ಪಾಕಿಸ್ತಾನದ ಕರಾಳತೆ ಅನಾವರಣಗೊಂಡಿದೆ. ಯಾವೆಲ್ಲ ಬಗೆಯಲ್ಲಿ ಅದು ಘಾತಕ ಕೃತ್ಯಗಳನ್ನು ನಡೆಸುತ್ತಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ಇಂಥ ಕೃತ್ಯಗಳ ವಿರುದ್ಧ ಭಾರತ ಪರಿಣಾಮಕಾರಿಯಾಗಿ ಸೆಣೆಸುತ್ತಿರುವುದು ಸಮಾಧಾನಕರ ಬೆಳವಣಿಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net