

ಭಯೋತ್ಪಾದಕ ಸಂಘಟನೆಗಳನ್ನು, ಅವುಗಳ ನಾಯಕರನ್ನು ಸಲಹುತ್ತಿರುವ ಪಾಕಿಸ್ತಾನ ಎಂದಿಗೂ ಸತ್ಯವನ್ನು ಮರೆಮಾಚುತ್ತ, ಮುಖವಾಡಗಳನ್ನು ಪ್ರದರ್ಶಿಸುತ್ತಲೇ ಬಂದಿದೆ. 2008ರ ಮುಂಬೈ ದಾಳಿ ಕುರಿತು ಪಾಕ್ ಕೈವಾಡದ ಸ್ಪಷ್ಟ ಸಾಕ್ಷ್ಯಗಳನ್ನು ಭಾರತ ಒದಗಿಸಿದರೂ, ಅದು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅಲ್ಲದೆ, ಕುಖ್ಯಾತ ಭಯೋತ್ಪಾದಕರು ಪಾಕ್ನಲ್ಲಿ ನೆಲೆಸಿ, ಅಲ್ಲಿಂದಲೇ ಭಾರತಕ್ಕೆ ಉಗ್ರವಾದವನ್ನು ರಫ್ತು ಮಾಡುತ್ತಿರುವ ಕುರಿತಂತೆಯೂ ನಿಖರ ಪಟ್ಟಿ, ಸಾಕ್ಷ್ಯಾಧಾರಗಳನ್ನು ಒದಗಿಸುತ್ತಲೇ ಬಂದಿದೆ. ಆದರೆ, ಎಂದಿಗೂ ವಾಸ್ತವವನ್ನು ಒಪ್ಪಿಕೊಳ್ಳದ, ಉಗ್ರರ ವಿರುದ್ಧ ಕ್ರಮ ಕೈಗೊಳ್ಳದ ಪಾಕಿಸ್ತಾನ ಅನಿವಾರ್ಯತೆಗೆ ಸಿಲುಕಿ ಇದೇ ಮೊದಲ ಬಾರಿ, ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಕೆಲ ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದೆ. ಮುಖ್ಯವಾಗಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಗ್ಗೆ ನೀಡಿರುವ ಮಾಹಿತಿ, ಪಾಕ್ ಇಷ್ಟು ವರ್ಷಗಳ ಕಾಲ ನಡೆಸಿಕೊಂಡ ಬಂದ ಕಳ್ಳಾಟವನ್ನು ಹೊರಗೆಡವಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕರೊನಾ ಸಕ್ರಿಯ ಪ್ರಕರಣಗಳು 83,551; ಇಂದು 4996 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ನೆಲೆಸಿರುವುದಲ್ಲದೆ, ಆತ ಮೂರು ಮನೆ ಮತ್ತು 14 ಪಾಸ್ಪೋರ್ಟ್ಗಳನ್ನು ಹೊಂದಿದ್ದಾನೆ ಎಂಬ ಸಂಗತಿಯನ್ನು ಅದು ಭಾನುವಾರ ಬಿಡುಗಡೆಗೊಳಿಸಿರುವ 88 ಭಯೋತ್ಪಾದಕರ ಪಟ್ಟಿಯಲ್ಲಿ ನಮೂದಿಸಿದೆ.
‘ದಾವೂದ್ ಪಾಕ್ನಲ್ಲೇ ನೆಲೆಸಿದ್ದಾನೆ’ ಎಂಬ ಭಾರತದ ಹಲವು ವರ್ಷಗಳ ಹೇಳಿಕೆ ನಿಜವಾಗಿದೆ ಎಂಬ ಸಂಗತಿ ದೊಡ್ಡದನಿಯಲ್ಲಿ ಸುದ್ದಿಯಾಗುತ್ತಿದ್ದಂತೆ, ಮತ್ತೆ ರಾಗ ಬದಲಿಸಿದ ಪಾಕ್ ದಾವೂದ್ ತನ್ನಲ್ಲಿಲ್ಲ ಎಂಬ ಹಳೆಯ ಸುಳ್ಳನ್ನೇ ಪ್ರಲಾಪಿಸಿತು. ಆದರೆ, ಸತ್ಯ ಬಯಲಾಗಿದೆ. ಆ ದೇಶ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ದಾವೂದ್ ಮನೆಯ ವಿಳಾಸ ಮತ್ತು ಪಾಸ್ಪೋರ್ಟ್ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. 1993ರಲ್ಲಿ ಮುಂಬೈಯಲ್ಲಿ ನಡೆದ ಸರಣಿ ಬಾಂಬ್ಸ್ಪೋಟದ ಬಳಿಕ (ಈ ಸ್ಪೋಟದಲ್ಲಿ 257 ಜನರು ಪ್ರಾಣ ಕಳೆದುಕೊಂಡು, 1400 ಜನರು ತೀವ್ರ ಗಾಯಗಳನ್ನು ಅನುಭವಿಸಿದ್ದರು) ಆ ಘಟನೆಯ ಸೂತ್ರಧಾರ ದಾವೂದ್ ಪಾಕ್ಗೆ ಪಲಾಯನಗೈದಿದ್ದ. ಆತ ಅಲ್ಲಿ ನೆಲೆಸಿರುವ ಬಗ್ಗೆ ಭಾರತ ಹಲವು ಬಾರಿ ಪ್ರಸ್ತಾಪಿಸಿದ್ದಲ್ಲದೆ, ಸಾಕ್ಷ್ಯಗಳನ್ನೂ ಒದಗಿಸಿತ್ತು. ಆದರೂ, ಆ ಧೂರ್ತ ರಾಷ್ಟ್ರ ಅದನ್ನು ನಿರಾಕರಿಸಿಕೊಂಡೇ ಬಂದಿತ್ತು. ಇದನ್ನೂ ಓದಿ: PHOTO | ಐಪಿಎಲ್ಗೆ ಮುನ್ನ ಎಂಗೇಜ್ ಆದ ಕ್ರಿಕೆಟಿಗ ವಿಜಯ್ ಶಂಕರ್
ಅಷ್ಟಕ್ಕೂ, ಜಾಗತಿಕ ವಲಯದಲ್ಲಿ ಆಗುವ ಮುಖಭಂಗವನ್ನು ತಪ್ಪಿಸಿಕೊಳ್ಳಲು ಪಾಕ್ ಈ ತಂತ್ರ ಹೂಡಿದೆಯೇ ಹೊರತು, ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿಯಿಂದಲ್ಲ. ಹಣ ಅಕ್ರಮ ವರ್ಗಾವಣೆ ಮತ್ತು ಭಯೋತ್ಪಾದಕರ ಹಣಕಾಸು ವಹಿವಾಟಿನ ಮೇಲೆ ನಿಗಾ ಇಡುವ ಪ್ಯಾರಿಸ್ ಮೂಲದ ಹಣಕಾಸು ಕ್ರಿಯಾ ಕಾರ್ಯಪಡೆ(ಎಫ್ಟಿಎಟಿಎಫ್) ಪಾಕಿಸ್ತಾನವನ್ನು ಈಗಾಗಲೇ ಬೂದು ಪಟ್ಟಿಗೆ ಸೇರಿಸಿದ್ದು, ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಕಪು್ಪಪಟ್ಟಿಗೆ ಸೇರಿಸುವುದಾಗಿ ಹೇಳಿದೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ, ಸೌದಿ ಅರೇಬಿಯಾದಿಂದ ದೊಡ್ಡ ಮೊತ್ತದ ಸಾಲ ಪಡೆದಿರುವ ಪಾಕ್ ಕಠಿಣ ಕ್ರಮದಿಂದ ಪಾರಾಗಲು, ಕೆಲ ಉಗ್ರ ಸಂಘಟನೆಗಳ ಮೇಲೆ ಆರ್ಥಿಕ ನಿರ್ಬಂಧ ಹೇರಿದೆ. ಒಟ್ಟಾರೆ, ಉಗ್ರವಾದವನ್ನು ಪೋಷಿಸಿದ ಅದೀಗ ಅಂತಾರಾಷ್ಟ್ರೀಯ ವಲಯದ ಭರವಸೆ ಕಳೆದುಕೊಳ್ಳುತ್ತಿರುವುದಂತೂ ವಾಸ್ತವ.