ಸಂಪಾದಕೀಯ: ಕರೊನಾ ಆತಂಕ ನಿವಾರಿಸುವ ಕೆಲಸ ಆಗಬೇಕು...

Mask 24 Sept 20
Published on

ಕರೊನಾ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತವೆ ಎಂಬ ನಿರೀಕ್ಷೆ ಸದ್ಯಕ್ಕಂತೂ ಹುಸಿಯಾಗಿದೆ. ರಾಷ್ಟ್ರದ ಸರಾಸರಿ ನೋಡಿದರೆ ಮರಣಪ್ರಮಾಣ ನಿಯಂತ್ರಣದಲ್ಲಿದೆಯಾದರೂ, ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು, ಗಣ್ಯರು ಸೋಂಕಿಗೆ ಬಲಿಯಾಗುತ್ತಿರುವುದು ಜನಸಾಮಾನ್ಯರಲ್ಲಿ ಸ್ವಲ್ಪಮಟ್ಟಿನ ಆತಂಕ ಮೂಡಿಸಿದೆ. ಕೆಲ ದಿನಗಳ ಹಿಂದಷ್ಟೇ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಕರೊನಾಗೆ ಬಲಿಯಾದ ಕಹಿಘಟನೆ ಮರೆಯುವ ಮುನ್ನವೇ ಬುಧವಾರ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ಗುರುವಾರ ಬಸವಕಲ್ಯಾಣ ಶಾಸಕ ನಾರಾಯಣ್ ರಾವ್ ನಿಧನದ ಸುದ್ದಿ ಕಳವಳ ಮೂಡಿಸಿದೆ. ಕೆಲ ಜನಪ್ರತಿನಿಧಿಗಳು ಚೇತರಿಸಿಕೊಂಡು, ಆಸ್ಪತ್ರೆಯಿಂದ ಮರಳಿದ ನಿದರ್ಶನಗಳೂ ಇವೆ. ಆದರೆ, ಈ ಕಾಯಿಲೆ ಬಗ್ಗೆ ಭಯ ವ್ಯಾಪಿಸುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಅದರಲ್ಲೂ, ದೇಶದ 7 ರಾಜ್ಯಗಳ 60 ಜಿಲ್ಲೆಗಳಲ್ಲಿ (ಕರ್ನಾಟಕದ 9) ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇವೆ. ಹಾಗಂತ, ಭಯಭೀತರಾಗಿ, ಮನೋಬಲ ಕಳೆದುಕೊಂಡರೆ ಅಪಾಯ ಹೆಚ್ಚು. ಸೋಂಕು ಪ್ರಸರಣದ ವೇಗವನ್ನು ತಗ್ಗಿಸುವ, ವೈಯಕ್ತಿಕವಾಗಿಯೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ಲಕ್ಷಣಗಳು ಕಂಡು ಬಂದ ಆರಂಭದಲ್ಲೇ ಚಿಕಿತ್ಸೆ ಪಡೆಯಬೇಕು. ಎಷ್ಟೋ ಜನರು ಆರಂಭದಲ್ಲಿ ನಿರ್ಲಕ್ಷ್ಯ ತೋರಿ, ಪರಿಸ್ಥಿತಿ ವಿಷಮವಾದ ಮೇಲೆ ಆಸ್ಪತ್ರೆಗೆ ದಾಖಲಾಗುತ್ತಾರೆ. ಇಂಥ ಧೋರಣೆ ಬೇಡ. ಹೆಚ್ಚು ಜನರು ಇರುವೆಡೆಯಲ್ಲಿ ಬೆರೆಯದೆ ಇರುವುದು, ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು, ಮುಖಗವಸು ಧರಿಸುವುದು, ಸ್ವಚ್ಛತೆಗೆ ಆದ್ಯತೆ, ಆರೋಗ್ಯಕರ ಜೀವನಶೈಲಿ ಜತೆಗೆ ಮಾನಸಿಕವಾಗಿಯೂ ಉದ್ವಿಗ್ನರಾಗದೆ ಸಮಾಧಾನದಿಂದ ಪರಿಸ್ಥಿತಿಯನ್ನು ನಿಭಾಯಿಸುವುದು ಈಗಿನ ಅಗತ್ಯ. ಕರೊನಾ ವಿರುದ್ಧದ ಸಮರದಲ್ಲಿ ಸರ್ಕಾರಕ್ಕೆ ಜನಸಾಮಾನ್ಯರ ಬೆಂಬಲ ದೊರೆತರೆ ಮಾತ್ರ ಈ ಕಠಿಣ ಪರಿಸ್ಥಿತಿಯಿಂದ ಆದಷ್ಟು ಬೇಗ ರಾಜ್ಯ, ರಾಷ್ಟ್ರ ಹೊರಬರಲು ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದನ್ನೂ ಓದಿ: ಪಂಜಾಬ್​​ ಬೌಲಿಂಗ್​ ದಾಳಿಗೆ ತತ್ತರಿಸಿದ ಆರ್​ಸಿಬಿಯ ಡಗೌಟ್​ ಪರೇಡ್​: ಕೊಹ್ಲಿ ಪಡೆಗೆ ಹೀನಾಯ ಸೋಲು!

ಕರೊನಾ ನಿಯಂತ್ರಣಕ್ಕೆ ತರುವುದೇ ರಾಜ್ಯ ಸರ್ಕಾರಗಳ ಪ್ರಮುಖ ಆದ್ಯತೆಯಾಗಬೇಕಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿರುವುದು ಸೂಕ್ತವಾಗಿಯೇ ಇದೆ. ಬುಧವಾರ ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಿರುವ ಪ್ರಧಾನಿ, ಸೋಂಕಿನ ನಿಯಂತ್ರಣಕ್ಕೆ 12 ಬಿಗಿ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಆರು ತಿಂಗಳ ಅವಧಿಯಲ್ಲಿ ಸಮರೋಪಾದಿಯಲ್ಲಿ ಕರೊನಾ ನಿಯಂತ್ರಣ ಸಾಧಿಸುವುದು, ಪ್ರಕರಣ ಹೆಚ್ಚಿರುವ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಪಡೆ ರಚಿಸುವುದು, ಸೋಂಕಿತರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಒದಗಿಸುವುದು, ನಿರ್ಬಂಧಿತ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಸೇರಿ ಹಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಕರ್ನಾಟಕ ಸೇರಿ ಎಲ್ಲ ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತವಾಗಿ ಅನುಷ್ಠಾನಕ್ಕೆ ತರಬೇಕಿದೆ. ಆ ಮೂಲಕ ಜನರಲ್ಲಿ ವಿಶ್ವಾಸವರ್ಧನೆ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net