

| ಬಿ.ಆರ್.ಸುಬ್ರಹ್ಮಣ್ಯ
ಯುವರಾಜನೊಬ್ಬನಿಗೆ ಬೇಟೆಯ ಅತೀವ ಹುಚ್ಚು. ಬರಬರುತ್ತ ಅದು ವ್ಯಸನವಾಗತೊಡಗಿದಾಗ ಮಹಾರಾಜನು ಮಗನಿಗೆ ಸಾಕಷ್ಟು ಬುದ್ಧಿ ಹೇಳಿದ. ಕೇವಲ ಮೋಜಿಗಾಗಿ ಬೇಟೆಯಾಡುವುದು ಅಪರಾಧ. ವೃಥಾ ಪ್ರಾಣಿಹಿಂಸೆ ಮಾಡುವವನಿಗೆ ಅದೇ ಹಿಂಸೆಯನ್ನು ಕರ್ಮ ವಿಧಿಸುತ್ತದೆ ಎಂದು ಏನೆಲ್ಲ ತಿಳಿಹೇಳಿದರೂ ಯುವರಾಜನಿಗದು ನಾಟಲಿಲ್ಲ. ಮಗನ ಮೊಂಡುತನದಿಂದ ಬೇಸತ್ತುಹೋದ ರಾಜನ ಅವಸ್ಥೆಯನ್ನು ಕಂಡ ಮಂತ್ರಿ, ‘ಪ್ರಭು, ಚಿಂತಿಸಬೇಡಿ. ಮನುಷ್ಯನ ಕೆಲವೊಂದು ಮೂಲಭೂತ ಪ್ರವೃತ್ತಿಗಳನ್ನು ಉಪದೇಶ ಅಥವಾ ಶಿಕ್ಷೆಯಿಂದ ಬದಲಿಸಲು ಆಗುವುದಿಲ್ಲ. ವಿವೇಕವಿರದ ಸಂಬಂಧಗಳೊಡನೆ ಬಾಳುವಾಗ ತಾಳ್ಮೆ ಇರಬೇಕು. ಮುಳ್ಳೇ ಮುಳ್ಳನ್ನು ತೆಗೆಯುವಂತೆ ಯುವರಾಜನ ಪ್ರವೃತ್ತಿಯನ್ನು ಅದೇ ಪ್ರವೃತ್ತಿ ಪರಿಹರಿಸುತ್ತದೆ. ಆ ಕಾಲ ಕೂಡಿಬರುವವರೆಗೂ ನೀವು ಎಷ್ಟೆಲ್ಲ ಬುದ್ಧಿ ಹೇಳಿದರೂ ಅವನಿಗೆ ನಾಟುವುದಿಲ್ಲ. ನೀವೇನಾದರೂ ದಂಡಿಸಹೋದರೆ ಆತ ತಿರುಗಿ ಬೀಳಲೂಬಹುದು. ಈ ಚಿಂತೆಯಿಂದ ಕೂಡಲೇ ವಿಮುಖರಾಗಿ ರಾಜ್ಯಭಾರದೆಡೆ ಗಮನಕೊಡಿ’ ಎಂದ.
ಇತ್ತ ಯುವರಾಜ ಗೆಳೆಯರೊಡಗೂಡಿ ನಿತ್ಯ ಬೇಟೆಯ ಮೋಜಿನಲ್ಲಿ ಕಾಲಯಾಪಿಸುತ್ತ ಕೆಲ ವರ್ಷಗಳು ಉರುಳಿದವು. ಎಂದಿನಂತೆ ಒಂದು ದಿನ ಅವನು ಬೇಟೆಗಾಗಿ ದಟ್ಟಕಾಡಿನಲ್ಲಿ ಸಂಚರಿಸುತ್ತಿರುವಾಗ ಹುಲಿಯೊಂದು ಸುಳಿವೇ ಕೊಡದಂತೆ ಇವನ ಮೇಲೆರಗಿ, ಇನ್ನಿಲ್ಲದಂತೆ ಘಾಸಿಗೊಳಿಸಿತು. ಗೆಳೆಯರು ಅವನನ್ನು ಹಾಗೋಹೀಗೋ ಈ ದುರ್ಘಟನೆಯಿಂದ ಪಾರುಮಾಡಿ ಅರಮನೆಗೆ ಕರೆತಂದರು. ಹುಲಿಯಾಕ್ರಮಣದ ಗಾಯಗಳಿಂದ ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾದವು.
ಈ ಅವಧಿಯಲ್ಲಿ ಉರಿ, ಸಂಕಟ ಮತ್ತು ವೇದನೆಗಳು ಅವನನ್ನು ಮಾಗಿಸಿದವು. ಚಿಂತನೆಗೂ ಹಚ್ಚಿದವು. ‘ನಾನು ಎಷ್ಟೆಲ್ಲ ನೋವು ಅನುಭವಿಸಬೇಕಾಯಿತು. ಒಂದು ಹಂತದಲ್ಲಿ ಜೀವನವೇ ಸಾಕೆನಿಸಿತು. ಪ್ರಾಣಿಗಳನ್ನು ಹೀಗೆ ಬೇಟೆಯಾಡುವಾಗ ಅವು ಎಷ್ಟು ನೋವು ಅನುಭವಿಸಿರಬಹುದು? ಛೇ ಎಂಥ ಕೆಲಸ ಮಾಡಿಬಿಟ್ಟೆ, ತಂದೆಯ ತಿಳಿವಳಿಕೆ, ಅರಿವಿನ ಮಾತುಗಳನ್ನೂ ಧಿಕ್ಕರಿಸಿ, ಯೌವನ್ನದ ಸೊಕ್ಕಿನಲ್ಲಿ ಮಾಡಬಾರದ್ದನ್ನು ಮಾಡಿದೆ. ಹಿಂಸೆ ಎಂಬುದು ಎಷ್ಟು ಘೋರ, ಯಾತನಾಮಯವಾದುದು ಎಂಬ ಅನುಭವ ಈಗ ಆಗಿದೆ. ಇದನ್ನು ಜೀವನದಲ್ಲಿ ಎಂದೂ ಮರೆಯುವುದಿಲ್ಲ. ಪ್ರಾಣಿಗಳ ಸಹಿತ ಯಾರಿಗೂ ಹಿಂಸೆ ಕೊಡುವುದಿಲ್ಲ’ ಎಂದು ಸಂಕಲ್ಪಿಸಿ, ಬೇಟೆಯಾಡುವ ವ್ಯಸನವನ್ನು ಸಂಪೂರ್ಣ ತ್ಯಜಿಸಿದ.
ಹೀಗೆ, ಯಾವುದೇ ಹಿತವಚನಕ್ಕೂ ಗಮನ ಕೊಡದ ಕೆಲವು ಮೊಂಡುತನದ ವ್ಯಕ್ತಿಗಳನ್ನು ನಮ್ಮ ಜೀವನದಲ್ಲೂ ಕಂಡಿರುತ್ತೇವೆ. ಅಂಥವರನ್ನು ಸರಿದಾರಿಗೆ ತರಲು ಇನ್ನಿಲ್ಲದ ವ್ಯರ್ಥಪ್ರಯತ್ನ ಮಾಡಿ ಸೋತುಸುಣ್ಣವಾಗಿಯೂ ಇರುತ್ತೇವೆ. ಅಂತಹ ಮೊಂಡು ವ್ಯಕ್ತಿತ್ವದವರನ್ನು ಕಾಲವೇ ಅನುಭವಗಳ ಮೂಲಕ ಮಾಗಿಸುತ್ತದೆ. ಆ ಕಾಲವನ್ನು ನಿರ್ಣಯಿಸುವುದು ವಿಧಿಯೇ. ಹಾಗಾಗಿ ಕಾಲ, ಅನುಭವ ಮತ್ತು ವಿಧಿ- ಇವು ಮನುಷ್ಯಜೀವನದ ಮೂರು ದಿವ್ಯೌಷಧಗಳು ಎಂಬುದನ್ನು ಮರೆಯುವಂತಿಲ್ಲ. ಆ ಕಾಲಕ್ಕೆ, ವಿಧಿಯ ಆಟಕ್ಕೆ ಎಲ್ಲರೂ ತಲೆಬಾಗಲೇ ಬೇಕು. ಅಲ್ಲವೇ? ಈ ಸತ್ಯವನ್ನು ಮರೆಯದೆ, ಬದುಕಿನ ಹಾದಿಯಲ್ಲಿ ಇತರರಿಗೆ ನೋವು ಕೊಡದೆ ಸಂಯಮ, ತಾಳ್ಮೆ, ವಿನಯದಿಂದ ಮುಂದೆ ಸಾಗೋಣ.
(ಲೇಖಕರು ಹವ್ಯಾಸಿ ಬರಹಗಾರರು)