ಸಂಪಾದಕೀಯ: ಅವಕಾಶ ಸದ್ಬಳಕೆಯಾಗಲಿ

E 4
Published on

ಕರೊನಾ ತಂದೊಡ್ಡಿರುವ ಸಂಕಷ್ಟ ಆರ್ಥಿಕರಂಗಕ್ಕೆ ಬಲವಾದ ಪೆಟ್ಟು ನೀಡಿದೆ. ಉದ್ಯೋಗಗಳ ನಷ್ಟ ಕಳವಳಕ್ಕೆ ಕಾರಣವಾಗಿದೆ. ಈ ಸಮಸ್ಯೆಗಳ ನಡುವೆಯೇ ಅವಕಾಶಗಳನ್ನು ಹುಡುಕಿ, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಹಲವು ರಂಗಗಳ ಚೇತರಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಚೀನಾದೊಂದಿಗಿನ ಗಡಿವಿವಾದದ ಬಳಿಕ ‘ಆತ್ಮನಿರ್ಭರ ಭಾರತ’ಕ್ಕೆ ಮತ್ತಷ್ಟು ಒತ್ತು ನೀಡಿದೆ. ಇದರ ಭಾಗವಾಗಿ, ಎಲ್ಲ ರಾಜ್ಯಗಳಲ್ಲಿ ಹೊಸ ಹೂಡಿಕೆ, ಉದ್ಯಮಶೀಲತೆಗೆ ಪ್ರೋತ್ಸಾಹ, ನವೀನ ಚಿಂತನೆಗಳ ಅನುಷ್ಠಾನ, ಮಾರುಕಟ್ಟೆ ವಿಸ್ತರಣೆಯಂಥ ಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಕೇಂದ್ರ ಸರ್ಕಾರ ಘೋಷಿಸಿರುವ ‘ಆತ್ಮನಿರ್ಭರ’ ಯೋಜಯೆಯಡಿ ಅಧಿಕ ಅನುದಾನ ಪಡೆದು ಕರ್ನಾಟಕದಲ್ಲಿ 1072 ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ಹೊಸ ಭರವಸೆ ಮೂಡಿಸಿದೆ.

ಕರೊನಾದಿಂದಾಗಿ ಹಳ್ಳಿಗಳಿಗೆ ಮರುವಲಸೆ ಹೋಗಿರುವ ಯುವ ಸಮುದಾಯ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅವರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು, ಉದ್ಯೋಗದ ಅವಕಾಶಗಳು ಹೆಚ್ಚಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಕೃಷಿ ಸಂಸ್ಕರಣಾ ಘಟಕಗಳ ಸ್ಥಾಪನೆಯಿಂದ ಜಿಡಿಪಿ ಹೆಚ್ಚಳ, ಉದ್ಯೋಗಾವಕಾಶಗಳ ಸೃಷ್ಟಿ, ಗ್ರಾಮಗಳ ಆರ್ಥಿಕತೆ ಚೇತರಿಕೆ ಸೇರಿ ಹಲವು ಬಗೆಯ ಅನುಕೂಲಗಳು ಆಗಲಿವೆ. ಆಹಾರ ಸಂಸ್ಕರಣೆ ಮೂಲಕ ಮೌಲ್ಯವರ್ಧನೆ ಮಾಡಿದರಷ್ಟೇ ಮಾರುಕಟ್ಟೆ ಸಿಕ್ಕಿ ರೈತರಿಗೆ ಹೆಚ್ಚು ಪ್ರಯೋಜನ. ದಲ್ಲಾಳಿ ಇಲ್ಲದಂತೆ ರೈತರು ನೇರವಾಗಿ ಮಾರಾಟ ಮಾಡಬಹುದು, ಉತ್ಪನ್ನಗಳನ್ನು ಮಾರುಕಟ್ಟೆಗೂ ನೀಡಬಹುದು.

ಗ್ರಾಮ ಮಟ್ಟದಿಂದ ಹಿಡಿದು, ತಾಲೂಕು, ಜಿಲ್ಲಾ ಮಟ್ಟದಲ್ಲಿ ಅಲ್ಲಿನ ಬೆಳೆಗಳಿಗೆ ತಕ್ಕಂತೆ ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ ಮಾಡುವ ಉದ್ದೇಶ ಇದ್ದು, ಇದಕ್ಕಾಗಿ ಸರ್ಕಾರ ಆತ್ಮನಿರ್ಭರ ಯೋಜನೆಯಲ್ಲಿ 10 ಸಾವಿರ ಕೋಟಿ ರೂ. ಮೊತ್ತ ಪಡೆಯಲು ಯೋಜನೆ ರೂಪಿಸುತ್ತಿದೆ. ಮೂಲಸೌಕರ್ಯಕ್ಕೂ ಆದ್ಯತೆ ಸಿಗುತ್ತಿರುವುದು ಸ್ವಾಗತಾರ್ಹ. ಗೋದಾಮು, ಶೀತಲೀಕರಣ ಘಟಕ, ಸಂಸ್ಕರಣಾ ಘಟಕ ಸ್ಥಾಪಿಸುವುದರಿಂದ ಮೌಲ್ಯವರ್ಧನೆ ಮಾಡಲು ಸಹಾಯವಾಗಲಿದೆ. ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ ಮೂಲಕ 10 ಸಾವಿರ ಜನರಿಗೆ ಕೆಲಸ ಸಿಗುವ ಭರವಸೆ ಇದೆ. ಈ ಯೋಜನೆ ರಾಜ್ಯದಲ್ಲಿನ ಉದ್ಯಮಶೀಲತೆಗೂ ಸವಾಲು ಹೌದೂ, ಅವಕಾಶವೂ ಹೌದು. ಸಾಂಪ್ರದಾಯಿಕ ಮಾದರಿಗಳನ್ನೇ ಬದಿಗಿಟ್ಟು, ಇಂಥ ಹೊಸ ಪ್ರಯೋಗಗಳತ್ತ ಹೊರಳಲು, ಆ ಮೂಲಕ ಕೈಗಾರಿಕಾ ವಲಯವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಲು ಇದು ಉತ್ತಮ ಅವಕಾಶ. ಸರ್ಕಾರದ ಈ ಚಿಂತನೆ ಮತ್ತು ಉತ್ಸಾಹ ಆರಂಭಶೂರತ್ವ ಆಗಬಾರದು. ಮುಖ್ಯವಾಗಿ, ಯೋಜನೆ ಜಾರಿ ಆಗುವಾಗ ಲೋಪಗಳಾಗದಂತೆ ಅಥವಾ ಕೆಲ ಹಿತಾಸಕ್ತಿಗಳ ಪಾಲಾಗದಂತೆ ಎಚ್ಚರ ವಹಿಸಬೇಕು. ಕೃಷಿಕರೂ ಆಹಾರ ಸಂಸ್ಕಾರಣಾ ಘಟಕಗಳ ಸದ್ಬಳಕೆ ಮಾಡಿಕೊಂಡರೆ, ತಾವು ಬೆಳೆಯುವ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆಯಬಹದು. ಒಟ್ಟಾರೆ, ಕರೊನಾ ಸಂಕಷ್ಟದ ಸಂದರ್ಭದಲ್ಲಿ ಇಂಥ ಯೋಜನೆಗಳು ಅವಶ್ಯವಾಗಿದ್ದು, ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಜಾರಿಯಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net