VIDEO | ಕೊನೆಗೂ ಸೋಷಿಯಲ್ ಮೀಡಿಯಾದಲ್ಲಿ ಧೋನಿ ಪ್ರತ್ಯಕ್ಷ!

dhoni
Published on

ನವದೆಹಲಿ: ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಂದ ಅಪಾರ ಪ್ರೀತಿಗೆ ಪಾತ್ರರಾಗಿದ್ದರೂ, ಸಾಮಾಜಿಕ ಜಾಲತಾಣಗಳಿಂದ ಸದಾ ದೂರ ಉಳಿಯುವವರು. ಅದರಲ್ಲೂ ಲಾಕ್‌ಡೌನ್ ಸಮಯದಲ್ಲಿ ಅವರು ಏನು ಮಾಡುತ್ತಿದ್ದಾರೆ ಎಂದು ಅಭಿಮಾನಿಗಳಿಗೆ ಸೂಕ್ತ ಮಾಹಿತಿಯೇ ಸಿಗುತ್ತಿರಲಿಲ್ಲ. ಧೋನಿ ಮನೆ ಗೇಟಿನ ಹೊರಗೆ ಅಭಿಮಾನಿಗಳು ಕದ್ದು ತೆಗೆದ ವಿಡಿಯೋ ಅಥವಾ ಧೋನಿ ಪತ್ನಿ ಸಾಕ್ಷಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಮಾಹಿತಿಯಿಂದ ಮಾತ್ರ ಅವರ ಬಗ್ಗೆ ತಿಳಿಯುತ್ತಿತ್ತು. ಆದರೆ ಈಗ ಕೊನೆಗೂ ಧೋನಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಧೋನಿ ಅವರ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್‌ನ ಸಾಮಾಜಿಕ ಜಾಲತಾಣಗಳ ಪುಟದಲ್ಲಿ ಅವರ ವಿಡಿಯೋ ಒಂದು ಪ್ರಕಟಗೊಂಡಿದೆ. ಇದರಲ್ಲಿನ ಧೋನಿ ಅವರ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿಡಿಯೋ ಕಾಲ್‌ನಲ್ಲಿ ಧೋನಿ ಯಾರಿಗೋ ಹಾಯ್ ಮಾಡುತ್ತಿರುವಂತೆ ಈ ವಿಡಿಯೋ ಇದ್ದು, ‘7ರಲ್ಲಿ ಬಹಳ ಅಗತ್ಯವಾಗಿದ್ದ ಪಾಸಿಟಿವಿಟಿ’ ಎಂದು ಸಿಎಸ್‌ಕೆ ಬರೆದುಕೊಂಡಿದೆ.

ಸಿಎಸ್‌ಕೆ ಈ ವಿಡಿಯೋ ಪ್ರಕಟಿಸಿದ ಬೆನ್ನಲ್ಲೇ ಅಭಿಮಾನಿಗಳಿಂದ ಕಮೆಂಟ್‌ಗಳ ಪ್ರವಾಹವೇ ಬಂದಿದೆ. ಧೋನಿ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯವನ್ನು ಆಡಿ ಒಂದು ವರ್ಷವೇ ಕಳೆದಿದೆ. ಐಪಿಎಲ್ ಮೂಲಕ ಪುನರಾಗಮನ ಕಾಣುವ ಹಂಬಲ ಅವರದಾಗಿತ್ತು. ಇತ್ತೀಚೆಗೆ ಅವರ 39ನೇ ಜನ್ಮದಿನದಂದು ಕೃನಾಲ್ ಮತ್ತು ಹಾರ್ದಿಕ್ ಪಾಂಡ್ಯ ಸಹೋದರರು ಅವರ ಮನೆಗೆ ಅಚ್ಚರಿಯ ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net