ಗಾವಸ್ಕರ್ ಗಳಿಸಿದ 10 ಸಾವಿರ ರನ್ ಈಗಿನ 16 ಸಾವಿರ ರನ್​ಗಳಿಗೆ ಸಮ!

sunil and inzamam ul haz for web
Published on

ಬೆಂಗಳೂರು: ಕ್ರಿಕೆಟ್​ ದಿಗ್ಗಜ ಸುನೀಲ್​ ಗಾವಸ್ಕರ್​ 1970, 80ರ ದಶಕದಲ್ಲಿ ವಿಶ್ವ ಕ್ರಿಕೆಟ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಆಟಗಾರ. ಇಂದಿನ ಯುವ ಪೀಳಿಗೆಗೂ ಸುನೀಲ್​ ಗಾವಸ್ಕರ್​ ಮಾದರಿಯಾಗಿ ನಿಲ್ಲುತ್ತಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಹೊಂದಿರುವ ಗಾವಸ್ಕರ್​, ಸಾಧನೆಗೆ ಬೆರಗಾಗದವರಿಲ್ಲ. ಅಂದು ಗಾವಸ್ಕರ್​ ಗಳಿಸಿರುವ 10 ಸಾವಿರ ರನ್​ ಇಂದಿನ ಕ್ರಿಕೆಟ್​ಗೆ 16 ಸಾವಿರ ರನ್​ಗಳಿಗೆ ಸಮ ಎಂದು ದಿಗ್ಗಜನ ನಿರ್ವಹಣೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಪಾಕಿಸ್ತಾನದ ಮಾಜಿ ಆಟಗಾರ ಇಂಜಮಾಮ್​ ಉಲ್​ ಹಕ್​.

ಮುಂಬೈ ಮೂಲದ ಸುನೀಲ್​ ಗಾವಸ್ಕರ್​, 1970, 80ರ ದಶಕದಲ್ಲಿ ಭಾರತೀಯ ಕ್ರಿಕೆಟ್​ನ ಅವಿಭಾಜ್ಯ ಅಂಗವಾಗಿದ್ದರು. ಲಿಟಲ್​ ಮಾಸ್ಟರ್​ ಖ್ಯಾತಿಯ ಸುನೀಲ್​ ಗಾವಸ್ಕರ್​ ಇಂದಿನ ಯುವಪೀಳಿಗೆಗೂ ಮಾದರಿಯಾಗಿದ್ದಾರೆ. 125 ಟೆಸ್ಟ್​ ಪಂದ್ಯಗಳಿಂದ 34 ಶತಕ, 45 ಅರ್ಧಶತಕ ಒಳಗೊಂಡಂತೆ 10122 ರನ್​ಗಳಿಸಿದ್ದಾರೆ. ಅವರ ಸಾಧನೆ ಕುರಿತು ಮೆಲುಕು ಹಾಕಿರುವ ಇಂಜಮಾಮ್​, ಟೆಸ್ಟ್​ ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಗಳಿಸುವುದು ಸಲುಭವಲ್ಲ. ಸುನೀಲ್​ ಗಾವಸ್ಕರ್​ ಗಳಿಸಿರುವ 10 ಸಾವಿರ ರನ್​ ಇಂದಿನ ಕ್ರಿಕೆಟ್​ಗೆ 15-16 ಸಾವಿರ ರನ್​ಗಳಿಗೆ ಸಮ ಎಂದು ಯೂಟ್ಯೂಬ್​ ಚಾನೆಲ್​ವೊಂದರಲ್ಲಿ ಹೇಳಿಕೊಂಡಿದ್ದಾರೆ. ಇಂದು ಒಬ್ಬ ಬ್ಯಾಟ್ಸ್​ಮನ್​ ಉತ್ತಮ ಫಾರ್ಮ್​ನಲ್ಲಿದ್ದರೆ  ಒಂದು ಅವಧಿಗೆ 1000 ರಿಂದ 1500 ರನ್​ ಪೇರಿಸಬಹುದು. ಆದರೆ, ಸುನೀಲ್​ ಗಾವಸ್ಕರ್​ ಆಡುವ ವೇಳೆ ಇಂಥ ಪರಿಸ್ಥಿತಿ ಇರಲಿಲ್ಲ. ಇಂದು ಸಂಪೂರ್ಣ ಬ್ಯಾಟಿಂಗ್​ ಪಿಚ್​ ತಯಾರಿಸಲಾಗುತ್ತದೆ. ಇದಕ್ಕೆ ಐಸಿಸಿ ಕೂಡ ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದ್ದಾರೆ.

1987ರಲ್ಲಿ ಸುನೀಲ್​ ಗಾವಸ್ಕರ್​ 10 ಸಾವಿರ ರನ್​ ಪೇರಿಸಿದ ಮೊದಲ ಬ್ಯಾಟ್ಸ್​ಮನ್​ ಎನಿಸಿದರು. ಆ ಬಳಿಕ 13 ಬ್ಯಾಟ್ಸ್​ಮನ್​ಗಳು ಈ ಸಾಧನೆ ಮಾಡಿದ್ದರು. ಸಚಿನ್​ ತೆಂಡುಲ್ಕರ್​ (15921ರನ್​) ಹಾಗೂ ರಾಹುಲ್​ ದ್ರಾವಿಡ್​ (13288) ಭಾರತದ ಪರ ಈ ಸಾಧನೆ ಮಾಡಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಇಂಜಾಮಾಮ್​ ಉಲ್​ ಹಕ್​ 120 ಟೆಸ್ಟ್ ಪಂದ್ಯಗಳಿಂದ 25 ಶತಕ ಸೇರಿದಂತೆ 8830 ರನ್​ ಪೇರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net