

ಮಂಗಳವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಜುಲೈ 1ರಿಂದ ಜಾರಿ ಆಗಲಿರುವ ಅನ್ಲಾಕ್ 2.0 ಪ್ರಯುಕ್ತ ದೇಶವನ್ನು ಉದ್ದೇಶಿಸಿ ಮಾತನಾಡಿ, ಹಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಕರೊನಾ ಹಾವಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ದೇಶದ 80 ಕೋಟಿ ಬಡಜನರಿಗೆ ತಿಂಗಳಿಗೆ ಐದು ಕೆಜಿ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸುವ ಯೋಜನೆಯನ್ನು ನವೆಂಬರ್ವರೆಗೆ ವಿಸ್ತರಿಸಿರುವುದಾಗಿ ಘೋಷಿಸಿದರು. ಇದಕ್ಕಾಗಿ ಸರ್ಕಾರ -ಠಿ; 2 ಲಕ್ಷ ಕೋಟಿ ವೆಚ್ಚ ಮಾಡುತ್ತಿದೆ. ಅಲ್ಲದೆ, ‘ಒಂದು ದೇಶ, ಒಂದು ರೇಷನ್ ಕಾರ್ಡ್’ ಯೋಜನೆಯೂ ಶೀಘ್ರದಲ್ಲಿ ಜಾರಿಗೆ ಬರಲಿದ್ದು, ವಲಸಿಗರಿಗೆ ಅನುಕೂಲವಾಗಲಿದೆ.
ದೇಶದಾದ್ಯಂತ ಕರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸ್ಥಿತಿಯ ವಿರುದ್ಧ ಇನ್ನಷ್ಟು ತಿಂಗಳುಗಳ ಕಾಲ ಹೋರಾಡುವ ಅನಿವಾರ್ಯತೆಯನ್ನೂ ಪ್ರಧಾನಿ ಸೂಚ್ಯವಾಗಿ ತಿಳಿಸಿದರು. ದಿಗ್ಬಂಧನ ಘೋಷಣೆ ಆದಾಗ ಜನರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರು, ಶಿಸ್ತಿನ ಧೋರಣೆ ತಳೆದಿದ್ದರು. ಆದರೆ, ಈ ವರ್ತನೆ ಅನ್ಲಾಕ್-1ರ ಹೊತ್ತಲ್ಲಿ ಕಂಡುಬರಲಿಲ್ಲ ಎಂಬ ಕಟುಸತ್ಯವನ್ನು ಪ್ರಸ್ತಾಪಿಸಿದ ಮೋದಿ, ಸರ್ಕಾರದ ಪ್ರಯತ್ನಗಳೊಂದಿಗೆ ಕರೊನಾ ವಿರುದ್ಧ ಹೋರಾಟದಲ್ಲಿ ಜನರ ಪಾತ್ರವೂ ಪ್ರಮುಖವಾಗಿದೆ ಎಂದು ಒತ್ತುಕೊಟ್ಟು ಹೇಳಿದ್ದಾರೆ.
ಪ್ರಸಕ್ತ ಪರಿಸ್ಥಿತಿ ಚೇತರಿಕೆ ಕಾಣದೆ ಇರುವುದರಿಂದ ಜುಲೈ 31ರವರೆಗೆ ಶಾಲೆ, ಕಾಲೇಜು ಮತ್ತು ಮೆಟ್ಟೋ ಸಂಚಾರ ಆರಂಭಿಸದೆ ಇರಲು ನಿರ್ಧರಿಸಲಾಗಿದೆ. ಕಂಟೇನ್ಮೆಂಟ್ ವಲಯಗಳಲ್ಲಿ ಬಿಗಿ ನಿಯಮ ಮುಂದುವರಿಯಲಿದೆ. ಮತ್ತಷ್ಟು ದೇಶೀಯ ವಿಮಾನಗಳ ಹಾರಾಟಕ್ಕೂ ಅನುಮತಿ ಸಿಕ್ಕಿದೆ. ಆರ್ಥಿಕ ಚಟುವಟಿಕೆಗಳಿಗೆ ಜೀವ ತುಂಬುವ ಪ್ರಯತ್ನಗಳೂ ನಡೆಯಲಿವೆ. ಅಂದರೆ, ಕರೊನಾದೊಂದಿಗೆ ಹೋರಾಡುತ್ತಲೇ ಆರ್ಥಿಕತೆಯನ್ನು, ಜನಜೀವನವನ್ನು ಸಹಜಸ್ಥಿತಿಗೆ ತರುವ ಸವಾಲು ಎಲ್ಲರ ಮುಂದಿದೆ. ದೇಶ ಅನ್ ಲಾಕ್ ಆದ ಮಾತ್ರಕ್ಕೆ ಸೋಂಕಿನ ಅಪಾಯವನ್ನು ನಿರ್ಲಕ್ಷಿಸಬಾರದು.
ಮುಖಗವಸು ಧರಿಸುವುದು, 2 ಗಜದ ಸುರಕ್ಷಿತ ಅಂತರ ಕಾಪಾಡುವುದು, ಆಗಾಗ 20 ಸೆಕೆಂಡುಗಳ ಕಾಲ ಕೈ ತೊಳೆಯುವುದು-ಇಂಥ ಸುಲಭ ಮತ್ತು ಅವಶ್ಯಕ ನಿಯಮಗಳನ್ನು ಆರಂಭದಲ್ಲಿ ಪಾಲಿಸಲಾಯಿತಾದರೂ, ಈಗ ಮನೆ ಹೊರಗೆ ಬಿದ್ದಿರುವ ಜನರು ಇವನ್ನು ಸರಿಯಾಗಿ ಪಾಲಿಸುತ್ತಿಲ್ಲ. ಹಾಗಾಗಿಯೇ, ಸೋಂಕು ಪ್ರಸರಣದ ವೇಗ ಹೆಚ್ಚುತ್ತಿದೆ, ಮರಣ ಪ್ರಮಾಣವೂ ಜಾಸ್ತಿ ಆಗುತ್ತಿದೆ. ಒಂದಿಷ್ಟು ಉದಾಸೀನ ಭಾವ ತಳೆದರೂ ಅದರಿಂದ ಭಾರಿ ಹಾನಿ ಎದುರಿಸಬೇಕಾಗುತ್ತದೆ.
ಕೋಟ್ಯಂತರ ಜೀವಗಳು ಉಳಿಯಬೇಕು, ಮುಂಚಿನಂತೆ ಜನಜೀವನವೂ ಸಹಜಸ್ಥಿತಿಗೆ ಮರಳಬೇಕು ಎಂಬ ಉದ್ದೇಶದಿಂದ ಈ ನಿಯಮಗಳನ್ನು ರೂಪಿಸಲಾಗಿದೆ. ಅವುಗಳನ್ನು ಗಾಳಿಗೆ ತೂರಿ ಉಡಾಫೆಯಿಂದ ವರ್ತಿಸುವುದು ಸಲ್ಲ. ‘ದೇಶದ ಪ್ರಧಾನಿಯಿಂದ ಹಿಡಿದು ಹಳ್ಳಿಯ ಸಾಮಾನ್ಯ ಪ್ರಜೆಗಳವರೆಗೆ ಎಲ್ಲರಿಗೂ ನಿಯಮಗಳು ಅನ್ವಯವಾಗುತ್ತವೆ’ ಎಂಬ ವಾಸ್ತವವನ್ನು ಮೋದಿ ಬಿಚ್ಚಿಟ್ಟಿದ್ದಾರೆ. ಹಲವೆಡೆ ವ್ಯಾಪಾರಿಗಳು, ಜನರು ಸ್ವಯಂಪ್ರೇರಿತ ಲಾಕ್ಡೌನ್ ಘೋಷಿಸಿ, ಸುರಕ್ಷಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಇಂಥ ಕ್ರಮಗಳು ಇತರರಿಗೂ ಮಾದರಿಯಾಗಲಿ, ನಾಗರಿಕರ ಬದ್ಧತೆ ಮತ್ತಷ್ಟು ಹೆಚ್ಚಲಿ.