ಸಂಪಾದಕೀಯ: ನಿಯಮಗಳನ್ನು ಪಾಲಿಸಿ

sampadkiya may
Published on

ರೊನಾ ಸೋಂಕಿನ ಹಾವಳಿ ನಿಯಂತ್ರಿಸಲು ಹೇರಲಾಗಿರುವ ನಾಲ್ಕನೇ ಹಂತದ ದಿಗ್ಬಂಧನ ಮೇ 31ರಂದು ಕೊನೆಗೊಳ್ಳಲಿದೆ. ಮೂರು ಮತ್ತು ನಾಲ್ಕನೇ ಹಂತದ ದಿಗ್ಬಂಧನವನ್ನು ಸಡಿಲಿಸಿ ಹಲವು ವಿನಾಯಿತಿಗಳನ್ನು ನೀಡಿದ ಪರಿಣಾಮ ಕ್ರಮೇಣ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ, ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿವೆ. ಜೂನ್ 1ರಿಂದ ದಿಗ್ಬಂಧನ ಮತ್ತೆ ಸ್ವಲ್ಪ ಅವಧಿಗೆ ಮುಂದುವರಿಸುವ ಸಾಧ್ಯತೆ ಇದೆಯಾದರೂ, ಮತ್ತಷ್ಟು ವಿನಾಯಿತಿಗಳನ್ನು ನೀಡಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಕಳೆದ ಎರಡು ತಿಂಗಳುಗಳಿಂದ ಬಾಗಿಲು ಹಾಕಿದ್ದ ದೇವಸ್ಥಾನ, ಮಸೀದಿ, ಚರ್ಚ್​ಗಳು ತೆರೆಯಲಿವೆ. ಹೋಟೆಲ್​ಗಳು ಪುನರಾರಂಭಗೊಳ್ಳಲಿವೆ. ಆದರೆ, ಸುರಕ್ಷತಾ ವ್ಯವಸ್ಥೆ, ವೈಯಕ್ತಿಕ ಅಂತರ (ಸಾಮಾಜಿಕ ಅಂತರ) ಕಾಪಾಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ಸೇರಿ ಸೂಕ್ತ ಎಚ್ಚರಿಕೆಯೊಂದಿಗೇ ಈ ಚಟುವಟಿಕೆಗಳು ಪುನರಾರಂಭಗೊಳ್ಳಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಮಾಲ್, ಥೇಟರ್​ಗಳನ್ನು ತೆರೆಯಬೇಕು ಎಂಬ ಆಗ್ರಹವಿದೆಯಾದರೂ, ಈ ಬಗ್ಗೆ ಕೇಂದ್ರ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿರುವುದರಿಂದ, ರಾಜ್ಯ ಕಾದು ನೋಡುವ ತಂತ್ರ ಅನುಸರಿಸಲು ಮುಂದಾಗಿದೆ. ಅದೇನಿದ್ದರೂ, ಜೂನ್ 1ರಿಂದ ಜನಜೀವನ ಮತ್ತಷ್ಟು ಸಹಜತೆಗೆ ಮರಳಲಿದೆ. ಇದೊಂದು ಸಮಾಧಾನದ ವಿಷಯವೇ. ಆದರೆ, ಈ ಸಡಿಲಿಕೆ, ಆರ್ಥಿಕ ಚಟುವಟಿಕೆಗಳ ಪುನರಾರಂಭ ಎಲ್ಲವೂ ಜನರ ಹಿತಕ್ಕಾಗಿ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕರೊನಾ ಸೋಂಕಿತರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಂಥ ಹೊತ್ತಲ್ಲಿ ದಿಗ್ಬಂಧನ ಬಿಗಿಗೊಳಿಸಬೇಕು ಎಂಬ ಆಗ್ರಹವನ್ನೂ ಕೆಲವರು ಮಾಡುತ್ತಿದ್ದಾರೆ. ಆದರೆ, ಕಠಿಣ ದಿಗ್ಬಂಧನ ಇನ್ನಷ್ಟು ಅವಧಿ ಮುಂದುವರಿಸಿದರೆ ಅದರಿಂದಾಗುವ ಹಾನಿ ಅಪಾರ. ಅದನ್ನು ಗಮನಿಸಿಯೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವು ವಲಯಗಳ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿವೆ. ಅಂದ ಮಾತ್ರಕ್ಕೆ, ಕರೊನಾ ಸೋಂಕಿನ ಅಪಾಯ ಕಡಿಮೆ ಆಗಿದೆ ಅಥವಾ ಅದು ನಿಯಂತ್ರಣಕ್ಕೆ ಬಂದು ಬಿಟ್ಟಿದೆ ಎಂದರ್ಥವಲ್ಲ.

ಈ ಸೋಂಕು ಬೇಗನೆ ಕೊನೆಗಾಣುವ ಲಕ್ಷಣ ಸದ್ಯಕ್ಕಂತೂ ಇಲ್ಲ. ಹಾಗಾಗಿ, ಈ ಪರಿಸ್ಥಿತಿಯ ಮಧ್ಯೆಯೆ ಜೀವನವನ್ನು ಕಟ್ಟಿಕೊಳ್ಳುವ ಪ್ರಕ್ರಿಯೆ ಮುಂದುವರಿಯಬೇಕಾಗಿದೆ. ಆದ್ದರಿಂದ ಜನಸಾಮಾನ್ಯರು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳುವ, ಸರ್ಕಾರದ ನಿಯಮಗಳನ್ನು ತಪ್ಪದೇ ಪಾಲಿಸುವ ಅಗತ್ಯ ಇದೆ. ಒಂದಿಷ್ಟು ಉದಾಸೀನ ತೋರಿದರೂ ಅದರಿಂದ ಇಡೀ ಸಮಾಜಕ್ಕೆ ಹಾನಿ ಆಗುವ ಸಾಧ್ಯತೆ ಇದೆ. ಸ್ವಚ್ಛತೆ ಕಾಯ್ದುಕೊಳ್ಳಲು ಪ್ರಧಾನ ಆದ್ಯತೆ ನೀಡುವುದು, ಗುಂಪುಗಳಾಗಿ ಸೇರದೆ ಇರುವುದು, ಮುಖಗವಸು ಧರಿಸುವುದು ಸೇರಿ ಅವಶ್ಯಕ ಕ್ರಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕಿದೆ. ಇಲ್ಲದಿದ್ದಲ್ಲಿ, ಸೋಂಕಿತರ ಸಂಖ್ಯೆ ಹೆಚ್ಚಿ ಮತ್ತೆ ದಿಗ್ಬಂಧನವನ್ನು ಕಠಿಣಗೊಳಿಸುವ ಸ್ಥಿತಿ ಸೃಷ್ಟಿಯಾದರೆ, ಅದರಿಂದ ಜನಸಾಮಾನ್ಯರು ಪರದಾಡುವಂತಾಗುತ್ತದೆ. ಹಾಗಾಗಬಾರದು ಎಂದರೆ,

ಲಾಕ್​ಡೌನ್ ಸಡಿಲಿಕೆಯ ಲಾಭವನ್ನು ಅವಶ್ಯಕ ಕಾರ್ಯಗಳಿಗೋಸ್ಕರ ಎಚ್ಚರ ದಿಂದ ಬಳಸಬೇಕು. ಆ ಮೂಲಕ ಜನಜೀವನ ಸುಗಮವಾಗಿ ಸಾಗಲು ಅನುವು ಮಾಡಿ ಕೊಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ ಎಂಬುದನ್ನು ಮರೆಯಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net