ವಿಜಯವಾಣಿ ಸಂಪಾದಕೀಯ: ರೈತರ ಸಂಕಷ್ಟಕ್ಕೆ ಸ್ಪಂದನೆ

krushi april 02
Published on

ರೊನಾ ಸೋಂಕಿನ ಪರಿಣಾಮ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್​ಡೌನ್ ಘೋಷಿಸಲಾಗಿರುವುದರಿಂದ ಹಲವು ವಲಯಗಳು ಸಂಕಷ್ಟಕ್ಕೆ ಒಳಗಾಗಿದ್ದರೂ, ರೈತರು ತುಂಬ ತೊಂದರೆ ಅನುಭವಿಸುತ್ತಿರುವುದು ಸತ್ಯ. ಬೆಳೆ ಕೈಗೆ ಬಂದಿದ್ದರೂ ಅವುಗಳನ್ನು ಮಾರುಕಟ್ಟೆಗೆ, ಪೇಟೆಗಳಿಗೆ ಮಾರಾಟಕ್ಕೆ ಒಯ್ಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೋಟಗಾರಿಕೆ ಬೆಳೆಗಳಾದ ಟೊಮ್ಯಾಟೋ, ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ನಿಂಬೆ ದೊಡ್ಡ ಪ್ರಮಾಣದಲ್ಲಿ ಹೊರ ರಾಜ್ಯಗಳಿಗೆ ರಫ್ತಾಗುತ್ತಿತ್ತು. ಕೆಲವೆಡೆ ಬೆಳೆಗಾರರು ಹತಾಶರಾಗಿ ಟೊಮ್ಯಾಟೋ, ಕಲ್ಲಂಗಡಿ ಸೇರಿ ಕೆಲ ಕೃಷಿ ಉತ್ಪನ್ನಗಳನ್ನು ರಸ್ತೆಗೆ ಸುರಿದ ಘಟನೆಗಳು ನಡೆದಿವೆ. ಕಲಬುರಗಿ ಜಿಲ್ಲೆಯಲ್ಲಿ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಸಮಸ್ಯೆಗಳು ಮತ್ತಷ್ಟು ತೀವ್ರಸ್ವರೂಪಕ್ಕೆ ಹೋಗುವ ಮುನ್ನ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕೆಲವು ರಿಯಾಯಿತಿಗಳನ್ನು ಘೋಷಿಸಿದೆ.

ರೈತರ ಉತ್ಪನ್ನ ಖರೀದಿಸಿ ಮಾರಾಟಕ್ಕೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಆಹಾರ ಸಾಮಗ್ರಿ, ತರಕಾರಿ, ಹಣ್ಣು ಸರಬರಾಜು ವಾಹನಗಳನ್ನು ತಡೆಯದಂತೆ ಪೊಲೀಸರಿಗೆ ಸೂಚಿಸಲಾಗಿದೆ. ಹೆಚ್ಚುವರಿ ಹಾಲನ್ನು ಸರ್ಕಾರವೇ ಖರೀದಿಸಿ, ಬಡವರಿಗೆ ಉಚಿತವಾಗಿ ವಿತರಣೆ ಮಾಡುತ್ತಿದೆ. ಅಲ್ಲದೆ, ಹಣ್ಣು, ತರಕಾರಿ, ದಿನಸಿ ಅಂಗಡಿ ದಿನವಿಡೀ ತೆರೆಯಲು ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ. ಹಾಪ್​ಕಾಮ್ಸ್​ಗಳಿಗೆ ಹೆಚ್ಚುವರಿ ಖರೀದಿಗೆ ಅವಕಾಶ ಕಲ್ಪಿಸಿರುವುದು ಸಕಾಲಿಕ. ‘ರೈತರು ಆತಂಕ ಪಡುವುದು ಬೇಡ, ಹಣ್ಣು, ತರಕಾರಿ ಸೇರಿ ಕೃಷಿ ಉತ್ಪನ್ನಗಳ ವಹಿವಾಟು ಮತ್ತು ಕೃಷಿ ಚಟುವಟಿಕೆಗಳಿಗೆ ಲಾಕ್​ಡೌನ್ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ಸಾಗಣೆ, ಮಾರಾಟ, ಖರೀದಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ’ ಎಂದು ಕೃಷಿ ಸಚಿವರು ಬುಧವಾರ ದಿಗ್ವಿಜಯ ನ್ಯೂಸ್ ಮತ್ತು ವಿಜಯವಾಣಿಯ ರೈತಸಂವಾದದಲ್ಲಿ ಅಭಯ ನೀಡಿದ್ದು, ಭರವಸೆ ಮೂಡಿಸಿದೆ. ಆದರೆ, ಈ ಮಧ್ಯೆ ಪರಿಸ್ಥಿತಿಯ ದುರ್ಲಾಭ ಪಡೆಯಲು ಒಂದಿಷ್ಟು ಏಜೆಂಟರು, ಮಧ್ಯವರ್ತಿಗಳು ಯತ್ನಿಸುತ್ತಿದ್ದು, ರೈತರಿಗೂ, ಗ್ರಾಹಕರಿಗೂ ಮೋಸ ಎಸಗುತ್ತಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ತರಕಾರಿ, ಹಣ್ಣು ಮಾರುಕಟ್ಟೆಗೆ ಬರುತ್ತಿದ್ದರೂ ಮಧ್ಯವರ್ತಿಗಳ ಹಾವಳಿಯಿಂದಾಗಿ ಗ್ರಾಹಕರು ಹಲವು ಪಟ್ಟು ಬೆಲೆ ಭರಿಸಬೇಕಾಗಿದೆ. ಆದರೆ, ಬೆಳೆಗಾರರು ಮಾತ್ರ ಸಾಮಾನ್ಯಕ್ಕಿಂತಲೂ ಕಡಿಮೆ ಬೆಲೆಗೆ ಕೃಷಿಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ರೇಷ್ಮೆ ಸೇರಿ ಹಲವು ಬೆಳೆಗಳ ಬೆಲೆ ಇಳಿಸಲು ಇಂಥ ಏಜೆಂಟರು ಯತ್ನಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹಾಗಾಗಿಯೇ, ಇಂಥ ಅಪಸವ್ಯಗಳನ್ನು ಮೊದಲು ತಡೆಯಬೇಕಿದೆ. ಈ ನಿಟ್ಟಿನಲ್ಲಿ ಮಧ್ಯವರ್ತಿಗಳ ಹಾವಳಿ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕಿದೆ. ವಹಿವಾಟಿಗೆ ಮುಕ್ತ ಅವಕಾಶ ಕಲ್ಪಿಸಿರುವುದು ರೈತರ ಹಿತಕ್ಕೆ ಪೂರಕ. ಆದರೆ, ಈ ಹೊತ್ತಲ್ಲಿ ಕರೊನಾ ಅಪಾಯವನ್ನು ಕಡೆಗಣಿಸಬಾರದು. ಗುಂಪುಗೂಡಿ ನಿಯಮ ಉಲ್ಲಂಘಿಸಬಾರದು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ವಹಿವಾಟು ನಡೆಸುವುದು ಎಲ್ಲರ ಆರೋಗ್ಯದ ದೃಷ್ಟಿಯಿಂದ ಉತ್ತಮ. ಮುಖ್ಯವಾಗಿ, ಲಾಕ್​ಡೌನ್ ಅವಧಿ ಎಲ್ಲ ಜನರಿಗೂ ಸಂಕಷ್ಟದ ದಿನಗಳಾಗಿವೆ. ಆದರೆ ಇದನ್ನು ಎದುರಿಸುವುದು ಅನಿವಾರ್ಯ ಎಂಬುದನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ಎಲ್ಲಕ್ಕಿಂತ ಜೀವನ ಅಮೂಲ್ಯ. ಹಾಗಾಗಿ, ಆತ್ಮಹತ್ಯೆಯಂಥ ಘಟನೆಗಳಿಗೆ ಮುಂದಾಗದೆ, ಮುಂದಿನ ದಿನಗಳು ಭರವಸೆಯಿಂದ ತುಂಬಿರಲಿವೆ ಎಂಬ ಆಶಾವಾದ, ತಾಳ್ಮೆ ಸದ್ಯದ ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net