

ಹಂಗ ಇದ್ದ ಜಗನ್ನಾಥ ಹಿಂಗ ಯಾಕ ಆದ ಅನ್ನುವ ವಿಚಾರ ಯಾವಾಗಾದರೂ ಒಮ್ಮೊಮ್ಮೆ ಸುರಿಯುವ ನರಿಮಳಿ ಹಂಗ ಬಂದು, ಊರ ತುಂಬ ಹರಡಿ, ಇಲ್ಲಿರುವ ಬೆರೆಳೆಣಿಕೆಯಷ್ಟು ಭಾರತೀಯ ಮಂದಿಯ ಬಾಯಾಗ ಆವಾಗಾವಾಗ ಎಲಿ- ಅಡಿಕಿ ಆಗಿ ಕೆಂಪು ಜೊಲ್ಲು ಉಕ್ಕಿಸಿ ಮತ್ತ ತಣ್ಣಗಾಗತಿತ್ತು. ಆದರೆ ಡೆಂಟಿಸ್ಟ್ ರಘು ಮಾತ್ರ ಒಮ್ಮೆ ಅವರು ಕೇಳಿದ ಸಮಯಕ್ಕೆ ಅಪಾಂಟಮೆಂಟ್ ಕೊಡದೆ ಕಾಯಿಸಿದ್ದೆ ಅಂತ ನೆನೆಪಿಸಿಕೊಳ್ಳುತ್ತಾನೆ. ಮತ್ತೊಮ್ಮೆ ಟ್ರಿಟಮೆಂಟ್ ಮಾಡುವಾಗ ಭಾಳ ಹಲ್ಲು ನೋವು ಮಾಡಿದ್ದೆ ಅಂತ ಅವಲತ್ತುಕೊಳ್ಳುತ್ತಾನೆ. ಆದರೆ ರಘುನ ಈ ನಡುವಳಿಕೆಯಿಂದಲೆ ಜಗನ್ನಾಥ ಹೀಗಾದ ಅಂತ ನಮಗಾರಿಗೂ ಅನಿಸುವದಿಲ್ಲ. ಅಷ್ಟೇ ಅಲ್ಲ ಈ ಊರಿನ ಯಾರೂ ಇದಕ್ಕೆ ಕಾರಣ ಅನ್ನಿಸುವದಿಲ್ಲ. ಅವನ ಕುಳ್ಳ ಆಕಾರ, ಹಗಲು ಹನ್ನೆರಡು ತಾಸು ಅವನು ಇನ್-ಶರ್ಟ್ ಮಾಡಿ ಹಾಕಿಕೊಳ್ಳುವ ಒಗೆದು ಇಸ್ತ್ರಿ ಮಾಡಿದ ಸ್ವಚ್ಛ ವೆಲ್ಡಿಂಗ ಯೂನಿಫಾರ್ಮ್, ಯಾವಾಗಲೂ ತಲೆ ಮೇಲೆ ಸಣ್ಣ ಕೂದಲಿನ ವಿಗ್, ಇವನೆಲ್ಲ ನೋಡಿರುವ ಈ ಊರಿನ ಮಂದಿಗೆ ಅದರಲ್ಲೂ ನಮ್ಮ ಭಾರತದ ಮಂದಿಗೆ ಇವನು ವಿಚಿತ್ರ ಅನಿಸಿದ್ದು ಖರೆ. ಭಾರತದವರು ಅಪರೂಪವಾಗಿರುವ ಈ ಊರಿನಲ್ಲಿದ್ದು ಯಾರೊಂದಿಗೂ ಬೆರೆಯದ ಇವನನ್ನು ಎಲ್ಲರೂ ಅಲಕ್ಷಿಸುವವರೆ. ನನಗಿನ್ನೂ ನೆನೆಪದ.. ಸುಮಾರು ಏಳು ವರ್ಷದ ಹಿಂದ ನಾನು ಆಸ್ಟ್ರೇಲಿಯಾದ ರಾಕ್ ಹ್ಯಾಂಪಟನ್ ಅನ್ನೋ ಈ ಊರಿಗೆ ರೇಲ್ ಟ್ರ್ಯಾಕ್ ಇಂಜನಿಯರ ಅಂತ ಕ್ವೀನ್ಸ ಲ್ಯಾಂಡ್ ರೈಲ್ವೆ ಶೆಡ್ ಗೆ ಕೆಲಸಕ್ಕೆ ಬಂದಾಗ ಮೊದಲು ಭೇಟಿಯಾದ ಭಾರತೀಯನ.. ಈ ಜಗನ್ನಾಥ. ವರ್ಕಶಾಪನಲ್ಲಿ ವೆಲ್ಡರ್ ಅಂತ ಕೆಲಸ ಮಾಡುತ್ತಿದ್ದ ಈ ಜಗನ್ನಾಥನನ್ನು ನೋಡಿ, ಅದರಾಗೂ ಅವನು ನಮ್ಮ ಕನ್ನಡವನು ಅಂತ ಗೊತ್ತಾದಾಗ ಇನ್ನು ಖುಷಿಯಾಗಿತ್ತು. ಊರು ಅಂದ್ರ ಎಂಥಾ ಊರಿದು.. ಇರೂ ಎಲ್ಲ ಮನಿಗಳನ್ನೆಲ್ಲ ಎಣಿಸಿದರ ಸುಮಾರು ಐನೂರು ಇರಬಹುದು, ಐದು ನೂರು ಮನೆಗಳಿರುವ ಈ ಊರಿನಲ್ಲಿ ಹದಿನೈದು ಭಾರತ ಮೂಲದ ಕುಟುಂಬಗಳಿದ್ದು ಎಲ್ಲರೂ ಎಲ್ಲರಿಗೂ ಗೊತ್ತಿರುವವರೆ.. ಹೊಟೇಲ್ ಬಿಸಿನೆಸ್ ನಡೆಸುವ ಗುಜ್ಜುಗಳು, ಟ್ಯಾಕ್ಸಿ ಬಿಸಿನೆಸ್ ಶುರುಮಾಡಿರುವ ಪಂಜಾಬಿಗಳು, ಮತ್ತು ಜನರನ್ನು ಮನಸೊ ಇಚ್ಛೆ ಚಾರ್ಜ್ ಮಾಡಿ ದೊಡ್ಡ ದೊಡ್ಡ ಕ್ಲಿನಿಕ್ ಇಟ್ಟುಕೊಂಡಿರುವ ದಕ್ಷಿಣ ಭಾರತದ ಡಾಕ್ಟರ ಮತ್ತು ಡೆಂಟಿಸ್ಟ್ ಗಳು ಇರುವ ಈ ಸಣ್ಣ ಊರಿನಲ್ಲಿ ಮಿನಿ ಭಾರತವೆ ಅಡಗಿದೆ ಅಂತ ಗೊತ್ತಾಗಲಿಕ್ಕೆ ನನಗೆ ಭಾಳ ದಿನ ಬೇಕಾಗಲಿಲ್ಲ. ಈ ಊರ ನಟ್ಟ ನಡಬರಕ ಇರೋ ಸಿಟಿ ಸೆಂಟರ್ ಅಂದ್ರ ಈ ಊರಿನ ಜನರಿಗೆ ಪಡಸಾಲಿ ಇದ್ದಂಗ. ಕೆಲಸ ಇರಲಿ, ಇಲ್ಲದ ಇರಲಿ ದಿನಕ್ಕೆ ಒಮ್ಮೆ ಆದ್ರೂ ಬಂದು ಹೋದರ ಅವರಿಗೆ ಸಮಾಧಾನ. ಸಿಟಿ ಸೆಂಟರ್ ಅಂದ್ರ ಏನು ಅಂತ ಅನಕೊಂಡಿರಿ.. ಅಧಿಕ ಚಿನ್ಹೆ ತರ ಇರುವ ಎರಡು ಅಡ್ಡ - ಉದ್ದ ರಸ್ತೆಯೊಳಗ ತುಂಬಿರುವ ಹತ್ತು ಮತ್ತು ಇನ್ನೊಂದು ನಾಲ್ಕು ಅಂಗಡಿಗಳು. ಇವುಗಳಲ್ಲಿ ಎರಡು ಬಾರು, ನಾಲ್ಕು ರೆಸ್ಟೋರಂಟ್ , ಒಂದು ನ್ಯೂಸ್ ಏಜೆನ್ಸೀ ಕಂ ಪೋಸ್ಟ್ ಆಫೀಸ್ ಹಾಗೆಯೆ ನಮ್ಮ ಭಾರತೀಯರ ಡಾಕ್ಟರ್ ಮತ್ತು ಡೆಂಟಿಸ್ಟ್ ಗಳ ಕ್ಲಿನಿಕ್ ಗಳು ಇರೋದು ಇಲ್ಲೆ.. ಮೊದಲ ಸಲ ನಾನು ಈ ಸಿಟಿ ಸೆಂಟರಗೆ ಹೋದಾಗ ಮಸಾಲಾ ಇಂಡಿಯನ್ ರೆಸ್ಟೋರಂಟ್ ಮತ್ತ ಇಂಡಿಯನ್ ಅರೋಮಾ ಗ್ರೋಸರಿ ಅಂಗಡಿಗಳನ್ನು ನೋಡಿ ಭಾಳ ಖುಷಿ ಆಗಿತ್ತು. ಇಲ್ಲಿಗೆ ಬಂದ ಮೊದಲನೆ ವಾರಾಂತವೆ ಗುಜ್ಜು ಹಿತೇಶನ ಮಸಾಲಾ ಇಂಡಿಯನ್ ರೆಸ್ಟೋರಂಟ್ಗೆ ಹೋಗಿದ್ದೆ. ನನಗೆ ಹಿಂದಿ ಬರುವದಿಲ್ಲ ಅಂತ ತಿಳಿದ ತಕ್ಷಣ ಸೌತದವನು ಅಂತ ತಿಳಿದುಕೊಂಡು ಅವರು ಗೊತ್ತಾ ? ಇವರು ಗೊತ್ತಾ ಅಂತ ಕೇಳಲು ಶುರು ಮಾಡಿದ. ನನಗೆ ಜಗನ್ನಾಥ ಗೊತ್ತು ಅಂತ ಹೇಳಿದೆ. ಮೊದಲಿನಿಂದಾ ಅಥವಾ ಇಲ್ಲಿಗೆ ಬಂದ ಮೇಲೆಯೊ ಅಂತ ಕೇಳಿದ. ಒಂದು ವಾರದಿಂದ ಅಂತ ಹೇಳಿದೆ. “ಅಯ್ಯೋ ಭಾಯಿ ನೀ ಯಾರ ಜೊತೆಗಾದ್ರೂ ದೋಸ್ತಿ ಇಟಗೊ, ಆದರೆ ಆ ಜಗನ್ನಾಥನಿಂದ ಮಾತ್ರ ದೂರ ಇರು. ಕಾಳಜಿ ಮಾಡಬೇಡ ನೀ ಅವನ ಹತ್ರ ಹೋದರೂ ಅವನು ನಿನ್ನಿಂದ ದೂರ ಓಡುತಾನೆ ,ವಿಚಿತ್ರ ಮನುಷ್ಯ ಅಂತ ಹೇಳಿ ಒಂಥರಾ ನಕ್ಕ. ಇದಾದ ಮೇಲೆ ನಾನು ಹಿತೇಶನ ಮಾತನ್ನು ತಲೆಗೆ ತೊಗೊಳದೆ ಜಗನ್ನಾಥನ ಜೊತೆ ಮಾತನ್ನಾಡುತ್ತಿದ್ದೆ. ಯಾರೊಂದಿಗೂ ಮಾತನಾಡದ ಜಗನ್ನಾಥ ನನ್ನೊಂದಿಗೆ ಮಾತ್ರ ಸರಿಯಾಗಿಯೇ ಮಾತನಾಡುತ್ತಿದ್ದ. ಅದೊಂದು ಕೆಲಸದ ದಿನ ಮದ್ಯಾನ್ಹ ಲಂಚ ಬ್ರೇಕ್ನಲ್ಲಿ ಜಗನ್ನಾಥ ತನ್ನ ಕೆಲಸದ ಯೂನಿಫಾರ್ಮ್ ನ್ನು ಬಿಚ್ಚಿಟ್ಟು ಟ್ರ್ಯಾಕ್ ಸೂಟ್ ಹಾಕಿಕೊಂಡು ಜಾಗಿಂಗ್ ಮಾಡುವತರ ಹೊರಗೆ ಹೋಗತಾ ಇದ್ದ. ಅವನ್ನೇ ಕೇಳೋಣವೆಂದರೆ ಆಗಲಿಲ್ಲ. ಆದರೆ ಅಲ್ಲೇ ಸಮೀಪ ರೆಸೆಪಶನ್ ದಲ್ಲಿದ್ದ ಮೇರಿ “ನೀನು ಜಗಾನನ್ನ ನೋಡಿದ್ಯಾ ಅವನು ಪ್ರತಿ ದಿವಸ ಲಂಚ ಬ್ರೇಕ್ ನಲ್ಲಿ ಜಾಗಿಂಗ್ ಹೋಗುತ್ತಾನೆ. ಬಹಳ ವಿಚಿತ್ರ ಮನುಷ್ಯ’ ಅಂದಳು. ಹಾಗೆ ಮುಂದುವರೆದು ಅಷ್ಟೇ ಅಲ್ಲ ತಾನು ಜಗನ್ನಾಥ ನನ್ನು ಕೇಪ್ ಹಿಲ್ ಬರೋದ ಬುಶ್ ವಾಕಿಂಗ್ ಟ್ರ್ಯಾಕ್ ನಲ್ಲಿಯೂ, ಗೂಸ್ ಪಾಂಡ ಕೆರೆಯ ಟ್ರ್ಯಾಕ್ ನಲ್ಲಿಯೂ ನೋಡಿದ್ದಾಗಿ ಹೇಳಿದಳು. ಜಾಗಿಂಗ್ ಮತ್ತು ಬುಶ್ ವಾಕಿಂಗ್ ಮಾಡುವದು ಅಸಹಜ ಅಲ್ಲ ಆದರೆ ಲಂಚ ಬ್ರೇಕ್ ನಲ್ಲಿ ಜಾಗಿಂಗ್ ಮಾಡುವದು ನನಗೂ ವಿಚಿತ್ರ ಅನಿಸಿತು. ಈ ಜಗನ್ನಾಥನಿಗೆ ಇನ್ನೂ ಏನೇನು ವಿಚಿತ್ರ ಹವ್ಯಾಸಗಳಿವೆಯೊ ಅಂತ ಅನಿಸಲಿಕ್ಕೆಹತ್ತಿತು. ಹಾಗೆ ಒಂದು ಶನಿವಾರ ನಾನು ಗೂಸ್ ಪಾಂಡದ ಸುತ್ತ ಒಂದು ಸುತ್ತು ಹಾಕಿ ಅಲ್ಲಿಯ ಬಾತುಕೋಳಿಗಳಿಗೆ ಉಳಿದ ಬ್ರೆಡ್ ಚೂರುಗಳನ್ನು ಹಾಕುತ್ತಾ ನಿಂತಿದ್ದೆ. ಆವಾಗ ಎಲ್ಲಿದ್ದನೋ ಈ ಜಗನ್ನಾಥ ಒಮ್ಮೆಗೆ ಪ್ರತ್ಯಕ್ಷ ನಾಗಿ ಏನ್ರೀ ನಿಮಗ ಅಷ್ಟೂ ಗೊತ್ತಾಗುದಿಲ್ವಾ, ಮನ್ಯಾಗಿನ ಹಳಸಿದ ಬ್ರೆಡ್ ತಂದು ಹಾಕಿ ಅವುಗಳನ್ನು ಅಪಾಂಗ ಮಾಡಲಿಕ್ಕೆಹತ್ತಿರಿ.. ಅವುಗಳನ್ನು ನ್ಯಾಚೂರಲ್ ಆಗಿ ಇರಲಿಕ್ಕೆ ಬಿಡ್ರಿ’ ಎನ್ನುತ್ತಾ ನನ್ನ ಉತ್ತರಕ್ಕೂ ಕಾಯದೆ ಹೊಗೆಬಿಟ್ಟ.ಅಲ್ಲಾ ಈ ಗೂಸ್ ಪಾಂಡಿಗೆ ಬಂದು ಎಷ್ಟೋ ಜನ ತಮ್ಮ ಮನಿಯಾಗಿನ ಬ್ರೆಡ್ ಮೀನುಗಳಿಗೆ , ಬಾತು ಕೋಳಿಗಳಿಗೆ ಹಾಕುವದು ಅಗದೀ ಸಾಮಾನ್ಯ. ಆದರೆ ಈ ಮನುಷ್ಯ ತನ್ನ ತಲಿ ಮ್ಯಾಲಿನ ಕೂದಲನ ನ್ಯಾಚುರಲ್ ಆಗಿ ಇರಲಿಕ್ಕೆ ಬಿಟ್ಟಿಲ್ಲ, ಆದರ ಮ್ಯಾಲ ನನಗ ಬುದ್ದಿ ಹೇಳಲಿಕ್ಕೆ ಬರತಾನ. ನಾನು ಬ್ರೆಡ್ ಹಾಳ ಮಾಡುದಕಿಂತ ಬಾತುಕೋಳಿಗಳರ ತಿನ್ನಲಿ ಅಂತ ತಂದ ಹಾಕಿದರ ನನಗ ಹಿಂಗ ಅಂದ ಹೋದ ಅಂತ ಸಿಟ್ಟು ಬಂತು. ಎಲ್ಲರೂ ಹೇಳುಹಂಗ ಭಾಳ ವಿಚಿತ್ರ ಮನುಷ್ಯ ಅಂದುಕೊಂಡೆ. ಹಾಗೆ ಮುಂದೆ ವಾಕಿಂಗ್ ಮಾಡುತ್ತಾಯಿರಬೇಕಾದರ ಜಗನ್ನಾಥ ಹೇಳಿದ್ದರಲ್ಲಿ ಏನು ತಪ್ಪಿಲ್ಲ ಅನಿಸಿಲಿಕ್ಕೆ ಹತ್ಯು.ಮೀನು ಮತ್ತು ಬಾತು ಕೋಳಿಗಳಿಗೆ ಇಂಥಾ ಪ್ರೋಸೆಸ್ ಮಾಡಿದ ಫುಡ್ ನ್ನು ಕೊಡುವಡು ಎಷ್ಟು ಸರಿ. ನಾವು ಹೀಗೆ ಮಾಡುವದರಿಂದ ಅವುಗಳ ನೈಸರ್ಗಿಕ ಜೀವನಕ್ಕೆ ತೊಂದರೆ ಆಗಬಹುದು. ಇದನ್ನೆಲ್ಲ ಬಿಟ್ಟು ನಾನು ಜಗನ್ನಾಥನ ಕೂದಲ ಬಗ್ಗೆ ಕೊಂಕು ವಿಚಾರ ಮಾಡುತ್ತಾ ಇದ್ದೆನಲ್ಲಾ ಅಂತ ನನ್ನ ಬಗ್ಗೆ ನನಗೆ ಸಿಟ್ಟು ಬಂತು. ಒಬ್ಬ ಮನುಷ್ಯ ತನ್ನ ತಪ್ಪನ್ನ ಬೇರೆಯವರು ತೋರಿಸಿದಾಗ ಅದರ ಬಗ್ಗೆ ತಲಿ ಕೇಡಿಸಿಕೊಳ್ಳದ ಬೇರೆಯರೊಳಯಿಗಿರುವ ಹುಳುಕನ್ನ ಅತೀ ಸಹಜಾಗಿ ಮುಂದು ತಂದುಕೊಂಡು ತನಗ ತಾನ ಸಮಜಾಯಿಸಿ ಕೊಟಗೊಳ್ಳತನಲ್ಲಾ ಇಂತಾದ್ದು ಮಾತ್ರ ಭಾಳ ತಪ್ಪು ಅನಿಸ್ತು. ಹಂಗ ನೋಡಿದರ ಎಲ್ಲರೂ ಹೇಳು ಹಂಗ ಈ ಜಗನ್ನಾಥ ವಿಚಿತ್ರ ಮನುಷ್ಯನೊ ಅಥವಾ ಅವನಿಗೆ ಹಂಗ ಅನ್ನೊ ಎಲ್ಲರೂ ವಿಚಿತ್ರನೊ? ಮರುದಿವಸ ಅವನ ಜೊತೆ ಮಾತಾಡೋಣ ಅಂತಂದು ಬ್ರೇಕ್ ಟೈಮ್ ದಲ್ಲಿ ಅವನನ್ನು ಹುಡುಕಿದೆ. ಎಲ್ಲಿಯೂ ಸಿಗಲಿಲ್ಲ. ಕೊನೆಗೆ ಜಗನ್ನಾಥ ಶೆಡ್ ಮುಂದಿನ ಪಾರ್ಕ್ ನ ಬೆಂಚ್ ಮೇಲೆ ಒಬ್ಬನೆ ಕುಳಿತು ಊಟ ಮಾಡುತ್ತಿದ್ದ. ಅವನ ಹತ್ತಿರ ಹೋಗಿ ‘ಅವತ್ತು ನೀವು ಹೇಳಿದ್ದು ಸರಿ.. ನಾನು ಹಾಗೆ ಮೀನು ಮತ್ತು ಬಾತು ಕೋಳಿಗಳಿಗೆ ಬ್ರೆಡ್ ಹಾಕಿದ್ದು ತಪ್ಪು’ ಅಂತ ಹೇಳಿದೆ. ‘ಪರವಾಗಿಲ್ಲ ನಿಮಗೆ ಇವಗಾದ್ರೂ ಗೊತ್ತಾಯಿತಲ್ಲ. ಅದಿರಲಿ ಈ ಆಸ್ಟ್ರೇಲಿಯಾಕ್ಕೆ ಬಂದು ಎಷ್ಟೋ ವರ್ಷವಾದರೂ ಕೆಲವರು ತಮ್ಮ ಹಾಳೆ ಚಾಳಿ ಬಿಡುವದಿಲ್ಲ. ಅಲ್ರೀ ಇಲ್ಲಿ ಬಂದ ಮೇಲೆ ಇಲ್ಲಿಯ ಪದ್ದತಿ, ಯೋಚನೆ ಗಳನ್ನೂ ಕಲಿಯಬೇಕು.” ಅಂದ. ನನಗೆ ಈ ಮನುಷ್ಯ ಯಾವಾದರ ಬಗ್ಗೆ ಹೇಳುತ್ತಿದ್ದಾನೆ ಅನ್ನುವದು ಗೊತ್ತಾಗಲಿಲ್ಲ. ಅಷ್ಟರಲ್ಲಿ ನನ್ನ ಲಕ್ಷ್ಯ ಅವನು ತಿನ್ನುತ್ತಿದ್ದ ಊಟದ ಮೇಲೆ ಹೋಯಿತು. ಅರೆ ಇದೇನಿದು..? ಅವನು ಎರಡು ಸಣ್ಣ ಸೈಜಿನ ತಟ್ಟೆ ಇಡ್ಲಿಗಳನ್ನು ಹಿಡಿದುಕೊಂಡು ಸ್ಯಾಂಡ ವಿಚ್ ತರ ತಿನ್ನುತ್ತಿದ್ದ! ನಡುವಿನಿಂದ ಕೊಬ್ರಿ ಚಟ್ನಿ ಸೋರುತ್ತಿತ್ತು.! ಅದನ್ನು ನೋಡಿ ಈ ಜಗನ್ನಾಥ ಭಾಳ ಕನಫ್ಯೂಸ್ ಸ್ಥಿತಿಯಲ್ಲಿದ್ದಾನೆ ಅನ್ನಿಸಲಿಕ್ಕೆ ಹತ್ತಿತು ಅಥವಾ ಏನನ್ನೋ ಮೀರಲಿಕ್ಕೆ ಪ್ರಯತ್ನಿಸುತ್ತಿದ್ದಾನೋ.. ಮೀರಲಿಕ್ಕೆ ಹತ್ತಿದರೆ ಎನನ್ನ..?ಒಂದನ್ನು ಮೀರಿ ಇನ್ನೊಂದನ್ನ ಅಪ್ಪಿಕೊಳ್ಳಬೇಕಾದರ ಹಿಂಗ ಆಗಬಹುದು. ಅದು ಬ್ಯಾರೆಯವರಿಗೆ ಅತಿರೇಕ ಅನ್ನಿಸಬಹುದು. ಇಡ್ಲಿಯನ್ನ ಇಡ್ಲಿ ತರ ತಿನ್ನಬೇಕು ಮತ್ತ ಸ್ಯಾಂಡ ವಿಚ್ ನ ಸ್ಯಾಂಡ ವಿಚ್ ತರ ತಿನ್ನಬೇಕು ಅನ್ನುವದು ಸಾಮಾನ್ಯ ಜ್ಞಾನ. ಆದರ ತಮ್ಮತನ ಬಿಟ್ಟಕೊಡಲಾರದ ಹೊಸದನ್ನ ಅಪ್ಪಿಕೊಳ್ಳೋ ಸಲುವಾಗಿ ಇಡ್ಲಿಯನ್ನ ಸ್ಯಾಂಡ ವಿಚ್ ತರ ತಿನ್ನ ಬಹುದು ಅನಿಸಿತು. ಹೀಗೆ ಇರಬೇಕಾದರೆ ಸ್ವಲ್ಪ ದಿವಸ ಆದ ಮ್ಯಾಲ ಗುಜ್ಜು ಹಿತೇಶ ಪೋನ್ ಮಾಡಿ ದೀಪಾವಳಿ ಹಬ್ಬವನ್ನು ಎಲ್ಲ ಭಾರತೀಯರು ಸೇರಿ ಮಾಡಲು ನಿರ್ಧರಿಸಬೇಕಾಗಿದೆ ಅಂತಲೂ ಅದಕ್ಕಾಗಿ ಕಮುನಿಟಿ ಹಾಲ್ ದಲ್ಲಿ ಮೀಟಿಂಗ್ ಕರೆದಿರುವದರಿಂದ ಬರಬೇಕು ಅಂತ ಹೇಳಿದ. ನಾನು ಅವತ್ತು ಶನಿವಾರ ಇದ್ದುದರಿಂದ ಕಮುನಿಟಿ ಹಾಲ್ ಗೆ ಹೋದೆ. ಅಲ್ಲಿ ಹೋದರೆ ಹಿಂದಿಯಲ್ಲಿ ಮಾತನಾಡುವ ಗುಜ್ಜು, ಪಂಜಾಬಿಗಳು ಮತ್ತು ಇಂಗ್ಲಿಷದಲ್ಲಿ ಮಾತನಾಡುವ ದಕ್ಷಿಣ ಭಾರತೀಯರಿಂದ ಮೀಟಿಂಗ್ ಅನ್ನುವದು ಕಪ್ಪೆ ತೂಕ ಮಾಡುವ ಆಟದಂತಿತ್ತು. ದೀಪಾವಳಿಯನ್ನು ಹೇಗೆ ಮಾಡಬೇಕೆನ್ನುವ ವಿಚಾರಕ್ಕಿಂತ ನೀವ್ಯಾಕ ಹಿಂದಿ ಮಾತಾಡುದಿಲ್ಲ ? ಹಿಂದಿ ಯಾಕ ಮಾತಾಡಬೇಕು? ನೀವು ಗುಜ್ಜುಗಳಾಗಿ ಹಿಂದಿ ಯಾಕ ಮಾತಾಡತೀರಿ ? ಅನ್ನುವ ವಾಕಯುದ್ದ ರಂಗೇರತೊಡಗಿತ್ತು. ಕೊನೆಗೆ ದುಡ್ಡು ಕೊಟ್ಟು ತಮ್ಮ ತಮ್ಮ ಹೆಸರು ಮುಂದೆ ಬರುವ ಹಾಗೆ ಮಾಡಿಕೊಳ್ಳುವ ತೆವಲಿರುವ ತೆಲಗು ಮತ್ತು ಕನ್ನಡ ಮಾತನಾಡುವ ಡಾಕ್ಟರ್, ಡೆಂಟಿಸ್ಟಗಳು ತಾವು ಊಟದ ಖರ್ಚು ಕೊಡುವದಾಗಿ ಹೇಳಿ ಎಲ್ಲರನ್ನೂ ದಂಗು ಬಡಿಸಿದರು. ಹಣ ಅಂದರೆ ಹೆಣ ಅಲ್ಲ ಎಲ್ಲರೂ ಬಾಯಿ ಬಿಡಲೆಬೇಕು ಅಂದು ಕೊಂಡಿರುವ ಗುಜ್ಜುಗಳಿಗಂತೂ ಈ ಡಾಕ್ಟರ್, ಡೆಂಟಿಸ್ಟಗಳು ವಿಚಿತ್ರ ಪ್ರಾಣಿಗಳ ತರ ಕಾಣಿಸಿದರು. ಟ್ಯಾಕ್ಸಿ ನಡೆಸುವ ಪಂಜಾಬಿಗಳೂ ಬಹಳ ಅಪನಂಬಿಕೆಯಿಂದಲೇ ಹೂಗುಟ್ಟಿದರು. ಕೊನೆಗೆ ಎರಡು ವಾರಗಳ ನಂತರ ನಡೆದ ದೀಪಾವಳಿ ಉತ್ಸವ, ಲಕ್ಷ್ಮಿ ಪೂಜೆ ಯಿಂದ ಶುರುವಾಗಿ ಸ್ವಲ್ಪ ಹೊತ್ತಿಗೆ ಲಕ್ಷ್ಮಿ ಫೋಟೋವನ್ನು ಒಂದು ಬದಿಗೆ ಸರಿಸಿಟ್ಟನಂತರ ಅಕ್ಷರಶಃ ಹಿಂದಿ ಹಾಡುಗಳನ್ನು ಕಿರುಚುವ ನೈಟ್ ಕ್ಲಬ್ ಅನಿಸತೊಡಗಿತು. ಲೋಕಲ್ ಸೆವೆನ್ ನ್ಯೂಸ್ ಟಿವಿಯವರನ್ನು ಕವರೇಜ ಗಾಗಿ ಕರೆಸಿದ್ದ ದಕ್ಷಿಣ ಭಾರತದ ಡೆಂಟಿಸ್ಟ್-ಡಾಕ್ಟರ್ ಗಳು ಅವರ ಮುಂದೆ ತಮ್ಮ ಕ್ಲಿನಿಕ್ ಗಳ ಬ್ಯಾನರ್ ಗಳನ್ನು ಹಿಡಿದಿಕೊಂಡು ತಾವೇ ಭಾರತದ ಸಾಂಸ್ಕೃತಿಕ ರಾಯಭಾರಿಗಳೆಂದು ಬಿಂಬಿಸಿಕೊಳ್ಳತೊಡಗಿದರು. ಒದರಿಕೊಳ್ಳುತ್ತಿದ್ದ ಹಿಂದಿ ಹಾಡುಗಳು ತಮಗೆ ಸ್ವಲ್ಪವೂ ಅರ್ಥವಾಗ ದಿದ್ದರೂ ಟಿವಿ ಯಲ್ಲಿ ತಮ್ಮ ಮುಖ ಬರಲಿ ಎಂದು ಅಸಡಾ ಬೀಸಡಾ ಆಗಿ ಮೈ ಅಲಗಾಡಿಸುತ್ತಿದ್ದದ್ದು ಸ್ವಲ್ಪ ಅತಿ ಎನಿಸಿತು. ಇವರು ದುಡ್ಡು ಕೊಟ್ಟದ್ದರಿಂದ ಸುಮ್ಮನಿದ್ದ ಪಂಜಾಬಿಗಳು ಟಿವಿ ಯವರು ಹೋದ ತಕ್ಷಣ ಈ ಡಾಕ್ಟರ್, ಡೆಂಟಿಸ್ಟಗಳನ್ನು ಹಿಂದೆ ಸರಿಸಿ ಬಲ್ಲೆ-ಬಲ್ಲೆ ಎಂದು ಕುಣಿಯತೊಡಗಿದರು. ಈ ಎಲ್ಲದರ ನಡುವೆ ಜಗನ್ನಾಥನ ಮುಖ ನನಗೆ ಎಲ್ಲೋ ಕಂಡಂತಾಯಿತಾದರೂ ಹುಡುಕಿದರೆ ಅವನು ಸಿಗಲೆ ಇಲ್ಲ. ಬಂದಿದ್ದನೊ ಇಲ್ಲವೊ ಗೊತ್ತಾಗಲಿಲ್ಲ. ಇಂಥಾ ಕಾರ್ಯಕ್ರಮದಾಗ ನೋಡುದು ಏನದ ಅಂತ ಅವನಿಗೆ ಅನಿಸಿರಲಿಕ್ಕು ಸಾಕು. ಹೀಗೆ ಎಲ್ಲರಿಂದ ದೂರವಾಗಿ ದ್ವೀಪವಾದ ಜಗನ್ನಾಥ ತನ್ನಷ್ಟಕ್ಕೆ ತಾನೇ ಇರುತ್ತಾ ದಿನಕ್ಕೆ ಮೂರು ಸಲ ಇಸ್ತ್ರಿ ಮಾಡಿದ ಯೂನಿಫಾರ್ಮ್ ಬದಲಿಸುತ್ತಾ ಇರುವತನಕ ಎಲ್ಲ ಸುಸೂತ್ರವಾಗಿತ್ತು. ಆದರೆ ಯಾವಾಗ ಅವನ ಮನೆಯ ದೊಡ್ಡ ಬ್ಯಾಕ್ ಯಾರ್ಡ್ ನಲ್ಲಿ ಸ್ಕ್ರ್ಯಾಪ್ ಮೆಟಲ್ ನಿಂದ ಮಾಡಿದ ಬೊಂಬೆಗಳು ಮೇಲೆದ್ದವೊ ಎಲ್ಲರ ಬಾಯಿಗಳೂ ಚಾಟರ್ ಬಾಕ್ಸ್ ಗಳಾದವು. ಜಗನ್ನಾಥನ ಮನೆಯ ಹಿಂದುಗಡೆಯ ಫೆನ್ಸ್ ಸಣ್ಣದಿದ್ದರಿಂದ ಎಲ್ಲರಿಗೂ ಅವನ ಹಿತ್ತಲು ಕಾಣಿಸುತ್ತಿತ್ತು. ಕೆಲಸ ಮುಗಿದ ಮೇಲೆ ಜಗನ್ನಾಥ ಸ್ನಾನ ಮಾಡಿ ಮತ್ತೆ ಹೊಸ ಒಗೆದು ಇಸ್ತ್ರಿ ಮಾಡಿದ ಯೂನಿಫಾರ್ಮ್ ಹಾಕಿಕೊಂಡು ಏನೊ ಮಾಡುತ್ತಿರುವಾದನ್ನು ಕೆಲವರು ಗಮನಿಸಿದ್ದರು. ಆದರೆ ಇದು ತಮ್ಮ ಮನಸುಗಳ ಮುಳ್ಳು ಗಿಡಗಳನ್ನು ಜಗನ್ನಾಥ ತನ್ನ ಮನೆಯ ಹಿತ್ತಲಲ್ಲಿ ಬೆಳಸುತ್ತಿದ್ದಾನೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ನೋಡು -ನೋಡುತ್ತಿದ್ದಂತೆ ಸ್ಕ್ರ್ಯಾಪ್ ಮೆಟಲ್ ನ್ನು ಕತ್ತರಿಸಿ, ವೆಲ್ಡ್ ಮಾಡಿ ಬಣ್ಣ ಬಳಿದುಕೊಂಡ ಆಕೃತಿಗಳು ಹಿತ್ತಲ ತುಂಬಾ ಎದ್ದು ನಿಂತವು. ಮೊದಲು ಅವು ಏನು ಎಂದು ಯಾರಿಗೂ ಗೊತ್ತಾಗದಿದ್ದರೂ ದಿಟ್ಟಿಸಿ ನೋಡಿದಾಗ ನಮ್ಮೆಲ್ಲರ ಮುಖಗಳು ಅಲ್ಲಿ ಗೋಚರಿಸಹತ್ತಿದವು. ಒಂದು ತರಹದ ರೋಮಾಂಚನವನ್ನು ಅನುಭವಿಸಲು ಸಿದ್ದರಾದ ಕೆಲವರು ಅಲ್ಲಿ ತಮ್ಮ ತಮ್ಮ ಮುಖಗಳನ್ನು ಹುಡುಕಹತ್ತಿದರು. ನೋಡ ನೋಡುತ್ತಿದ್ದಂತೆಯೆ ನಾ ಸೇರ್ ನೀ ಸೇರ್ ಆನುವಂತೆ ದೊಡ್ಡ ಜನಜಂಗುಳೆಯೆ ಸೇರಿತು. ಸಹಜ ಕುತೂಹಲದಿಂದ ಹೋದ ನನಗೂ ಅಲ್ಲಿ ನನ್ನ ಮುಖ ನೋಡಿ ಸಿಟ್ಟೆ ಬಂತು. ಗೂಸ್ ಪಾಂಡಿನ ಕೆರೆಯಲ್ಲಿ ಮೀನಿಗೆ ಬ್ರೆಡ್ ಹಾಕುತ್ತಿರುವ ನಾನು. ಅವುಗಳ ನೈಸರ್ಗಿಕ ಜೀವನಕ್ಕೆ ಕಲ್ಲು ಹಾಕುತ್ತಿರುವೆ ನೇನೊ ಎನ್ನುವಂತಹ ಟಿಪಿಕಲ್ ಭಾರತೀಯ ಮುಖ. ಹಾಗೆ ಆ ಕಡೆ ಈ ಕಡೆ ನೋಡಲಾಗಿ ಗುಜ್ಜು ಹಿತೇಶನ ತರ ಇರುವ ಆಕೃತಿಯು ಕಾಣಿಸಿತು. ಅವನ ಹಿಂದೆ ಬೋರ್ಡ್ ಇದ್ದು ಅದರಲ್ಲಿ ಮಸಾಲಾ ಬದಲು ವಾಸನಾ ರೆಸ್ಟೋರಂಟ್ ಅಂತಲೂ ‘ವಿ ಕುಕ್ ಒನ್ಲಿ ಒನ್ಸ್ ಎ ವೀಕ್ ಅಂಡ್ ಸರ್ವ ಸೇಮ ಫುಡ್ ಎವರೀಡೆ ಆಲ್ ವೀಕ್ ‘ ಅಂತ ಬರೆದಿತ್ತು. ತಂಗಳನ್ನು ವಾರವಿಡಿ ಫ್ರಿಡ್ಜ್ ನಲ್ಲಿಟ್ಟು ಬಿಸಿ ಮಾಡಿ ಸರ್ವ ಮಾಡುವ ಹಿತೇಶನ ನಡೆ ಈ ತರ ಮೂಡಿಬಂದಿತ್ತು. ಇಷ್ಟೇ ಅಲ್ಲ ರಾಮ್, ದಿನೇಶ್ ರಘು ಅವರೂ ತಮ್ಮ ಸ್ಟೇತ ಸ್ಕೋಪ್ , ಹಲ್ಲು ಕೀಳುವ ಇಕ್ಕಳ ಇವುಗಳನ್ನು ಹಿಡಿದುಕೊಂಡು ನಿಂತಿದ್ದರು. ಅವರ ಹಿಂದಿನ ಪಾಕೆಟ್ ನಲ್ಲಿ ನೋಟಿನ ಕಂತೆಗಳು ಹೊರಚೆಲ್ಲುವ ಹಾಗೆ ಜೋತು ಬಿದ್ದಿದ್ದವು.ಅವರ ವಾರೆ ನೋಟ ಒಂದು ಬೋರ್ಡ್ ಮೇಲೆ ಇತ್ತು. ಅದರ ಮೇಲೆ ಈ ತರ ಬರೆಯಲಾಗಿತ್ತು. “ವಿ ಕ್ರಿಯೆಟ್ ಸ್ಮೈಲ್ ಆನ್ ಫೇಸ್, ಆದರೆ ಅದು ನಿಮ್ಮ ಮುಖದ ಮೆಲಲ್ಲ. ನಮ್ಮ ಮುಖದ ಮೇಲೆ” ಇದನ್ನೆಲ್ಲಾ ನೋಡಿದ ಮೇಲೆ ಜಗನ್ನಾಥ ಒಬ್ಬ ಆರ್ಟಿಸ್ಟ್ ಇರಬೇಕು ಇಲ್ಲ ಶತಮೂರ್ಖ ಇರಬೇಕು ಅನಿಸಹತ್ತಿತು. ಮೊದಮೊದಲು ಅವನನ್ನು ನೋಡು ಇವಳನ್ನು ನೋಡು ಎಂದು ನಗಾಡಲು ಶುರುವಿಟ್ಟು ಕೊಂಡ ಜನ ಕೊನೆಗೆ ತಮ್ಮ ಹಂಗ ಇರುವ ಚಹರೆ ನೋಡಿದಾಗ ಬೆಚ್ಚಿ ಬೀಳುತ್ತಿದ್ದರು. ಒಬ್ಬ ಹೆಣ್ಣುಮಗಳು ತನ್ನ ನ್ಯಾಪಿ ಹಾಕಿಕೊಳ್ಳುವ ಎರಡೂ ಕೂಸುಗಳನ್ನು ಈಜು, ಭರತನಾಟ್ಯ, ಮತ್ತು ಗಣಿತದ ಕ್ಲಾಸಿಗೆ ದೂಡುತ್ತಿರುವದೂ ಸ್ವಲ್ಪ ಅತಿಯೆನಿಸಿತು. ಕೊನೆಗೆ ಮಿಲ್ಕಾ ಸಿಂಗನ ಟ್ಯಾಕ್ಸಿಯಲ್ಲಿ ಅವನ ಮೇಲೆ ಕುಳಿತ ಸೀರೆಯುಟ್ಟ ಮಹಿಳೆ ಯಾರು ಎಂದು ಎಲ್ಲರೂ ತಲೆ ಕೆರದುಕೊಳ್ಳತೊಡಗಿದರು. ಅವಳ ಕೊರಳಲ್ಲಿ ಸ್ಟೇತಸ್ಕೋಪ್ ಇದ್ದುದು ಹಲವರಿಗೆ ಹಿಡಿದು ಬಿಟ್ಟಹಾಗೆ ಆಗುವಂತಾಯಿತು. ದೀಪಾವಳಿ ದಿನ ಕುಣಿದು ಕುಪ್ಪಳಿಸಿದ್ದ ಮುಖಗಳೆಲ್ಲ ಇಲ್ಲಿ ತಮ್ಮ ನಿಜ ರೂಪ ಕಂಡು ಇಂಗು ತಿಂದ ಮಂಗನತಾಗಿ ಹೊರಬೀಳುತ್ತಿದ್ದರು. ಯಾರೊಂದಿಗೂ ಸೇರಿ ಮಾತನಾಡದ ಜಗನ್ನಾಥ ಇಷ್ಟೆಲ್ಲ ಜನರ ಮನೋವ್ಯಾಪಾರ ನೋಡಿದ್ದೇಲ್ಲಿ ಎಂದು ನನಗೆ ತಲೆ ಕೆರೆದುಕೊಳ್ಳುವ ಹಾಗಾಯಿತು. ಇದೆಲ್ಲದರ ನಡುವ ನಮ್ಮ ಜಗನ್ನಾಥ ಎಲ್ಲಿ ಇದ್ದಾನ ಎಂದು ಹುಡುಕಿತ್ತರಲಾಗಿ ಸಣ್ಣ ವೆಲ್ಡಿಂಗ್ ಮೆಷಿನ್ ಹಿಡಿದುಕೊಂಡ ಆಕೃತಿಯೊಂದು ಕಾಣಿಸಿತು. ಅವನ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿನ್ನೆ ಕೂತಿತ್ತು. ಇನ್ನೊಂದು ಸೋಜಿಗ ಅಂದರೆ ಈ ಸ್ಕ್ರ್ಯಾಪ್ ಮೆಟಲ್ ಮೂಲಕ ಮಿನಿ ಭಾರತದ ಪ್ರಜೆಗಳೆಲ್ಲ ಬೆತ್ತಲಾಗಿದ್ದರೆ ಮೂಲೆಯಲ್ಲಿ ಗಾಂಧಿ ತಾತನ ತರ ಕಾಣುವ ಕಡ್ಡಿ ಆಕಾರಕ್ಕೆ ಸಣ್ಣ ಬಟ್ಟೆ ಹೊದಿಸಲಾಗಿತ್ತು ಮತ್ತು ಅದನ್ನು ಈ ಜನ ಜಂಗುಳಿಯಿಂದ ವಿಮುಖವಾಗಿ ನಿಲ್ಲಿಸಲಾಗಿತ್ತು.