

Dhanya Balakrishnan: ಮೂಲತಃ ಕರುನಾಡಿನವರೇ ಆದ ನಟಿ ಧನ್ಯಾ ಬಾಲಕೃಷ್ಣನ್, ಕನ್ನಡಿಗರಿಗಿಂತ ತೆಲುಗು ಪ್ರೇಕ್ಷಕರಿಗೆ ಹೆಚ್ಚು ಪರಿಚಯ. ಕಾರಣ, ನಟಿ ಅಭಿನಯದ ಬಹುತೇಕ ಸಿನಿಮಾಗಳು ತೆಲುಗಿಗೆ ಸೇರಿವೆ. ಟಾಲಿವುಡ್ನಲ್ಲಿ ಉತ್ತಮ ಜನಮನ್ನಣೆ ಗಳಿಸಿರುವ ಧನ್ಯಾ, ತಮ್ಮ ಮುಂಬರುವ "ಕೃಷ್ಣ ಲೀಲಾ" ಚಿತ್ರದ ಕಾರ್ಯಕ್ರಮವೊಂದರಲ್ಲಿ ಒಂದಷ್ಟು ಕುತೂಹಲಕಾರಿ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಯುವ ನಾಯಕ ದೇವನ್ ನಟಿಸಿ ನಿರ್ದೇಶಿಸಿರುವ ಈ ಚಿತ್ರ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ತೆರೆ ಕಾಣಲಿದೆ. ಇತ್ತೀಚೆಗೆ, ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರತಂಡ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ವೇದಿಕೆಯಲ್ಲಿ ಮಾತನಾಡಿದ ನಾಯಕಿ ಧನ್ಯಾ ಬಾಲಕೃಷ್ಣನ್, "ಕೃಷ್ಣ ಲೀಲಾ ನನ್ನ ವೃತ್ತಿಜೀವನಕ್ಕೆ ಮತ್ತೆ ಒಂದು ಮಹತ್ವದ ತಿರುವು ನೀಡಲಿದೆ. ಸಿನಿಮಾದ ಮೇಲೆ ನಮಗೆ ಅಪಾರ ವಿಶ್ವಾಸವಿದೆ. ನಟನೆಯ ವಿಷಯಕ್ಕೆ ಬಂದಾಗ ನಾನು ನನಗಾಗಿ ಹಲವು ಷರತ್ತುಗಳನ್ನು ಹಾಕಿಕೊಂಡಿದ್ದೇನೆ" ಎಂದರು.
"ಈ ಕಾರಣಗಳಿಂದಲೇ ಇಂದು ನಾನು ಸ್ಟಾರ್ ಆಗಿ ಹೊರಹೊಮ್ಮಲು ಸಾಧ್ಯವಾಗಿಲ್ಲ. ಕೆಲವು ರೊಮ್ಯಾಂಟಿಕ್ ಮತ್ತು ಕಿಸ್ಸಿಂಗ್ ದೃಶ್ಯಗಳನ್ನು ಮಾಡದಿರಲು ನಾನು ಗಟ್ಟಿ ನಿರ್ಧಾರ ಮಾಡಿದ್ದೀನಿ. ಹೀಗಾಗಿಯೇ ನಾನು ಹಲವು ಬಿಗ್ ಬಜೆಟ್ ಹಾಗೂ ದೊಡ್ಡ ಬ್ಯಾನರ್ ಸಿನಿಮಾಗಳನ್ನು ಬಿಡಬೇಕಾಯಿತು. ಒಂದು ವೇಳೆ ಅಂತಹ ದೃಶ್ಯಗಳಲ್ಲಿ ನಟಿಸಿದ್ದರೆ, ಇಂದು ನನಗೂ ಸ್ಟಾರ್ ಎಂಬ ಸ್ಥಾನಮಾನ ಸಿಕ್ಕಿರುತ್ತಿತ್ತು" ಎಂದು ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).