ವಿಜಯವಾಣಿಯ ರುದ್ರಣ್ಣ ಮಾಹಿತಿ ಆಯುಕ್ತರಾಗಿ ನೇಮಕ

Rudranna Harthikote
Published on

ಬೆಂಗಳೂರು: ರಾಜ್ಯ ಮಾಹಿತಿ ಆಯೋಗದ ಆಯುಕ್ತರ ನೇಮಕಕ್ಕೆ ರಾಜ್ಯ ಸರ್ಕಾರ ಕಳುಹಿಸಿದ್ದ ಪ್ರಸ್ತಾವನೆಗೆ ರಾಜ್ಯಪಾಲರು ಗುರುವಾರ ಅಂಕಿತ ಹಾಕಿದ್ದಾರೆ. ಮುಖ್ಯ ಆಯುಕ್ತರಾಗಿ ನಿವೃತ್ತ ಐಪಿಎಸ್ ಅಧಿಕಾರಿ ಆಶಿತ್ ಮೋಹನ್ ಪ್ರಸಾದ್ ಹೆಸರು ಅಂತಿಮಗೊಂಡರೆ, ವಿಜಯವಾಣಿಯ ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಕೆ. ರಾಮನ್, ಯುವ ಬರಹಗಾರ ಹರೀಶ್ ಕುಮಾರ್, ಸಾಮಾಜಿಕ ಕಾರ್ಯಕರ್ತ ನಾರಾಯಣ ಜಿ. ಚನ್ನಾಳ್, ಪತ್ರಕರ್ತರಾದ ಎಸ್. ರಾಜಶೇಖರ್, ಕೆ. ಬದ್ರುದ್ದೀನ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಬಿ.ಆರ್. ಮಮತಾ ಮಾಹಿತಿ ಆಯುಕ್ತರಾಗಿ ಮುಂದಿನ ಮೂರು ವರ್ಷ ಜವಾಬ್ದಾರಿ ನಿಭಾಯಿಸುವರು.

ಪರಿಚಯ: ನಾಡಿನ ಪತ್ರಿಕಾ ವಲಯದಲ್ಲಿ ವಿಶೇಷ ಛಾಪು ಮೂಡಿಸಿರುವ ರುದ್ರಣ್ಣ ಹರ್ತಿಕೋಟೆ, ವಿಜಯವಾಣಿ ಆರಂಭದಿಂದಲೂ ಜತೆಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹರ್ತಿಕೋಟೆ ಗ್ರಾಮದವರಾದ ಅವರು ಪ್ರೌಢ, ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದರು. ಕಾಲೇಜು ದಿನಗಳಲ್ಲೇ ಬರವಣಿಗೆ ಗೀಳು ಅಂಟಿಸಿಕೊಂಡು, ಸಂಯುಕ್ತ ಕರ್ನಾಟಕ ಮೂಲಕ ಪತ್ರಿಕಾ ಕ್ಷೇತ್ರ ಪ್ರವೇಶಿಸಿ ವಿವಿಧ ಜಿಲ್ಲೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದರು. ಬಳಿಕ ಜನವಾಹಿನಿ, ಉದಯವಾಣಿಯಲ್ಲೂ ಕರ್ತವ್ಯ ನಿರ್ವಹಿಸಿದ್ದರು.

Vijay Anand Sankeshwar

ಕಳೆದ 33 ವರ್ಷಗಳಿಂದ ಪತ್ರಿಕಾರಂಗದಲ್ಲಿ ತೊಡಗಿಕೊಂಡಿರುವ ಅವರಿಗೆ ಭಾರತೀಯ ಪತ್ರಿಕಾ ಮಂಡಳಿ ಕೊಡಮಾಡುವ ರಾಷ್ಟ್ರೀಯ ಉತ್ಕ ೃ್ಟತಾ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಎಫ್​ಕೆಸಿಸಿಐ ಪತ್ರಿಕೋದ್ಯಮ ಪ್ರಶಸ್ತಿ ಮುಂತಾದ ಪುರಸ್ಕಾರಗಳು ಸಂದಿವೆ. ಅವರು ಮಾಧ್ಯಮ ಅಕಾಡೆಮಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.

ಸಂಕೇಶ್ವರರ ಅಭಿನಂದನೆ: ಮಾಹಿತಿ ಆಯೋಗದ ಆಯುಕ್ತರಾಗಿ ನೇಮಕವಾಗಿರುವ ರುದ್ರಣ್ಣ ಹರ್ತಿಕೋಟೆ ಅವರನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹಾಗೂ ಎಂಡಿ ಡಾ. ಆನಂದ ಸಂಕೇಶ್ವರ ಅಭಿನಂದಿಸಿದ್ದಾರೆ. ‘ನಮ್ಮ ಬಳಗದ ಸದಸ್ಯರೊಬ್ಬರು ಉನ್ನತ ಹುದ್ದೆಗೆ ಏರಿರುವುದು ಸಂತಸದ ಸಂಗತಿ. ಅವರಿಂದ ನಾಡಿಗೆ ಒಳಿತಾಗಲಿ’ ಎಂದು ಶುಭಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net