

ಪುಣೆ: ಪ್ರಸ್ತುತ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡುತ್ತಿರುವ ಭಾರತ (Team India) ಪ್ರವಾಸಿ ತಂಡದ ಎದುರು 2-1 ಮುನ್ನಡೆಯನ್ನು ಸಾಧಿಸಿದ್ದು, ಸರಣಿಯ ಮೂರನೇ ಪಂದ್ಯದಲ್ಲಿ ಉಂಟಾದ ಅನಿರೀಕ್ಷಿತ ಸೋಲಿನಿಂದ ಪುಟಿದೇಳು ಭರ್ಜರಿ ತಯಾರಿ ನಡೆಸುತ್ತಿದೆ. ಇನ್ನೂ ಸರಣಿಯ ನಾಲ್ಕನೇ ಪಂದ್ಯ ಜನವರಿ 31ರಂದು ಪುಣೆಯಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳಲು ಭಾರತ ತಂಡ ಸಜ್ಜಾಗಿದೆ.
ಇನ್ನೂ ಸರಣಿಯ ಮೂರನೇ ಪಂದ್ಯದಲ್ಲಿ ಅನಿರೀಕ್ಷಿತ ಸೋಲುಂಡಿದ್ದ ಭಾರತ ತಂಡಕ್ಕೆ (Team India) ಸ್ಟಾರ್ ಆಟಗಾರರ ಗಾಯದ ಸಮಸ್ಯೆ ಕೂಡ ಇನ್ನಿಲ್ಲದಂತೆ ಕಾಡಿತ್ತು. ಇದೀಗ ನಾಲ್ಕನೇ ಪಂದ್ಯಕ್ಕೂ ಮುನ್ನ ಶುಭ ಸುದ್ದಿಯೊಂದು ಲಭಿಸಿದ್ದು, ಗಾಯಕ್ಕೆ ತುತ್ತಾಗಿದ್ದ ಸ್ಟಾರ್ ಆಟಗಾರನೋರ್ವ ಗುಣಮುಖರಾಗಿದ್ದು, ನಾಲ್ಕನೇ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡುವ ಮುನ್ಸೂಚನೆಯನ್ನು ನೀಡಿದ್ದಾರೆ. ಈ ಬಗ್ಗೆ ಟೀಮ್ ಇಂಡಿಯಾ ಸಹಾಯಕ ಕೋಚ್ ಕೂಡ ಮಾತನಾಡಿದ್ದಾರೆ.
ಮೂರನೇ ಪಂದ್ಯಕ್ಕೂ ಮುನ್ನ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಬಿದ್ದಿದ್ದ ಮ್ಯಾಚ್ ಫಿನಿಶರ್ ಎಂದೇ ಖ್ಯಾತಿ ಪಡೆದಿರುವ ರಿಂಕು ಸಿಂಗ್ ಫಿಟ್ ಆಗಿದ್ದು, ನಾಲ್ಕನೇ ಪಂದ್ಯದಲ್ಲಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಈ ಬಗ್ಗೆ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಕೇಟ್, ಮೊದಲ ಪಂದ್ಯದಲ್ಲಿ ಆಡುವ ವೇಳೆ ಗಾಯಗೊಂಡಿದ್ದ ರಿಂಕು ಸಿಂಗ್ ಈಗ ಫಿಟ್ ಆಗಿದ್ದು, ಸರಣಿಯ ನಾಲ್ಕನೇ ಪಂದ್ಯ ಆಡಲು ಸಜ್ಜಾಗಿದ್ದಾರೆ. ಈಗಾಗಲೇ ಆತ ಅಭ್ಯಾಸ ನಡೆಸುತ್ತಿದ್ದು. ನಾಳಿನ ಪಂದ್ಯದಲ್ಲಿ ಆಡಲು ಫಿಟ್ ಆಗಿದ್ದಾನೆ ಎಂದು ಟೀಮ್ ಇಂಡಿಯಾ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಕೇಟ್ ತಿಳಿಸಿದ್ದಾರೆ
ಇನ್ನೂ ರಿಂಕು ಸಿಂಗ್ ಕಮ್ಬ್ಯಾಕ್ ಮಾಡುವುದು ಪಕ್ಕಾ ಆಗುತ್ತಿದ್ದಂತೆ ತಂಡದಲ್ಲಿ ಬದಲಾವಣೆಯಾಗುವುದು ಖಚಿತವಾಗಿದೆ. ರಿಂಕು ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ವಿಕೆಟ್ ಕೀಪರ್, ಬ್ಯಾಟರ್ ಧ್ರುವ್ ಜುರೆಲ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದು, ನಾಲ್ಕನೇ ಪಂದ್ಯದಲ್ಲಿ ಧ್ರುವ್ ಬದಲಿಗೆ ರಿಂಕುಗೆ ಸ್ಥಾನ ಸಿಗುವುದು ಪಕ್ಕಾ ಆಗಿದೆ.
ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿತು. ಆರಂಭಿಕ ಬೆನ್ ಡಕೆಟ್ (51 ರನ್ 28 ಎಸೆತ 7 ಬೌಂಡರಿ, 2 ಸಿಕ್ಸರ್) ಅರ್ಧಶತಕ ಗಳಿಸಿದರೆ, ಲಿಯಾಮ್ ಲಿವಿಂಗ್ಸ್ಟೋನ್ (43 ರನ್ 24 ಎಸೆತ, 1 ಬೌಂಡರಿ, 5 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಟೀಮ್ ಇಂಡಿಯಾ ಪರ ವರುಣ್ ಚಕ್ರವರ್ತಿ (5/24) ಅದ್ಭುತ ಪ್ರದರ್ಶನ ನೀಡಿದರು. ಆದರೆ, ಟೀಮ್ ಇಂಡಿಯಾದ ಬ್ಯಾಟಿಂಗ್ ವೈಫಲ್ಯದಿಂದ ಸೋಲು ಅನುಭವಿಸಬೇಕಾಯಿತು.